ಬೆಂಗಳೂರು ಟ್ರಾಫಿಕ್-ಕ್ರೈಂ ನಿಯಂತ್ರಣಕ್ಕೆ 'ಎಐ' ಬಳಕೆ: ಸಿಸಿಟಿವಿ ಅಳವಡಿಕೆ ಅಪ್ಡೇಟ್ ಕೊಟ್ಟ ಸರ್ಕಾರ
ಬೆಳಗಾವಿ, ಡಿಸೆಂಬರ್ 15: ರಾಜಧಾನಿ ಬೆಂಗಳೂರಿನಲ್ಲಿ ನಿರ್ಭಯ ಯೋಜನೆಯಡಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ ಕಾರ್ಯ ಮುಂದುವರಿದಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಗುರುವಾರ ಕಲಾಪಕ್ಕೆ ಮಾಹಿತಿ ನೀಡಿದರು. ಈಗಾಗಲೇ ಎಷ್ಟು ಅಳವಡಿಸಲಾಗಿದೆ, ಇನ್ನು ಎಷ್ಟು ಅಳವಡಿಸಲಾಗುತ್ತಿದೆ ಎಂಬೆಲ್ಲ ಮಾಹಿತಿಯನ್ನು ತಿಳಿಸಿದರು. ಅಲ್ಲದೇ ಸಂಚಾರ ದಟ್ಟಣೆ, ಟ್ರಾಫಿಕ್ ನಿಯಂತ್ರಣಕ್ಕಾಗಿ AI ತಂತ್ರಜ್ಞಾನ ಬಳಸುತ್ತಿದೆ ಎಂಬ ಮಾಹಿತಿ ನೀಡಲಾಯಿತು.
ಹೌದು, ಬೆಂಗಳೂರಿನಲ್ಲಿ ಅಪರಾಧ ತಡೆಯಲು ಶೀಘ್ರದಲ್ಲೇ 10,000 ಸಿಸಿಟಿವಿ ಕ್ಯಾಮೆರಾಗಳನ್ನು ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಲಾಗುವುದು. ಈಗಾಗಲೇ 7,500 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಗೃಹ ಇಲಾಖೆಯು ನಿರ್ಭಯ ಯೋಜನೆಯಡಿ ಶೀಘ್ರದಲ್ಲೇ ಇನ್ನೂ 2,500 ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆಂದು 'ಡಿಎಚ್' ವರದಿ ಮಾಡಿದೆ.

ವಿಧಾನ ಪರಿಷತ್ತಿನಲ್ಲಿ ಎಂಎಲ್‌ಸಿ ಭಾರತಿ ಶೆಟ್ಟಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದ ಪರಮೇಶ್ವರ ಅವರು, ನಗರದ ಮಾಲ್‌ಗಳು, ಶಾಲಾ-ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳ ಸುತ್ತಮುತ್ತಲಿನ ಎಲ್ಲಾ ಜನಸಂದಣಿ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರ್ಕಾರ ಬಯಸಿದೆ ಎಂದರು.
ನಗರದಲ್ಲಿ ಹೈರೆಸಲ್ಯೂಶನ್ ಕ್ಯಾಮೆರಾ ಅಳವಡಿಕೆ
ಈಗಾಗಲೇ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳು ಹೈರೆಸಲ್ಯೂಶನ್ ಹೊಂದಿವೆ. ಚಿತ್ರಗಳನ್ನು ಝೂಮ್ ಇನ್ ಮಾಡಿದಾಗ, ಫ್ರೇಮ್‌ನಲ್ಲಿರುವ ವ್ಯಕ್ತಿಯ ಗಡಿಯಾರದಲ್ಲಿ ಸಮಯ ಸಹ ಸೆರೆ ಹಿಡಿಯಬಹುದಾಗಿದೆ. ಅಷ್ಟರ ಮಟ್ಟಿನ ಸುಧಾರಿತ ಕ್ಯಾಮೆರಗಳ ಮೂಲಕ ಬೆಂಗಳೂರಿನಲ್ಲಿ ಅಪರಾಧ ಪ್ರಕರಣಗಳ ಮೇಲೆ ನಿಗಾ ವಹಿಸಲಾಗಿದೆ.
ಕ್ಯಾಮೆರಾಗಳ ಅಗತ್ಯತೆ ಒತ್ತಿ ಹೇಳಿದ ಡಿಕೆಶಿ
ನಗರದಲ್ಲಿನ ಕ್ಯಾಮೆರಾಗಳು ಸಂಚಾರ ನಿಯಮಗಳ ಉಲ್ಲಂಘನೆ ಮೇಲೆ ಗಮನಹರಿಸುವುದು ಮಾತ್ರವಲ್ಲದೇ ಅಪರಾಧ ತಡೆಯಲು ಬಳಕೆ ಆಗುತ್ತಿವೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು ಸೆಂಟ್ರಲ್ ಕಮಾಂಡ್ ಸೆಂಟರ್ ಅನ್ನು ಉದ್ಘಾಟಿಸಿದ್ದು, ಅಲ್ಲಿನ ಕ್ಯಾಮೆರಾ ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಸಚಿವರು ಹೇಳುತ್ತಿದ್ದಂತೆ ನಗರದಾದ್ಯಂತ ಸಿಸಿಟಿವಿ ಕ್ಯಾಮೆರಾಗಳ ಅಗತ್ಯತೆ, ಮಹತ್ವ ಕುರಿತು ಬೆಂಗಳೂರು ಅಭಿವೃದ್ಧಿ ಹೊಣೆ ಹೊತ್ತಿರುವ ಡಿಸಿಎಂ ಡಿಕೆ ಶಿವಕುಮಾರ್ ಧ್ವನಿಗೂಡಿಸಿದರು.

