ಗೌರಿ ಗಣೇಶ ಹಬ್ಬ: KSRTC ಮಹತ್ವದ ಪ್ರಕಟಣೆ
ಬೆಂಗಳೂರು, ಆಗಸ್ಟ್ 28: 2019ರ ಸಾಲಿನ ಗೌರಿ ಗಣೇಶ ಹಬ್ಬ ವಾರಾಂತ್ಯದಲ್ಲಿ ಬಂದಿದ್ದು, ಇದೇ ಭಾನುವಾರ ಮತ್ತು ಸೋಮವಾರದಂದು ( ಸೆ1 ಮತ್ತು 2) ಆಚರಿಸಲಾಗುತ್ತಿದೆ.
ರಾಜಧಾನಿಯಿಂದ ಊರಿಗೆ ತೆರಳುವವರ ಪ್ರಯಾಣಿಕರ ಸಂಖ್ಯೆಯಲ್ಲಿ ವಿಪರೀತ ದಟ್ಟಣೆ ಇರುವುದರಿಂದ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಹೆಚ್ಚುವರಿ ಬಸ್ ವ್ಯವಸ್ಥೆಯನ್ನು ಮಾಡಿದೆ.
ಆಗಸ್ಟ್ 30 ಮತ್ತು 31ರಂದು ಸುಮಾರು 1,800ಕ್ಕೂ ಹೆಚ್ಚು ಬಸ್ಸುಗಳು ಬೆಂಗಳೂರಿನಿಂದ ಹೊರಡಲಿದೆ. ಆಯಾಯ ಊರುಗಳಿಗೆ ಹೋಗಲು ಅನುಕೂಲವಾಗುವಂತೆ, ಮೆಜಿಸ್ಟಿಕ್ ಕೇಂದ್ರ ಬಸ್ ನಿಲ್ದಾಣ, ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಮೈಸೂರು ರಸ್ತೆಯ ಸ್ಯಾಟಿಲೈಟ್ ಮತ್ತು ಕೆ ಎಚ್ ರಸ್ತೆಯ (ಡಬಲ್ ರೋಡ್) ಶಾಂತಿ ನಗರ ಬಸ್ ನಿಲ್ದಾಣದಿಂದ ಹೆಚ್ಚುವರಿ ಬಸ್ಸುಗಳು ಹೊರಡಲಿದೆ.

ಮೆಜಿಸ್ಟಿಕ್ ಬಸ್ ನಿಲ್ದಾಣದಿಂದ - ಧರ್ಮಸ್ಥಳ, ಕುಕ್ಕೇ ಸುಬ್ರಮಣ್ಯ, ಮಂಗಳೂರು, ಉಡುಪಿ, ಕುಂದಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಕಲಬುರಗಿ, ಬೀದರ್, ಕೊಪ್ಪಳ, ರಾಯಚೂರು, ವಿಜಯಪುರ, ಶೃಂಗೇರಿ, ಹೊರನಾಡು, ಕಾರವಾರ ಮುಂತಾದ ಕಡೆಗೆ.
ಮೈಸೂರು ರಸ್ತೆ ನಿಲ್ದಾಣದಿಂದ - ಮಡಿಕೇರಿ, ಕುಶಾಲನಗರ, ವಿರಾಜಪೇಟೆ, ಹುಣಸೂರು, ಮೈಸೂರು ಮುಂತಾದ ಕಡೆಗೆ.
ಪೀಣ್ಯ ಬಸ್ ನಿಲ್ದಾಣದಿಂದ - ದಾವಣಗೆರೆ, ಬಳ್ಳಾರಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಉತ್ತರ ಕರ್ನಾಟಕ ಭಾಗಕ್ಕೆ..
ಶಾಂತಿ ನಗರ ಬಸ್ ನಿಲ್ದಾಣದಿಂದ - ತಮಿಳುನಾಡು ಮತ್ತು ಆಂಧ್ರ ಪ್ರದೇಶದ ವಿವಿದೆಡೆ ಹೆಚ್ಚುವರಿ ಬಸ್ಸುಗಳು ಹೊರಡಲಿದೆ ಎಂದು ಕೆಎಸ್‌ಆರ್‌ಟಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದರ ಜೊತೆಗೆ, ಜಯನಗರ, ವಿಜಯನಗರ, ಕೆಂಗೇರಿ ಮತ್ತು ಬನಶಂಕರಿ ಟರ್ಮಿನಲ್ ಗಳಿಂದಲೂ ಹೆಚ್ಚುವರಿ ಬಸ್ಸುಗಳು ಆ ಎರಡು ದಿನಗಳಲ್ಲಿ ಹೊರಡಲಿದೆ. ಹೋಗಿ ಬರುವ ಟಿಕೆಟ್ ಅನ್ನು ಒಮ್ಮೆಲೇ ಕಾಯ್ದಿರಿಸಿದರೆ ಶೇ. 10ರಷ್ಟು ರಿಯಾಯತಿ ಸಿಗಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಪ್ರಕಟಣೆಯಲ್ಲಿ ಹೇಳಲಾಗಿದೆ.












Click it and Unblock the Notifications