ಹಾವೇರಿ ದುರಂತ: ಪ್ರಾಣರಕ್ಷಣೆಗೆ ಪುಣೆ ಟೆಕ್ಕಿಯ ಹರಸಾಹಸ
ಹಾವೇರಿ, ನ.15: ಬೆಂಗಳೂರಿನಿಂದ ಮುಂಬೈಗೆ ಹೊರಟಿದ್ದ ಸೆಮಿ ಲಕ್ಷುರಿ ವೋಲ್ವೋ ಬಸ್ ಹಾವೇರಿ ಬಳಿ ಗುರುವಾರ ಮುಂಜಾನೆ ಅಫಘಾತಕ್ಕೀಡಾದಾಗ ಯಮರಾಯನಿಗೆ ಸೆಡ್ಡು ಹೊಡೆದು ಹತ್ತಾರು ಮಂದಿಯನ್ನು ಉಳಿಸಿದ್ದು ಪುಣೆಯ ಯುವ ಸಾಫ್ಟ್ ವೇರ್ ಇಂಜಿನಿಯರ್. ಪುಣೆಯ ಈ ಟೆಕ್ಕಿ ಪ್ರಶಾಂತ್ ಪಾಂಡೆಯ ರಕ್ಷಣಾ ಕಾರ್ಯಕ್ಕೆ ಈಗ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಡೀ ಬಸ್ಸು ಬೆಂಕಿಯಿಂದ ಆವರಿಸಿಕೊಂಡಾಗ 23 ವರ್ಷದ ಪ್ರಶಾಂತ್ ಪಾಂಡೆ ಧೃತಿಗೆಡದೆ ತನ್ನನ್ನು ರಕ್ಷಿಸಿಕೊಳ್ಳುವ ಮುನ್ನ ಹತ್ತಿರವಿದ್ದ ಇನ್ನೂ ಹತ್ತು ಮಂದಿಯ ಪ್ರಾಣ ಉಳಿಸಲು ಸಖತ್ ''ತಲೆ'' ಉಪಯೋಗಿಸಿದ್ದಾರೆ. ಹೌದು ಅಕ್ಷರಶಃ ತಲೆ ಉಪಯೋಗಿಸಿದ ಟೆಕ್ಕಿ ಪ್ರಶಾಂತ್ ತಮ್ಮ ಗಟ್ಟಿ ತಲೆಯನ್ನೇ ಹ್ಯಾಮರ್ ಎಂದು ಭಾವಿಸಿಕೊಂಡು ಕಿಟಕಿಯ ಗಾಜುಗಳನ್ನು ಒಂದೊಂದಾಗಿ ಛಿದ್ರಗೊಳಿಸಿ ಸಾವಿನ ಮನೆಯಿಂದ ಸಹ ಪ್ರಯಾಣಿಕರನ್ನು ಹೊರಗೆಳೆದಿದ್ದಾರೆ!

ಸ್ವಂತ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಟೆಕ್ಕಿ ಪ್ರಶಾಂತ್, ಮತ್ತೆ ಸಕಾಲದಲ್ಲಿ ಪುಣೆಗೆ ಮರಳಲು ಈ ನತದೃಷ್ಟ ಬಸ್ಸೇರಿದ್ದರು. ಹಾವೇರಿ ಬರುತ್ತಿದ್ದಂತೆ ಬಸ್ಸಿನಲ್ಲಿ ವಿಕಟಹಾಸದಂತೆ ಭಾರಿ ಕರ್ಕಶ ಸದ್ದೊಂದು ಕೇಳಿಬಂದಿದೆ. ಆಗಲೇ ಪ್ರಶಾಂತ್ ಗೆ ಅನಿಸಿದ್ದು ಯಮರಾಯ ಸಹ ತಮ್ಮೊಂದಿಗೆ ಬಸ್ಸೇರಿ ಬಂದಿದ್ದಾನೆ ಎಂಬುದು.
ಸರಿ. ಆಗಲೇ ಪ್ರಶಾಂತ್ ತಲೆ ಉಪಯೋಗಿಸಿದ್ದು. ಮೊದಲು ಕೈಗಳಿಂದ ಕಿಟಕಿ ಗಾಜನ್ನು ಪುಡಿ ಮಾಡಿ ಬಚಾವಾಗಲು ಯತ್ನಿಸಿದ್ದಾರೆ. ಆದರೆ ಗಾಜು ಅಷ್ಟು ಸುಲಭವಾಗಿ ಒಡೆದಿಲ್ಲ. ಆದರೆ ಕೈಕಟ್ಟಿ ಕುಳಿತುಕೊಳ್ಳುವ ಸಮಯ ಅದಲ್ಲ. ತಕ್ಷಣ ತಲೆಯಿಂದ ಕಿಟಕಿ ಗಾಜನ್ನು ಗುದ್ದಿದ್ದಾರೆ. ಫಳ್ ಎಂದು ಕಿಟಕಿ ಬಿಚ್ಚಿಕಂಡಿದೆ. ಅಷ್ಟು ಸಾಕಿತ್ತು ಪ್ರಶಾಂತ್ ಗೆ ಬಸ್ಸಿಂದ ಹೊರಹಾರಲು. ಹೊರಗೆ ಜಿಗಿದವರೇ ತಮ್ಮ ಹಿಂದೆ ಕಿಟಕಿ ಕಿಂಡಿಯಿಂದ ಹೊರಬರಲು ಯತ್ನಿಸುತ್ತಿದ್ದವರನ್ನು ಒಬ್ಬೊಬ್ಬರಾಗಿ ಹೊರಗೆ ಎಳೆದುಕೊಂಡಿದ್ದಾರೆ.
(ಆದರೆ, ಸ್ವಲ್ಪವೇ ಬಲಪ್ರಯೋಗ ಮಾಡಿದರೂ ಸಾಕು ಕಿಟಕಿ ಗಾಜು ಪುಡಿಪುಡಿಯಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪಾರಾಗಲೆಂದೇ ಇಂತಹ ಜಾಗನ್ನು ಅಲವಡಿಸಲಾಗಿರುತ್ತದೆ ಎಂದು ಜಬ್ಬಾರ್ ಟ್ರಾವೆಲ್ಸ್ ದುರಂತದ ಬಳಿಕ ವೋಲ್ವೋ ತಾಂತ್ರಿಕ ನೈಪುಣ್ಯತೆ ಬಗ್ಗೆ ತಜ್ಞರೊಬ್ಬರು ಬಿಡಿಸಿ ಹೇಳಿದ್ದರು ಎಂಬುದು ಗಮನಾರ್ಹ).
ನೋಡನೋಡುತ್ತಿದ್ದಂತೆ ತಮ್ಮನ್ನೂ ಸೇರಿದಂತೆ 10 ಮಂದಿಯನ್ನು ಪ್ರಶಾಂತ್ ಸಾವಿನ ಮನೆಯಿಂದ ರಕ್ಷಿಸಿದ್ದರು. ತಲೆಗೆ ಪೆಟ್ಟು ಮಾಡಿಕೊಂಡ ಪ್ರಶಾಂತ್ ಈಗ ಸ್ಥಳೀಯ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದಾರೆ.












Click it and Unblock the Notifications