'ಹರಿಕಥೆ ಅಲ್ಲ ಗಿರಿಕಥೆ' ಯಲ್ಲಿ ಪ್ರಮೋದ್ ಶೆಟ್ಟಿಯ ಪೊಲೀಸ್‌ಗಿರಿ!
ಚಿತ್ರರಂಗದಲ್ಲಿ ಸಿನೆಮಾ ಶುರುವಾದಾಗಿನಿಂದ ಟಾಕ್ ಕ್ರಿಯೇಟ್ ಮಾಡಿ ಹಂತ ಹಂತವಾಗಿ ಬಿಡುಗಡೆವರೆಗೂ ಕಾತುರತೆಯನ್ನು ಹೆಚ್ಚಿಸಿಕೊಂಡೇ ರಿಲೀಸ್ ದಿನಕ್ಕೆ ಕಾದು ಕೂತಿರುವ ಸಿನೆಮಾವೇ ಹರಿಕಥೆ ಅಲ್ಲ ಗಿರಿಕಥೆ. ಕರಣ್ ಅನಂತ್ ಮತ್ತು ಅನಿರುದ್ಧ್ ಮಹೇಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಹರಿಕಥೆ ಅಲ್ಲ ಗಿರಿಕಥೆ ಚಿತ್ರ ಇದೇ ತಿಂಗಳ 23ರಂದು ರಾಜ್ಯಾದ್ಯಂತ ತೆರೆಗಾಣುತ್ತಿದೆ.
ಚಿತ್ರದ ಟೈಟಲ್, ತಾರಾಬಳಗ, ಕಥಾಹಂದರ, ಹಾಗು ಚಿತ್ರದಿಂದ ರಿಲೀಸ್ ಮಾಡಲಾಗಿದ್ದ ಟ್ರೈಲರ್, ಸಾಂಗ್ ಹಾಗೂ ತುಣುಕುಗಳನ್ನು ಕಂಡ ಮೇಲಂತೂ ಚಿತ್ರದ ಮೇಲಿನ ಕುತೂಹಲಭರಿತ ಚರ್ಚೆ ನಾನಾ ದಿಕ್ಕುಗಳಲ್ಲಿ ಸಾಗಿದೆ.
ಈಗಾಗಲೇ ಗೊತ್ತಿರುವಂತೆ ಚಿತ್ರದ ನಾಯಕ ರಿಷಭ್ ಶೆಟ್ಟಿ. ರಿಷಬ್ ಈ ಸಿನೆಮಾದ ನಾಯಕ ಅಂದ ಮೇಲೆ ಸಾಮಾನ್ಯವಾಗೇ ಇದರಲ್ಲೇನೋ ಹೊಸತನಗಳಿವೆ ಅನ್ನೋದ್ರ ಜೊತೆ ಸಖತ್ ಕಂಟೆಂಟ್ ಇರೋ ಸಿನೆಮಾ ಅನ್ನೋದು ಖಾತ್ರಿ. ಅದರಲ್ಲಿಯೂ ಈಗಾಗಲೇ ರಿಷಭ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಕಾಂಬಿನೇಷನ್ನು ಬೇರೆ ಸಿನೆಮಾಗಳಲ್ಲಿ ನೋಡಿರುವವರು ಇಷ್ಟಪಡದೇ ಇರಲು ಸಾಧ್ಯವಿಲ್ಲ ಬಿಡಿ.

ಆದ್ರೆ ಇವರಿಬ್ಬರ ಕಾಂಬೋ ಹರಿಕಥೆ ಅಲ್ಲ ಗಿರಿಕಥೆಯ ಮೂಲಕ ಮತ್ತೆ ಮುಂದುವರೆದಿರೋದರಿಂದ ಅವರ ಪಾತ್ರ ಎಂಥಾದ್ದೆಂಬ ಪ್ರಶ್ನೆಗೆ ಮೊನ್ನೆತಾನೇ ಟ್ರೈಲರ್‌ನಲ್ಲಿ ಉತ್ತರ ಸಿಕ್ಕಿದೆ. ಆದ್ರೂ ಇದ್ರ ಬಗ್ಗೆ ಒಂದು ಕುತೂಹಲ ಇವರಿಬ್ಬರ ಅಭಿಮಾನಿಗಳಲ್ಲೂ ಮನೆಮಾಡಿರುತ್ತದೆ.