ಟ್ರಾಫಿಕ್-ಅಪರಾಧ ತಡೆಗೆ AI ತಂತ್ರಜ್ಞಾನ ಬಳಕೆ
ನಗರದ ಕಸ ವಿಲೇವಾರಿ, ಟ್ರಾಫಿಕ್ ಸಮಸ್ಯೆ ಕುರಿತು ಮಾತನಾಡಿ ಡಿಕೆ ಶಿವಕುಮಾರ್ ಅವರು ವಿಷಾಧಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ. ದೆಹಲಿ ಮತ್ತು ಹೈದರಾಬಾದ್‌ನಂತಹ ವಿವಿಧ ನಗರಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯ ಮಾದರಿ ಅಳವಡಿಸಿಕೊಳ್ಳುವ ಚಿಂತನೆಯಲ್ಲಿದ್ದೇನವೆ. ಈ ಕುರಿತು ಎಲ್ಲ ಪಕ್ಷದ ನಾಯಕರ ಸಲಹೆ ಪಡೆಯಲಾಗುವುದು ಎಂದು ಅವರು ತಿಳಿಸಿದರು.
ಇನ್ನೂ ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆ, ಕೋಲಾರ ಮತ್ತು ಬಳ್ಳಾರಿ ರಸ್ತೆಗಳಲ್ಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ದೀರ್ಘಾವಧಿಯ ಯೋಜನೆ ಸರ್ಕಾರ ರೂಪಿಸುತ್ತಿದೆ. ಟ್ರಾಫಿಕ್ ಕಡಿವಾಣ ಹಾಕಲು ಸರ್ಕಾರ ಒಂಬತ್ತು ಸಂಸ್ಥೆಗಳ ಜೊತೆ ಕೈ ಜೋಡಿಸಿದೆ. ಒಟ್ಟಾರೆಯಾಗಿ ಟ್ರಾಫಿಕ್ ಮತ್ತು ಅಪರಾಧ ತಡೆಗೆ ನಾವು ಎಐ ಆಧಾರಿತ (Artificial Intelligence) ಬಳಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನೂ ಬ್ರಾಂಡ್ ಬೆಂಗಳೂರು ಉಪಕ್ರಮಕ್ಕಾಗಿ ಒಟ್ಟಾರೆ 70,000 ಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಬೆಂಗಳೂರಿನ ಅಭಿವೃದ್ಧಿ ಕುರಿತು ಅವರು ಸದನದಲ್ಲಿ ಮಾತನಾಡಿದರು.












Click it and Unblock the Notifications