ಗೃಹಲಕ್ಷ್ಮಿ ಬಾಕಿ ಹಣ ಬಿಡುಗಡೆ: ಯಾವಾಗ, ಎಷ್ಟು ತಿಂಗಳದ್ದು? ಇಲ್ಲಿದೆ ಗುಡ್‌ನ್ಯೂಸ್
ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ರಾಜ್ಯ ಸರ್ಕಾರ ಕೊನೆಗೂ ಗುಡ್‌ನ್ಯೂಸ್ ನೀಡಿದೆ. ಹಲವು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣ ಸಕಾಲಕ್ಕೆ ಖಾತೆಗೆ ಬರುತ್ತಿಲ್ಲ ಎನ್ನುವ ದೂರು ಕೇಳಿಬಂದಿತ್ತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ಮುಂದಿನ ವಾರದೊಳಗೆ ಎಲ್ಲ ಫಲಾನುಭವಿಗಳ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ತಲುಪಲಿದೆ ಎಂದು ಭರವಸೆ ನೀಡಿದ್ದಾರೆ. ಎಷ್ಟು ತಿಂಗಳ ಹಣ ಬರಲಿದೆ ಎಂದೂ ಅವರು ಖಚಿತಪಡಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಹಣ ನೀಡದೆ ರಾಜ್ಯ ಸರ್ಕಾರ ಜನರನ್ನು ಮೋಸ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಕೂಡ ಆರೋಪ ಮಾಡಿದ್ದರು. ಆದರೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಗ್ಯಾರಂಟಿ ಯೋಜನೆಗಳಿಗೆ ಹಣದ ಕೊರತೆ ಇಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇರುವವರೆಗೆ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದು ಸಮರ್ಥಿಸಿಕೊಂಡಿತ್ತು. ಇನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಕೂಡ ಕಳೆದ ಕೆಲವು ತಿಂಗಳಿನಿಂದ ಹಣ ಬರುತ್ತೆ, ಬರುತ್ತೆ ಎಂದು ಹೇಳುತ್ತಾ ದಿನಗಳನ್ನು ದೂಡಿದ್ದರು. ಇದೀಗ ಎಷ್ಟು ತಿಂಗಳ ಹಣ ಬರುತ್ತೆ, ಹಣ ತಲುಪುವುದು ಯಾಕೆ ವಿಳಂಬವಾಯಿತು? ಎಂಬ ಕಾರಣವೂ ತಿಳಿಸಿದ್ದಾರೆ.

ಈ ವಿಚಾರವಾಗಿ ಇಂದು ಬೆಂಗಳೂರಿನಲ್ಲಿ ಮಾತನಾಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಎರಡು ತಿಂಗಳ ಹಣ ಬಂದಿಲ್ಲ ಅಂತೇನಿಲ್ಲ. ಏಪ್ರಿಲ್ ತಿಂಗಳ ಹಣ ಕೂಡ ಬಿಲ್ ಮಾಡಿದ್ದೇವೆ. ಇನ್ನೊಂದು ವಾರದಲ್ಲಿ ಹಣ ಫಲಾನುಭವಿಗಳ ಖಾತೆಗೆ ಜಮೆ ಆಗಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ. ಜನವರಿ ಹಾಗೂ ಫೆಬ್ರವರಿ ತಿಂಗಳದ್ದೂ ಬಿಲ್ ಆಗಿದೆ. ಆದರೆ, ಹಣಕಾಸು ವರ್ಷ ಮುಕ್ತಾಯವಾಗುವ ಕಾರಣ ಮಾರ್ಚ್ ತಿಂಗಳ ಹಣ ಜಮೆ ಆಗುವುದು ಸಮಸ್ಯೆ ಆಯಿತು. ಬಾಕಿ ಎಲ್ಲವೂ ಮುಂದಿನಂತೆಯೇ ಹಣ ತಲುಪುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಈ ಬಾರಿಯೂ ಹೇಳಿದ ಸಮಯಕ್ಕೆ ಹಣ ತಲುಪಲಿದೆಯೇ ಎಂಬುದು ಮುಂದಿನ ವಾರ ಖಚಿತವಾಗಲಿದೆ.
ಗ್ಯಾರಂಟಿ ಹಣ ಕಾಂಗ್ರೆಸ್ ಕಾರ್ಯಕರ್ತರಿಗೆ ವಿನಿಯೋಗ
ಗೃಹಲಕ್ಷ್ಮಿ ಹಣ ವಿಳಂಬದ ಬಗ್ಗೆ ಬಿಜೆಪಿಯು ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಸಿದ್ದರಾಮಯ್ಯ ಸರ್ಕಾರಕ್ಕೆ ಮಾನ ಮರ್ಯಾದೆ ಎನ್ನುವುದೇ ಇಲ್ಲ, ಕಾಂಗ್ರೆಸ್ ಗ್ಯಾರಂಟಿಗಳು ಜನರನ್ನು ತಲುಪುತ್ತಿಲ್ಲ. ಗೃಹಲಕ್ಷ್ಮಿ ಹಣ ಜಮೆಯಾಗದೆ ಮೂರು ತಿಂಗಳು ಕಳೆದಿದೆ. ಯುವನಿಧಿ ಎನ್ನುವುದು ಮರಿಚೀಕೆಯಾಗಿದೆ. ಇದೆಲ್ಲದರ ನಡುವೆ ಕಾಂಗ್ರೆಸ್ ಸರ್ಕಾರವು ಖಜಾನೆಯ ದುಡ್ಡನ್ನು ತನ್ನ ಕಾರ್ಯಕರ್ತರಿಗೆ ವಿನಿಯೋಗಿಸುತ್ತಿದೆ ಎಂದು ಆರೋಪ ಮಾಡಿದೆ.
ಗೃಹಲಕ್ಷ್ಮಿ ಹಣ ನೀಡಲು ಹಿಂದೆ ಮುಂದೆ ನೋಡುವ ಈ ದರಿದ್ರ ಸರ್ಕಾರವು ಕಾಂಗ್ರೆಸ್ ಪದಾಧಿಕಾರಿಗಳಿಗೆ ಮಾತ್ರ ಮುಂಗಡವಾಗಿ ಗೌರವಧನ ಪಾವತಿ ಮಾಡಿದೆ. ಗ್ಯಾರಂಟಿ ಅನುಷ್ಠಾನ ಸಮಿತಿ ಎನ್ನುವುದೇ ಒಂದು ಬೋಗಸ್ ಆಗಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಓಲೈಸಲು ಜನರ ತೆರಿಗೆ ದುಡ್ಡು ಬಳಸುತ್ತಿರುವುದು ದುರಹಂಕಾರದ ಪರಮಾವಧಿ ಎಂದು ದೂರಿದೆ.












Click it and Unblock the Notifications