ಪಕ್ಷೇತರ ಶಾಸಕ ಎಚ್.ನಾಗೇಶ್‌ಗೆ ಮತ್ತೆ ಮಂತ್ರಿಗಿರಿ ಭಾಗ್ಯ!
Recommended Video
ಬೆಂಗಳೂರು, ಆಗಸ್ಟ್ 20 : ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟಕ್ಕೆ ಇಂದು 17 ಶಾಸಕರು ಸೇರಲಿದ್ದಾರೆ. ಸಂಪುಟ ಸೇರುವ ಶಾಸಕರ ಪಟ್ಟಿಯನ್ನು ಹೈಕಮಾಂಡ್ ಈಗಾಗಲೇ ಅಂತಿಮಗೊಳಿಸಿದೆ. ಎಚ್. ನಾಗೇಶ್‌ಗೆ ಸಚಿವ ಸ್ಥಾನ ಮತ್ತೆ ಒಲಿದು ಬಂದಿದೆ.
ಮಂಗಳವಾರ ಬೆಳಗ್ಗೆ 10.30ಕ್ಕೆ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ. ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಎಚ್. ನಾಗೇಶ್ ಬಿಜೆಪಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ, ಅವರನ್ನು ಸಚಿವರನ್ನಾಗಿ ಮಾಡಲಾಗುತ್ತಿದೆ.
2019ರ ಜೂನ್‌ನಲ್ಲಿ ಸಚಿವರಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸಂಪುಟಕ್ಕೆ ಎಚ್. ನಾಗೇಶ್ ಸೇರ್ಪಡೆಗೊಂಡಿದ್ದರು. ಸಣ್ಣ ಕೈಗಾರಿಕೆ ಖಾತೆಯನ್ನು ಅವರಿಗೆ ಹಂಚಿಕೆ ಮಾಡಲಾಗಿತ್ತು. ಆದರೆ, ಜುಲೈನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಆಗಸ್ಟ್‌ನಲ್ಲಿ ಮತ್ತೊಮ್ಮೆ ಸಚಿವರಾಗುವ ಅವಕಾಶ ನಾಗೇಶ್‌ಗೆ ಸಿಕ್ಕಿದೆ. ಮೊದಲು ಮೈತ್ರಿ ಸರ್ಕಾರ ರಚನೆಗೆ ಬೆಂಬಲ ನೀಡಿದ್ದ ನಾಗೇಶ್, ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದು ಸರ್ಕಾರ ಉರುಳಲು ಕಾರಣವಾಗಿದ್ದರು. ಈಗ ಬಿಜೆಪಿ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ.

ಮೊದಲ ಬಾರಿಗೆ ಶಾಸಕರು
2018ರ ವಿಧಾನಸಭೆ ಚುನಾವಣೆಯಲ್ಲಿ 74, 213 ಮತಗಳನ್ನು ಪಡೆದು ಮೊದಲ ಬಾರಿಗೆ ಶಾಸಕರಾಗಿರುವ ಎಚ್. ನಾಗೇಶ್‌ಗೆ ಎರಡು ಸರ್ಕಾರದಲ್ಲಿ ಸಚಿವರಾಗುವ ಭಾಗ್ಯ ಸಿಕ್ಕಿದೆ. ಹಿಂದೆ ಮೈತ್ರಿ ಸರ್ಕಾರಕ್ಕೆ ಅವರು ಬೆಂಬಲ ನೀಡಿ, ಜೆಡಿಎಸ್ ಕೋಟಾದಡಿ ಸಚಿವ ಸ್ಥಾನ ಪಡೆದಿದ್ದರು. ಆದರೆ, ಪಕ್ಷ ಸೇರಿರಲಿಲ್ಲ.

ಮುಂಬೈ ವಿಮಾನ ಹತ್ತಿದ್ದ ನಾಗೇಶ್
2019ರ ಜೂನ್‌ನಲ್ಲಿ ಸಚಿವ ಸ್ಥಾನ ಪಡೆದಿದ್ದ ನಾಗೇಶ್ ಜುಲೈನಲ್ಲಿ ಮೈತ್ರಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ, ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆಯುವ ಪತ್ರವನ್ನು ರಾಜ್ಯಪಾಲರಿಗೆ ಕೊಟ್ಟು ನಾಗೇಶ್ ಮುಂಬೈ ವಿಮಾನ ಹತ್ತಿದ್ದರು.

ಸರ್ಕಾರಿ ನೌಕರರು
ಎಚ್. ನಾಗೇಶ್ ಐಆರ್‌ಎಸ್ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. 34 ವರ್ಷ ಸರ್ಕಾರಿ ಸೇವೆ ಮಾಡಿರುವ ಅವರು, ಬೆಸ್ಕಾಂ ತಾಂತ್ರಿಕ ವಿಭಾಗದ ನಿರ್ದೇಶಕ, ಕೆಪಿಟಿಸಿಎಲ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಅವರು ರಾಜಕೀಯಕ್ಕೆ ಧುಮುಕಿದ್ದರು.

ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು
ಎಚ್. ನಾಗೇಶ್ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷ ಮಂಜುನಾಥ್‌ಗೆ ಟಿಕೆಟ್ ಕೊಟ್ಟಿತ್ತು. ಛಲ ಬಿಡದ ಅವರು ಪಕ್ಷೇತರರಾಗಿ ಕಣಕ್ಕಿಳಿದಿದ್ದರು. ನಕಲಿ ಜಾತಿ ಪ್ರಮಾಣ ಪತ್ರದ ಕಾರಣ ಮಂಜುನಾಥ್ ನಾಮಪತ್ರ ತಿರಸ್ಕಾರಗೊಂಡಿತು. ಇದರಿಂದಾಗಿ ನಾಗೇಶ್ ಸುಲಭವಾಗಿ ಗೆದ್ದು ಮೊದಲ ಬಾರಿಗೆ ಶಾಸಕರಾದರು.












Click it and Unblock the Notifications