Gruhalakshmi Scheme: ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಕೆ ನಾಲ್ಕೈದು ದಿನ ಮುಂದೂಡಿಕೆ: ಲಕ್ಷ್ಮಿ ಹೆಬ್ಬಾಳ್ಕರ್
ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಹಣ ನೀಡುವ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ನಾಳೆ ಮಧ್ಯಾಹ್ನ 1.30ಕ್ಕೆ ಚಾಲನೆ ಸಿಗುತ್ತದೆ ಎಂದು ಗುರುವಾರ ಬೆಳಿಗ್ಗೆ ಮಾಹಿತಿ ನೀಡಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಂಜೆ ವೇಳೆಗೆ ಯುಟನ್ ತೆಗೆದುಕೊಂಡಿದ್ದು, ಇನ್ನೂ ನಾಲ್ಕೈದು ದಿನ ಅರ್ಜಿ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ.
ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್, ಸಂಪುಟ ಸಭೆಯಲ್ಲಿ ಚರ್ಚೆ ಮಾಡಿದ ಬಳಿಕ ಈ ನಿರ್ಧಾರ ತೆಗೆದುಕೊಂಡಿದ್ದು, ಅರ್ಜಿ ಸ್ವೀಕಾರ ಕಾರ್ಯಕ್ರಮ ನಾಲ್ಕೈದು ದಿನ ಮುಂದಕ್ಕೆ ಹೋಗಿದೆ ಎಂದು ಹೇಳಿದರು.

ಬಾಪೂಜಿ ಕೇಂದ್ರ, ನಾಡಕಚೇರಿಯಲ್ಲಿ ಕೂಡ ಅರ್ಜಿ ಸ್ವೀಕರಿಸಲು ಅವಕಾಶ ನೀಡಲಾಗುತ್ತದೆ. ಒಂದು ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಲಾಗುತ್ತಿದ್ದು, ಒಂದು ಅರ್ಜಿ ತುಂಬಲು 4 ರಿಂದ 6 ನಿಮಿಷಗಳ ಕಾಲ ವ್ಯಯಿಸಬೇಕಾಗುತ್ತದೆ. ಮಹಿಳೆಯರಿಗೆ ಅರ್ಜಿ ಸಲ್ಲಿಸಲು ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ, ಅಪ್ಲಿಕೇಶನ್ ತಯಾರಿಸುತ್ತಿದ್ದು, ಅರ್ಜಿ ಸ್ವೀಕಾರ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇ- ಆಡಳಿತದವರು ಮೊಬೈಲ್ ಅಪ್ಲಿಕೇಶನ್ ಸಿದ್ದಪಡಿಸಲು ಎರಡು ದಿನ ಸಮಯಾವಕಾಶ ಕೇಳಿದ್ದರು, ಬಳಿಕ ನಾಲ್ಕೈದು ದಿನ ಕಾಲಾವಕಾಶ ಕೇಳಿದ್ದಾರೆ. ಅಪ್ಲಿಕೇಶನ್ ತುಂಬುವ ಬಗ್ಗೆ ನಾಡಕಚೇರಿ, ಬಾಪೂಜಿ ಕೇಂದ್ರದ ಸಿಬ್ಬಂದಿಗೆ ಕೂಡ ತರಬೇತಿ ನೀಡಬೇಕಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಅತಿ ಶೀಘ್ರದಲ್ಲೇ ದಿನಾಂಕ ನಿಗದಿ
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆಯ ಪ್ರಕಾರ ಈ ವಾರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಕಾರ್ಯಕ್ರಮಕ್ಕೆ ಚಾಲನೆ ಸಿಗುವುದಿಲ್ಲ, ಮುಂದಿನ ವಾರದಲ್ಲಿ ಅರ್ಜಿ ಸ್ವೀಕಾರ ಕಾರ್ಯಕ್ರಮಕ್ಕೆ ಚಾಲನೆ ಸಿಗುವ ಸಾಧ್ಯತೆ ಇದ್ದು, ಮೊಬೈಲ್ ಅಪ್ಲಿಕೇಶನ್ ಸಂಪೂರ್ಣವಾಗಿ ಸಿದ್ಧವಾದ ಬಳಿಕ ದಿನಾಂಕ ನಿಗದಿಪಡಿಸಲಿದ್ದಾರೆ.
ಇನ್ನು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ಕೊನೆ ದಿನಾಂಕ ಇರುವುದಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವವರು ಈ ಯೋಜನೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
ಆಗಸ್ಟ್ 15 ರಂದು ಸ್ವಾತಂತ್ಯ್ರ ದಿನಾಚರಣೆಯಂದು ಅಕೌಂಟ್‌ಗೆ ಹಣ ಹಾಕಲಾಗುವುದು ಎಂದು ಈ ಮೊದಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಆದರೆ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾತ್ರ ಆಗಸ್ಟ್ 18 ರಂದು ಫಲಾನುಭವಿಗಳ ಅಕೌಂಟ್‌ಗೆ ಹಣ ಹಾಕುವ ಕಾರ್ಯಕ್ರಮಕ್ಕೆ ಬೆಳಗಾವಿಯಲ್ಲಿ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications