ಹೊಸ ಉದ್ಯಮಗಳಿಗೆ ಸರ್ಕಾರ ಸೌಲಭ್ಯ ಒದಗಿಸಲಿದೆ: ಮುರುಗೇಶ ನಿರಾಣಿ
ಬೆಂಗಳೂರು, ಡಿಸೆಂಬರ್ 16: ಕರ್ನಾಟಕದಲ್ಲಿ ಉದ್ಯೋಗ ಸೃಷ್ಟಿ ಹೆಚ್ಚುತ್ತಿದ್ದು, ಹೊಸ ಉದ್ಯಮಗಳಿಗೆ ನೇರವಾಗಿ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡಲು ಆದಷ್ಟು ಶೀಘ್ರವೇ ಅಗತ್ಯ ಯೋಜನೆ ರೂಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಮುರುಗೇಶ ನಿರಾಣಿ ಹೇಳಿದರು.
ದೊಡ್ಡ ಸಂಸ್ಥೆಯಾದ ಫೆಡರೇಶನ್ ಆಫ್ ಇಂಡಿಯಾ (ಎಫ್ಐಐ) ದಕ್ಷಿಣ ಭಾರತದಲ್ಲಿ ಬೆಂಗಳೂರಿನಲ್ಲಿ ಮೊದಲ ಬಾರಿಗೆ ತನ್ನ ಕಚೇರಿ ತೆರೆದಿದೆ. ಅದನ್ನು ಶುಕ್ರವಾರ ಸಚಿವ ಮುರುಗೇಶ ನಿರಾಣಿ ಉದ್ಘಾಟಿಸಿ ಮಾತನಾಡಿದರು.
ಬೃಹತ್ ಸಂಸ್ಥೆಯಾಗಿರುವ ಫೆಡರೇಶನ್ ಆಫ್ ಇಂಡಿಯಾ (ಎಫ್ಐಐ) ದಕ್ಷಿಣ ಭಾರತದಲ್ಲೂ ತನ್ನ ಒಕ್ಕೂಟವನ್ನು ಮತ್ತಷ್ಟು ಬಲಗೊಳಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಇದೇ ರೀತಿ ರಾಜ್ಯದಲ್ಲಿ ನೂತನ ಉದ್ಯಮ ಹಾಗೂ ಉದ್ಯಮಿಗಳನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರ ಅಗತ್ಯ ಸಹಕಾರ ನೀಡುತ್ತಿದೆ. ಇದರಿಂದ ವೇಗವಾಗಿ ಹೊಸ ಹೊಸ ಉದ್ಯಮಗಳು ಹೆಚ್ಚಲು ನೆರವಾಗುತ್ತದೆ ಎಂದು ಅವರು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಅನುಕೂಲ
ಕರ್ನಾಟಕ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ರಾಜ್ಯದಲ್ಲಿ ಹೊಸದಾಗಿ 14 ವಿಮಾನ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಜಿಲ್ಲಾ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ಪ್ರವಾಸೋದ್ಯಮ ಅಭಿವೃದ್ಧಿಗೆ ಇದು ಅನುಕೂಲ ಆಗಲಿದೆ ಎಂದರು.
ಡಾ.ಶಾಲಿನಿ ನಲ್ವಾಡ್ ಅವರು 'ಎಫ್‌ಐಐ-ಟಿಎಂಎ' ಇದರ ಉಪಾಧ್ಯಕ್ಷರಾಗಿ ಮತ್ತು ಭಾರತದ ಪ್ರಾದೇಶಿಕ ಕಚೇರಿಗಳ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ಮತ್ತು ಅವರೊಂದಿಗೆ ಪ್ರಾದೇಶಿಕ ನಿರ್ದೇಶಕರಾಗಿ ನಿರ್ಮಲಾ ಪರಬ್ ಸಹ ನೇಮಕಗೊಂಡಿದ್ದಾರೆ.
ಎಫ್‌ಐಐ-ಟಿಎಂಎ ಅಧ್ಯಕ್ಷ ಬಾಲಚಂದ್ರ ಸಿನ್ಹ್ ರಾವ್ ರಾಣೆ ಮತ್ತು ಐಕ್ಯಾಟ್ ಏರ್ ಆಂಬ್ಯುಲೆನ್ಸ್ ಸೇವೆಗಳ ಸಹ ಸಂಸ್ಥಾಪಕಿ, ನಿರ್ದೇಶಕಿ ಮತ್ತು ಐಕ್ಯಾಟ್ ಫೌಂಡೇಶನ್‌ನ ಅಧ್ಯಕ್ಷರಾದ ಡಾ.ಶಾಲಿನಿ ನಲ್ವಾಡ್, ಬ್ರಿಟಿಷ್ ಡೆಪ್ಯುಟಿ ಹೈಕಮಿಶನ್ ಉಪ ಮುಖ್ಯಸ್ಥ ಜೇಮ್ಸ್ ಗಡ್ಬರ್ ಉಪಸ್ಥಿತರಿದ್ದರು.












Click it and Unblock the Notifications