Gruha Lakshmi : ಈ ದಿನಾಂಕದಿಂದ 'ಗೃಹ ಲಕ್ಷ್ಮಿ' ಅರ್ಜಿ ಸಲ್ಲಿಕೆ ?
ಬೆಂಗಳೂರು, ಜುಲೈ 5: ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ವಿಳಂಬವಾಗುತ್ತಿದೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಕುಟುಂಬಗಳ ಮನೆ ಯಜಮಾನಿ ಖಾತೆಗೆ ಪ್ರತಿ ತಿಂಗಳು 2000 ಹಣ ಹಾಕುವ ಮಹತ್ವದ ಯೋಜನೆ ಇದಾಗಿದೆ.
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜೂನ್ ಅಂತ್ಯದಲ್ಲಿ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಬೇಕಿತ್ತು, ಆದರೆ ಜೂನ್ ಕಳೆದ ಜುಲೈ ಮೊದಲ ವಾರ ಮುಗಿದರೂ ಇನ್ನೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿಲ್ಲ. ಆಗಸ್ಟ್‌ನಿಂದಲೇ ಫಲಾನುಭವಿಗಳ ಖಾತೆಗೆ ಹಣ ಹಾಕುವುದಾಗಿ ಸರ್ಕಾರ ಹೇಳಿದೆ, ಅರ್ಜಿಯೇ ಸ್ವೀಕರಿಸದಿದ್ದರೆ ಹಣ ಹಾಕುವುದು ಹೇಗೆ ಎನ್ನುವ ಗೊಂದಲ ಕಾಡುತ್ತಿದೆ.

ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಗೃಹ ಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 14 ರಂದು ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಈ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಚರ್ಚೆ ನಡೆಯುತ್ತಿದೆ ಎಂದ ಸಚಿವೆ
ಮಹತ್ವದ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜುಲೈ 14ರಂದು ಆರಂಭವಾಗಲಿದೆ. ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಆಗಸ್ಟ್‌ನಿಂದ ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗೆ 2 ಸಾವಿರ ರೂಪಾಯಿ ಜಮಾ ಮಾಡಲಾಗುವುದು. ಕಾಂಗ್ರೆಸ್ ಕೊಟ್ಟಿರುವ ಭರವಸೆಯನ್ನು ಈಡೇರಿಸಲಿದೆ. ಸ್ಥಿರ ಸರ್ಕಾರ ಮತ್ತು ಸಮೃದ್ಧ ಕರ್ನಾಟಕ ನಮ್ಮ ಗುರಿಯಾಗಿದೆ ಎಂದು ಹೇಳಿದ್ದಾರೆ.
ಜುಲೈ 14ರಂದು ಅರ್ಜಿ ಸ್ವೀಕರಿಸಲು ಪ್ರಕ್ರಿಯೆ ಆರಂಭಿಸಿದರೆ, ರಾಜ್ಯಾದ್ಯಂತ ಇರುವ ಮಹಿಳೆಯರು ಅರ್ಜಿ ಸಲ್ಲಿಕೆ ಮಾಡುವುದು. ಅವುಗಳ ಪರಿಶೀಲನೆ ಮಾಡಿ ಒಂದು ತಿಂಗಳ ಒಳಗೆ ಎಲ್ಲರ ಖಾತೆಗೆ ಹಣ ಹಾಕಲು ಸರ್ಕಾರ ಎಲ್ಲಾ ಸಿದ್ಧತೆ ಮಾಡಿಕೊಂಡಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ. ಜುಲೈ 14ರ ನಂತರ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.
ಅರ್ಜಿ ಸಲ್ಲಿಕೆ ತಡವಾಗುತ್ತಿರುವುದು ಯಾಕೆ?