ಇದೀಗ ಈ ಪ್ರಶ್ನೆಗಳಿಗೆಲ್ಲ ಖುದ್ದು ಪ್ರಮೋದ್ ಶೆಟ್ಟಿ ಅವರೇ ತಮ್ಮಿಬ್ಬರ ಕಾಂಬಿನೇಷನ್ ಹಾಗು ತಮ್ಮ ಪಾತ್ರದ ಸುತ್ತಲಿನ ಒಂದಷ್ಟು ಥ್ರಿಲ್ಲಿಂಗ್ ಸಂಗತಿಗಳನ್ನು ಹೇಳಿಕೊಂಡರೆ ಹೇಗೆ ಅಲ್ವಾ? ಹಾಗಾಗಿ ಪ್ರಮೋದ್ ಶೆಟ್ಟಿ ಅವರನ್ನೇ ಈ ಕುರಿತು ಕೇಳಿದ್ರೆ.

ನಿರ್ದೇಶಕರು ಈ ಸಿನಿಮಾದ ತಯಾರಿಯ ಸಂದರ್ಭದಲ್ಲಿಯೇ ಈ ಪಾತ್ರವನ್ನು ಇಂತಿಂಥವರೇ ನಿರ್ವಹಿಸಬೇಕೆಂಬ ಬಗ್ಗೆ ಕಲ್ಪನೆ ಇಟ್ಟುಕೊಂಡಿರುತ್ತಾರೆ. ಆದ್ರೆ ನನ್ನ ಪಾತ್ರ ಖಚಿತವಾಗಿ ನಿಗದಿಯಾಗಿರಲಿಲ್ಲ. ಒಂದಷ್ಟು ಬದಲಾವಣೆಯ ಮೂಲಕ ಅಂತಿಮ ರೂಪ ಪಡೆದುಕೊಂಡ ನಂತರವಷ್ಟೇ, ನನ್ನ ಪಾತ್ರ ನಿಗದಿಯಾಯ್ತು. ರಿಷಭ್ ಪಾತ್ರ ಮಾತ್ರ ಮೊದಲೇ ನಿರ್ಧರಿಸಲಾಗಿತ್ತು.
ಆದ್ರೆ ನನ್ನನ್ನೂ ಈ ಚಿತ್ರದಲ್ಲಿ ಬಯಸಿದ್ದ ನಿರ್ದೇಶಕರಿಗೆ ರಿಷಬ್ ಪ್ರಮೋದ್ ಶೂಟಿಂಗ್‌ನಲ್ಲಿ ಬ್ಯುಸಿ ಇರ್ತಾರೆ, ಡೇಟ್ ಸಿಗೋದ್ ಡೌಟು ಅಂದಿದ್ರಂತೆ, ಆದ್ರೆ ನಿರ್ದೇಶಕರ ಕಥೆ ಅನ್ವಯ ನಾನೇ ಸೂಕ್ತವೆನೆಸಿ ನನ್ನ ಕೇಳಿದಾಗ ಒಂದಕ್ಕೊಂದು ಸರಿದೂಗಿ ನಾನು ಒಪ್ಪಿಕೊಂಡೆ ಹೀಗೆ ನನ್ನ ಜರ್ನಿ ಈ ಸಿನೆಮಾದಲ್ಲಿ ಪ್ರಾರಂಭವಾಯ್ತು ಅಂತಾರೆ ಪ್ರಮೋದ್ ಶೆಟ್ಟಿ.
ಇನ್ನು ಈಗಾಗಲೇ ನೀವು ಪೊಲೀಸ್ ಪಾತ್ರದಲ್ಲಿ ನಟಿಸಿದ್ರಲ್ಲ, ಮತ್ಯಾಕೆ ಅದೇ ಗೆಟಪ್ ಅಂದ್ರೆ, ಸೇಮ್ ಗೆಟಪ್‌ನಲ್ಲೇ ಡಿಫರೆಂಟ್ ರೋಲ್ ಹರಿಕಥೆ ಅಲ್ಲ ಗಿರಿಕಥೆಯಲ್ಲಿ ನಿರ್ದೇಶಕರು ಡಿಸೈನ್ ಮಾಡಿದ್ದಾರೆ. ನೀವ್ ಖಂಡಿತ ಎಂಜಾಯ್ ಮಾಡ್ತಿರ ಅಂತಾರೆ.

