Gruha Lakshmi scheme: ಈ ದಿನಾಂಕದೊಳಗೆ ಯಜಮಾನಿಯ ಖಾತೆಗೆ ಬರಲಿದೆ ದುಡ್ಡು, ಮಾಹಿತಿ, ವಿವರ ತಿಳಿಯಿರಿ
ಬೆಳಗಾವಿ, ನವೆಂಬರ್, 08: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ "ಗೃಹಲಕ್ಷ್ಮಿ" ಯೋಜನೆಯೂ ಒಂದಾಗಿದೆ. ಈ ಯೋಜನೆಯ ಹಣವು ಮನೆ ಯಜಮಾನಿಗೆ ತಲುಪಲು ವಿಳಂಬವಾಗುತ್ತಿವೆ ಎನ್ನುವ ಆರೋಪಗಳು ಕೇಳಿಬಂದಿವೆ. ಬಳಿಕ ಎಚ್ಚೆತ್ತ ಸರ್ಕಾರ ಹಣ ವರ್ಗಾವಣೆಗೆ ದಿನಾಂಕವನ್ನು ನಿಗಧಿ ಮಾಡಿದೆ.
ಪ್ರತಿ ತಿಂಗಳು 2000 ರೂಪಾಯಿ ನೀಡುತ್ತಿತ್ತು. ಇದೀಗ ಈ ಮಹತ್ವಾಕಾಂಕ್ಷೆಯ ಯೋಜನೆಯಡಿ ಹಣ ವರ್ಗಾವಣೆ ವಿಳಂಬವಾಗುತ್ತಿರುವ ಆರೋಪ ಕೇಳಿಬಂದಿವೆ. ಇನ್ನು ಈ ಕುರಿತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎಂದು ಇಲ್ಲಿ ತಿಳಿಯಿರಿ.
ತಾಂತ್ರಿಕ ಸಮಸ್ಯೆಯಿಂದ ಹಣ ವರ್ಗಾವಣೆ ವಿಳಂಬ ಆಗುತ್ತಿದೆ ಮತ್ತು ಇಲಾಖೆಯು ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದೆ. ಪ್ರತಿ ತಿಂಗಳ 15-20ರ ಒಳಗೆ ಹಣ ವರ್ಗಾವಣೆ ಮಾಡುವುದಾಗಿ ಹಣಕಾಸು ಇಲಾಖೆ ಭರವಸೆ ನೀಡಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಾಹಿತಿ ನೀಡಿದ್ದಾರೆ.

ಸಚಿವೆ ನೀಡಿನ ಭರವಸೆ ಏನು?
20 ಲಕ್ಷಕ್ಕೂ ಹೆಚ್ಚು ಮಹಿಳೆಯರು ಕರ್ನಾಟಕ ಕಾಂಗ್ರೆಸ್ ಸರ್ಕಾರದ "ಗೃಹ ಲಕ್ಷ್ಮಿ" ಯೋಜನೆಯ ಮೊದಲ ಕಂತನ್ನು ಇನ್ನೂ ಸ್ವೀಕರಿಸಿಲ್ಲ ಎನ್ನುವ ಆರೋಪಗಳು ಕೇಳಿಬಂದಿದ್ದವು. ಆದರೆ ಈ ಬಗ್ಗೆ ಪ್ರತಿಕ್ರಯಿಸಿದ ಅವರು, ಈ ಯೋಜನೆಯಿಂದ ಮನೆಯ ಯಜಮಾನಿಗೆ ತಿಂಗಳಿಗೆ 2,000 ರೂಪಾಯಿಗಳ ಆರ್ಥಿಕ ಸಹಾಯ ಸಿಕ್ಕಂತಾಗುತ್ತದೆ. ಕಾಂಗ್ರೆಸ್ ನೇತೃತ್ವದ ಸರ್ಕಾರವು ಆಗಸ್ಟ್ 30ರಂದು ಈ ಯೋಜನೆಯನ್ನು ಪ್ರಾರಂಭಿಸಿತು. ಮತ್ತು ಹಣವನ್ನು ವರ್ಗಾಯಿಸುವಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಿತು. ಆದರೆ ಇನ್ನೂ ವಿಳಂಬ ಆಗದಂತೆ ಇಲಾಖೆ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿದೆ ಎಂದು ತಿಳಿಸಿದರು.
ಹಣ ವರ್ಗಾವಣೆಯಲ್ಲಿ ವಿಳಂಬ ಏಕೆ?
ಸರ್ಕಾರವು ಈ ತಿಂಗಳು 1.10 ಕೋಟಿ ಜನರಿಗೆ ಹಣ ಬಿಡುಗಡೆ ಮಾಡಿದೆ. KYC, ಆಧಾರ್ ಸೇರಿದಂತೆ ಇನ್ನಿತರ ವಿವರಗಳು ಮತ್ತು ಇ-ಆಡಳಿತದಲ್ಲಿನ ತಾಂತ್ರಿಕ ಸಮಸ್ಯೆಗಳಿಂದಾಗಿ ಹಣ ವರ್ಗಾವಣೆಯಲ್ಲಿ ವಿಳಂಬ ಆಗುತ್ತಿದೆ. ಮೊದಲ ಕಂತಿನಲ್ಲಿ ಹಣ ಸಿಗದ ಜನರಿಗೆ ಒಂದೇ ಬಾರಿಗೆ ಎರಡು ತಿಂಗಳು ಹಣ ಪಡೆಯುತ್ತಿದ್ದಾರೆ. ನಾವು ಎಲ್ಲಾ ಬ್ಯಾಂಕ್‌ಗಳು ಮತ್ತು ನಮ್ಮ ಉದ್ಯೋಗಿಗಳೊಂದಿಗೆ ಸಭೆಗಳನ್ನು ನಡೆಸುತ್ತಿದ್ದೇವೆ. ಮತ್ತು ಪ್ರಕ್ರಿಯೆಯನ್ನು ಸರಳಗೊಳಿಸುತ್ತಿದ್ದೇವೆ ಎಂದು ಹೆಬ್ಬಾಳ್ಕರ್ ಹೇಳಿದರು.
ಹಣಕಾಸು ಇಲಾಖೆಯ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ. ಹಣ ವರ್ಗಾವಣೆ ಯಾವಾಗ ಎಂದು ಜನರು ಗೊಂದಲಕ್ಕೀಡಾಗಬಾರದು. ಈ ಹಿಂದೆ ಹಣ ಬಿಡುಗಡೆಯಾದಾಗ 25 ದಿನಗಳ ಕಾಲ ಪ್ರಕ್ರಿಯೆ ನಡೆಯುತ್ತಿತ್ತು. ಈಗ ಅದನ್ನು ಕೇವಲ 6 ದಿನಕ್ಕೆ ಇಳಿಸಲಾಗಿದೆ. 23 ಲಕ್ಷ ಜನರ ಕೆವೈಸಿ ಸಮಸ್ಯೆಗಳಿದ್ದವು. ಮತ್ತು ಅವುಗಳಲ್ಲಿ ಹೆಚ್ಚಿನವುಗಳನ್ನು ನಾವು ಪರಿಹರಿಸಿದ್ದೇವೆ. ಸುಮಾರು ಇಂತಹ 7 ಲಕ್ಷ ಪ್ರಕರಣಗಳು ಮಾತ್ರ ಬಾಕಿ ಉಳಿದಿದ್ದು, ಅವುಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. .
ಹಣ ವರ್ಗಾವಣೆಯಲ್ಲಿನ ಗೊಂದಲದಿಂದಾಗಿ ಹಲವಾರು ಮಹಿಳೆಯರು ಬ್ಯಾಂಕ್‌ಗಳ ಮೊರೆ ಹೋಗುತ್ತಿದ್ದು, ಈ ಕುರಿತು ವಿಚಾರಿಸಲು ಸಮಸ್ಯೆ ಸೃಷ್ಟಿಯಾಗಿದೆ. ಮುಂದಿನ ತಿಂಗಳೊಳಗೆ ಪ್ರಕ್ರಿಯೆ ಚುರುಕುಗೊಳಿಸಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಭರವಸೆ ನೀಡಿದರು.
ಕಳೆದ ಎರಡು ತಿಂಗಳಿನಿಂದ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಿದ್ದಿಲ್ಲ ಎಂದು ಮಹಿಳೆಯರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಬಳಿಕ ಎಚ್ಚತ್ತ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು, ಶೀಘ್ರದಲ್ಲೇ ಈ ಸಮಸ್ಯೆಯನ್ನು ಬಗೆಹರಿಸಿ ನಿಮ್ಮ ಖಾತೆಗೆ ಸರಿಯಾದ ಸಮಯಕ್ಕೆ ಹಣ ಜಮಾ ಆಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಹಾಗಾದರೆ ಮುಂದಿನ ತಿಂಗಳಲ್ಲಾದರೂ ಈ ಭರವಸೆ ಪ್ರಕಾರ ಅರ್ಹ ಎಲ್ಲಾ ಮಹಿಳೆಯರಿಗೂ ಗೃಹಲಕ್ಷ್ಮಿ ಹಣ ಸಿಗುತ್ತಾ ಎಂದು ಕಾದುನೋಡಬೇಕಿದೆ.












Click it and Unblock the Notifications