ಜೂನ್ 18ರಂದು ಗೃಹಜ್ಯೋತಿ ಯೋಜನೆಗೆ ಅರ್ಜಿ ನೋಂದಣಿ ಆರಂಭಿಸಿದ ಬಳಿಕ ಹಲವು ಸಮಸ್ಯೆಗಳು ಎದುರಾದವು. ಸರ್ವರ್ ಸಮಸ್ಯೆ, ದಾಖಲೆಗಳ ಗೊಂದಲದಿಂದ ಆರಂಭದ ಕೆಲವು ದಿನ ಅರ್ಜಿ ಸಲ್ಲಿಕೆ ನಿಧಾನಗತಿಯಲ್ಲಿ ಸಾಗಿತು. ಇದನ್ನು ಮನಗಂಡ ಸರ್ಕಾರ ಗೃಹಜ್ಯೋತಿ ಯೋಜನೆಗೆ ಅರ್ಜಿ ಸ್ವೀಕರಿಸಲು ಪ್ರತ್ಯೇಕವಾಗಿ ಮೊಬೈಲ್ ಆಪ್ ಸಿದ್ದಪಡಿಸಲು ನಿರ್ಧರಿಸಿತು, ಈ ಕಾರಣಕ್ಕೆ ಅರ್ಜಿ ಸ್ವೀಕಾರ ಪ್ರಕ್ರಿಯೆ ಆರಂಭವಾಗಲು ತಡವಾಗುತ್ತಿದೆ.
ಈ ಯೋಜನೆಯ ದುರುಪಯೋಗ ತಡೆಯಲು, ಅರ್ಹ ಫಲಾನುಭವಿಗಳನ್ನು ಗುರುತಿಸಲು ಬೇಕಾದ ಮಾನದಂಡಗಳನ್ನು ವಿಧಿಸಲು ತಜ್ಞರ ಜೊತೆ ಚರ್ಚೆ ಮಾಡಿ, ಬೇಕಾದ ದಾಖಲೆಗಳು, ಸುಲಭವಾಗಿ ಅರ್ಜಿ ಸಲ್ಲಿಸುವಂತೆ ಮಾಡಲು ಶ್ರಮಿಸುತ್ತಿರುವುದರಿಂದ ಅಂದುಕೊಂಡಿದ್ದಕ್ಕಿಂತಲೂ ಆಪ್ ಸಿದ್ದವಾಗುವುದು ತಡವಾಗಿದೆ.
ಸದ್ಯ ಆಪ್ ಸಿದ್ದವಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಪ್ರಾತ್ಯಕ್ಷಿಕೆ ನೀಡಲಾಗಿದೆ ಸಿಎಂ ಸಿದ್ದರಾಮಯ್ಯ ಅವರು ಕೂಡ ಇದನ್ನು ಪರಿಶೀಲನೆ ಮಾಡಿದ್ದಾರೆ. ಯಾವುದೇ ಲೋಪವಾಗದಂತೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಸಲು ಎಲ್ಲಾ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಅರ್ಜಿ ಸಲ್ಲಿಕೆ ಬಗ್ಗೆ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ.
ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮಾತ್ರವಲ್ಲದೆ ಗ್ರಾಮ ಪಂಚಾಯಿತಿಗಳಲ್ಲಿ ಕೂಡ ಅರ್ಜಿ ಸ್ವೀಕರಿಸಲು ಅವಕಾಶ ನೀಡುವ ಸಾಧ್ಯತೆ ಇದೆ. ಅರ್ಜಿ ಸ್ವೀಕರಿಸುವ ಸಂಬಂಧ ಪ್ರತಿ ಬೂತ್‌ಗೆ ಓರ್ವ ಮಹಿಳೆ ಸೇರಿ ನಾಲ್ವರು ಪ್ರತಿನಿಧಿಗಳನ್ನು ನೇಮಕ ಮಾಡಲು ನಿರ್ಧರಿಸಲಾಗಿದೆ. ಇವರು ಅರ್ಜಿ ಸಲ್ಲಿಸಲು ಪ್ರತಿ ಮನೆಗೆ ತೆರಳಿ ಸಹಾಯ ಮಾಡಲಿದ್ದಾರೆ. ರಾಜ್ಯದ 1.13 ಕೋಟಿ ಕುಟುಂಬಗಳು ಈ ಯೋಜನೆಯ ಲಾಭ ಪಡೆಯಲಿವೆ.












Click it and Unblock the Notifications