ಇನ್ನೊಂದು ವಿಷ್ಯ ಅಂದ್ರೆ ಚಿತ್ರದ ವಿಲನ್‌ಗಿರಿಯ ಪಾತ್ರವನ್ನು ಪ್ರಮೋದ್‌ರಿಂದ ಮಾಡಿಸುವ ಚರ್ಚೆಗಳು ಆರಂಭವಾಗಿತ್ತು. ಆದರೆ ನಿರ್ದೇಶಕರ ಪಾಲಿಗೆ ಪ್ರಮೋದ್ ಅವರು ಪೊಲೀಸ್ ಪಾತ್ರವನ್ನೇ ನಿಭಾಯಿಸಬೇಕೆಂಬ ಇಂಗಿತವಿತ್ತು.
ಕಡೆಗೂ ಈವರೆಗೆ ನಿರ್ವಹಿಸಿದ್ದ ಪಾತ್ರಗಳಿಗಿಂತಲೂ ಭಿನ್ನವಾಗಿದ್ದ ಪೊಲೀಸ್ ಪಾತ್ರವನ್ನೇ ಪ್ರಮೋದ್ ಮಾಡಲು ಒಪ್ಪಿಕೊಂಡಿದ್ದರಂತೆ. ಹೀಗೆ ಹಿಂದೇಟು ಹಾಕಿದರೂ ಕೂಡಾ ಪೊಲೀಸ್‌ಗಿರಿ ಅವರನ್ನು ಮತ್ತೆ ಸುತ್ತಿಕೊಂಡಿದ್ದೊಂದು ಅಚ್ಚರಿಯೂಂದಿಗೆ ಯಾವ ನಂಟೋ ಅಂದ್ರೆ ತಪ್ಪಲ್ಲ.
ಚಿತ್ರದಲ್ಲಿ ಇಬ್ಬರು ನಿರ್ದೇಶಕರಿದ್ದರೂ ಯಾರಿಗೂ, ಯಾವ ವಿಚಾರದಲ್ಲಿಯೂ ಗೊಂದಲವಾಗದಂತೆ ಎಲ್ಲವನ್ನೂ ಸರಿದೂಗಿಸಿದ್ದಾರೆಂಬ ಮೆಚ್ಚುಗೆಯೂ ಪ್ರಮೋದ್ ಶೆಟ್ಟರಲ್ಲಿದೆ.
ಈ ಪಾತ್ರ ತನ್ನ ವೃತ್ತಿಬದುಕಿನಲ್ಲಿ ಒಂಥರ ಹೊಸತು ಮತ್ತು ಸ್ಪೆಷಲ್ಲು ಎಂಬುದು ಪ್ರಮೋದ್ ಶೆಟ್ಟಿ ಅವರ ಅಭಿಪ್ರಾಯ.
ಅಂದಹಾಗೆ, ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದು, ರಿಷಬ್‌ಗೆ ರಚನಾ ಇಂದರ್ ಮತ್ತು ತಪಸ್ವಿನಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ.
ವಾಸುಕಿ ವೈಭವ್ ಸಂಗೀತ ನಿರ್ದೇಶನ ಈಗಾಗಲೇ ತನ್ನ ಚಹರೆ ತೋರಿಸಿದ್ದು, ಹೊಸತನದ ಕಥೆಗೆ ಇಲ್ಲಿ ಹೊಸ ಆವೇಗದ ತಂಡ, ತಾಂತ್ರಿಕ ವರ್ಗದ ಸಾಥ್ ಇದ್ದು, ಇದೆಲ್ಲದರ ಒಟ್ಟು ಔತಣ ಇದೇ ತಿಂಗಳ 23ರಂದು ರಾಜ್ಯಾದ್ಯಂತ ತೆರೆಯ ಮೇಲೆ ಅನಾವರಣಗೊಳ್ಳಲಿದೆ.












Click it and Unblock the Notifications