Microfinance: ಮೈಕ್ರೋ ಫೈನಾನ್ಸ್ ಕಿರುಕುಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಜನವರಿ 25: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳದ ಬಗ್ಗೆ ಭಾರೀ ಚರ್ಚೆಯಾಗಿದೆ. ಕಂಪನಿಗಳ ಕಿರುಕುಳ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ಸಹ ವರದಿಯಾಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾನೂನು ಬಾಹಿರ ಸಾಲ ವಸೂಲಾತಿ ಮಾಡುವ ಮೈಕ್ರೋ ಫೈನಾನ್ಸ್ ಕಂಪನಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದು, ಕಠಿಣ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಶನಿವಾರ ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಮಹತ್ವದ ಸಭೆಯನ್ನು ನಡೆಸಿದರು. ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಂಪನಿಗಳ ಕಾರ್ಯಾಚರಣೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿರುವ ಸಮಸ್ಯೆಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಯಿತು. ಉಪ ಮುಖ್ಯಮಂತ್ರಿ ಡಿ. ಕೆ. ಶಿವ ಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕಾನೂನು ಸಚಿವ ಎಚ್. ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣ ಬೈರೇಗೌಡ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್. ಕೆ. ಅತೀಕ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್ ಸೇರಿ ಗೃಹ ಇಲಾಖೆ, ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಖಡಕ್ ಎಚ್ಚರಿಕೆ ಕೊಟ್ಟ ಸಿದ್ದರಾಮಯ್ಯ: ಈ ಸಭೆಯಲ್ಲಿ ಬ್ಯಾಂಕ್, ಫೈನಾನ್ಸ್ ಹಾಗೂ ಮೈಕ್ರೋ ಫೈನಾನ್ಸ್‌ಗಳ ಪ್ರತಿನಿಧಿಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದ ಮುಖ್ಯಮಂತ್ರಿಗಳು, ನಿಯಮ ಮೀರಿ ಸಾಲ ವಸೂಲಿ ಮಾಡಿದಲ್ಲಿ ಕಠಿಣ ಕ್ರಮ ಕೈಗೊಳ್ಳುತ್ತೇನೆ, ನನ್ನ ಜನರ ರಕ್ಷಣೆಗಾಗಿ ನಾನೇ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ಕೊಟ್ಟರು.
ಸಭೆಯಲ್ಲಿ ಸಿದ್ದರಾಮಯ್ಯ, ಸಿಬ್ಬಂದಿಗಳು ನಿಯಮ ಬಾಹಿರವಾಗಿ ಸಾಲ ವಸೂಲಾತಿ ಮಾಡುವುದನ್ನು ನಿಯಂತ್ರಿಸಲು ಏನು ಮಾಡಿದ್ದೀರಿ?, ಸಿಬ್ಬಂದಿ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ನ್ಯಾಯಾಲಯದ ಅನುಮತಿಯನ್ನು ಪಡೆದು ಸಾಲ ಪಡೆದವರ ಮನೆಯನ್ನು ಜಪ್ತಿ ಮಾಡಿದ್ದಿರಾ? ಎಂದು ಪ್ರಶ್ನಿಸಿದರು. ಕಾನೂನು ಕೈಗೆ ತೆಗೆದುಕೊಂಡು ಸಾಲ ವಸೂಲಾತಿ ಮಾಡಲು ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸಾಲ ಪಡೆದವರಿಗೆ ರಿಸರ್ವ ಬ್ಯಾಂಕ್ ಮಾರ್ಗಸೂಚಿಗಳನ್ನು ಅವರ ಆಡು ಭಾಷೆಯಲ್ಲಿ ಅರ್ಧ ಮಾಡಿಸಬೇಕು. ಆರ್‌ಬಿಐ ನಿಯಮಗಳನ್ನು ಮೀರಿ ಮರು ಪಾವತಿ ಸಾಧ್ಯವಿಲ್ಲದವರಿಗೂ ಪದೇ ಪದೇ ಏಕೆ ಸಾಲ ಕೊಡುತ್ತಿದ್ದೀರಿ? ಎಂದು ಸಿದ್ದರಾಮಯ್ಯ ಕೇಳಿದರು.
ಸಾಲ ಕೊಡುವ ಮೊದಲು ಆಧಾರ್ ಕೆವೈಸಿ ಮಾಡಿಸಬೇಕು. ಆಗ ಪದೇ ಪದೇ ಒಬ್ಬರಿಗೆ ಸಾಲ ಕೊಡುವುದು ತಪ್ಪುತ್ತದೆ ಎಂದು ಹೇಳಿದರು. ಕಾನೂನು ಕ್ರಮವನ್ನು ಮೀರಿ ನೀವು ಸಾಲ ವಸೂಲಾತಿಗೆ ಕೈಗೊಳ್ಳುವ ಕ್ರಮವನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ.
ನಿಮ್ಮ ವ್ಯವಹಾರ ಹೆಚ್ಚಿಸಿಕೊಳ್ಳಲು ಒಬ್ಬರಿಗೆ ಪದೇ ಪದೇ ಸಾಲ ಕೊಡುತ್ತಿದ್ದೀರಿ. ಒಬ್ಬರೇ ಬೇರೆ ಬೇರೆ ದಾಖಲಾತಿ ನೀಡಿ ಸಾಲ ಪಡೆದಿರುವುದು ನಿಮ್ಮ ದಾಖಲೆಗಳಲ್ಲಿ ಇದೆ. ಸಾಲ ತೀರಿಸಲು ಸಾಧ್ಯವಾಗದಿದ್ದಾಗ ಬಲವಂತದ ಕಾನೂನು ನಿಯಮ ಮೀರಿದ ಕ್ರಮಕ್ಕೆ ಮುಂದಾಗುತ್ತೀರಿ. ಇದನ್ನು ಸಹಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಪತ್ರಿಕೆಗಳಲ್ಲಿ ಮಹಿಳೆಯರ ಮೇಲೆ, ವೃದ್ಧರ ಮೇಲೆ ಮೈಕ್ರೋ ಫೈನಾನ್ಸ್ ಅವರು ದಬ್ಬಾಳಿಕೆ ನಡೆಸುತ್ತಿರುವ ವರದಿಗಳನ್ನು ನೋಡುತ್ತಿದ್ದೇನೆ. ನಾನು ಇದನ್ನು ಸಹಿಸುವುದಿಲ್ಲ, ಜನರ ರಕ್ಷಣೆಗೆ ನಾನು ಕ್ರಮ ಕೈಗೊಳ್ಳುತ್ತೇನೆ. ಪರಿಣಾಮ ಎದುರಿಸಲು ನೀವು ಸಿದ್ಧರಾಗಿ ಎಂದು ಖಡಕ್ ಎಚ್ಚರಿಕೆ ಕೊಟ್ಟರು.
ಮೈಕ್ರೋ ಫೈನಾನ್ಸ್ ಅವರ ದಬ್ಬಾಳಿಕೆ, ಕಿರುಕುಳದ ಕುರಿತು ಜನರು ದೂರು ನೀಡಲು ಸಹಾಯವಾಣಿಯನ್ನು ತೆರೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.











Click it and Unblock the Notifications