Leopard Spotted: ಹಾವೇರಿಯಲ್ಲಿ ಚಿರತೆ ಪ್ರತ್ಯಕ್ಷ! ಮನೆಯಿಂದ ಓಡಿದ ಗ್ರಾಮಸ್ಥರು...
ಹಾವೇರಿ, ಆಗಸ್ಟ್ 06: ಹಾವೇರಿ ಜಿಲ್ಲೆಯ ವಿವಿಧ ತಾಲೂಕುಗಳ ವ್ಯಾಪ್ತಿಯಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿವೆ. ಅರೆಮಲೆನಾಡು ಜಿಲ್ಲೆಯಾಗಿರುವ ಇಲ್ಲಿ ಕಳೆದ ಕೆಲವು ತಿಂಗಳುಗಳಿಂದ ಈ ಘಟನೆ ಮರುಕಳಿಸುತ್ತಿದೆ. ಇದೀಗ ಕಾಡಲ್ಲಿರಬೇಕಾದ ಚಿರತೆಯೊಂದು ಗ್ರಾಮದ ಮನೆಯೊಂದಕ್ಕೆ ನುಗ್ಗಿದ ಘಟನೆ ರಾಣೆಬೆನ್ನೂರು ತಾಲೂಕಿನ ನಾಡಿಗೇರ ಓಣಿಯಲ್ಲಿ ನಡೆದಿದೆ. ಓಣಿಯ ನಿವಾಸಿಗಳು ಭಯಭೀತರಾಗಿದ್ದಾರೆ.
ಇಂದು ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕಾಡಿನಲ್ಲಿ, ಕಾಡಂಚಿನ ಪ್ರದೇಶಗಳಲ್ಲಿ, ಜಮೀನುಗಳಲ್ಲಿ ಕಂಡು ಬರುವ ಚಿರತೆಯು ನಗರದ ಮನೆಯೊಂದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ರಾಣೆಬೆನ್ನೂರಿನ ನಾಡಿಗೇರಿ ಓಣಿಯಲ್ಲಿರುವ ಪಿಟಿ ಕಾಕಿ ಅವರ ಮನೆಯಲ್ಲಿ ಮೆಟ್ಟಿಲುಗಳ ಮೇಲೆ ಚಿರತೆ ಕೂತಿದ್ದು ನೋಡಿ ಜನರ ಗಾಬರಿಗೊಂಡಿದ್ದಾರೆ. ಮನೆ ಮಾಲೀಕರು ಕೂಡಲೇ ಮನೆಯಿಂದ ಹೊರ ಓಡಿದ್ದಾರೆ. ಇಡೀ ಓಣಿಯ ಜನರು ಆತಂಕಗೊಂಡಿದ್ದು, ಕೂಡಲೇ ಚಿರತೆ ಹಿಡಿಯುವಂತೆ ಆಗ್ರಹಿಸಿ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಜನರು ಗುಂಪು ಸೇರುತ್ತಿದ್ದಂತೆ ಅಲ್ಲಿಂದ ಪಕ್ಕದ ಕುರುಬಗೇರಿ ಓಣಿಗೆ ಈ ಚಿರತೆ ನುಗ್ಗಿದೆ. ಅಲ್ಲಿಯ ನಿವಾಸಿಗಳು ಜೀವ ಭಯದಿಂದ ಮನೆಯಿಂದ ಕಾಲ್ಕಿತ್ತಿದ್ದಾರೆ. ಇದನ್ನು ಕಂಡು ಸಾರ್ವಜನಿಕರು ಸರ್ಕಾರ, ಅರಣ್ಯ ಇಲಾಖೆ ಕೂಡಲೇ ಚಿರತೆ ಸೆರೆ ಹಿಡಿದು ಸಂಭವನೀಯ ಅನಾಹುತಗಳು, ಜೀವನ ಹಾನಿ ತಪ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಬ್ಯಾಡಗಿ ತಾಲೂಕಿನ ಬಿಸಲಹಳ್ಳಿ ಬಳಿ ಗುರುವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿತ್ತು. ಬೆಳಗ್ಗೆ ಮೆಕ್ಕೆ ಜೋಳಕ್ಕೆ ನೀರು ಹಾಯಿಸಲು ಹೋದಾಗ ರೈತನಿಗೆ ಚಿರತೆ ಕಾಣಿಸಿದೆ. ಚಿರತೆ ಹಿಡಿಯಲು ಬೋನ್ ಅಳವಡಿಸುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಗ್ರಾಮಸ್ಥರದಲ್ಲಿ ಆತಂಕ ಮನೆ ಮಾಡಿತ್ತು. ಈ ಗ್ರಾಮದಲ್ಲಿ ಕಾಣಿಸಿಕೊಳ್ಳು ಮೊದಲು ಚಿರತೆ ಬೆಳಕೇರಿ, ಅಣೂರು, ಬನ್ನಿಹಟ್ಟಿ, ಗಡ್ಡದಹೊಸಳ್ಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸಹ ಚಿರತೆ ಕಾಣಿಸಿಕೊಂಡಿತ್ತು. ಇದೇ ಗ್ರಾಮಗಳ ಸುತ್ತಮುತ್ತಲಿನ ಭಾಗಗಳಲ್ಲಿ ಚಿರತೆ ಓಡಾಡುತ್ತಿದೆ.
ಸದ್ಯ ರಾಣೆಬೆನ್ನೂರಲ್ಲಿ ಕಾಣಿಸಿಕೊಂಡಿದೆ. ಇದೇನು ಮೊದಲಲ್ಲ ಹಾವೇರಿ ಜಿಲ್ಲೆ ವ್ಯಾಪ್ತಿಯ ವಿವಿಧ ಭಾಗಗಳಲ್ಲಿ ಆಗಾಗ ಚಿರತೆ ಕಾಣುವುದು ಸಾಮಾನ್ಯ ಎಂಬಂತಾಗಿದೆ. ಈ ಬಗ್ಗೆ ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಎಚ್ಚರಿಕೆ ವಹಿಸಬೇಕಿದೆ.












Click it and Unblock the Notifications