ಆದೇಶದಂತೆ ನೀರು ಬಿಟ್ಟಿದ್ದೇವೆ: ಇದು ರಾಜ್ಯ ಸರ್ಕಾರದ ಬೇಜವಾಬ್ದಾರಿ ನಡೆ, ಸಭೆಯ ಅಂಶಗಳು
ಬೆಂಗಳೂರು, ಆಗಸ್ಟ್ 29: ಕಾವೇರಿ ನೀರು ನಿಯಂತ್ರಣ ಸಮಿತಿಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಬೇಜವಾಬ್ದಾರಿಯಿಂದ ಹೇಳುತ್ತಿರುವ ಕರ್ನಾಟಕ ರಾಜ್ಯ ಸರ್ಕಾರವು, ಅಧಿಕಾರವನ್ನು ಉಳಿಸಿಕೊಳ್ಳಲು, ರಾಜಕೀಯ ಲಾಭ ಪಡೆಯಲು ಕನ್ನಡಿಗರ ಹಿತವನ್ನೇ ಬಲಿಕೊಟ್ಟಿದೆ ಎಂದು ರಾಜ್ಯ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಗುಡುಗಿದರು.
ಶಾಸಕರ ಭವನದಲ್ಲಿ ಮಂಗಳವಾರ ರೈತಪರ ಸಂಘಟನೆಗಳು, ಕನ್ನಡ ಪರ ಹೋರಾಟ ಸಂಘಗಳು, ನಾಡಿನ ನೀರಾವರಿ ತಜ್ಞರು, ಸಾಹಿತಿಗಳು ಹಾಗೂ ಚಿಂತಕರನ್ನೊಳಗೊಂಡ 'ನಮ್ಮ ಜಲ ನಮ್ಮದು - ಬನ್ನಿ ಮಾತಾಡೋಣ' ವಿಶೇಷ ದುಂಡುಮೇಜಿನ ಸಭೆ ಮಂಗಳವಾರ ನಡೆಯಿತು. ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ರವರು ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಇತರ ನಾಯಕರ ನೇತೃತ್ವದಲ್ಲಿ ನಡೆಯಿತು.

ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಚಂದ್ರು ಅವರು, ಕರ್ನಾಟಕದಲ್ಲಿ ಈ ವರ್ಷ ನಿರೀಕ್ಷೆಯ ಮಳೆಯಾಗದೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಏಕಾಏಕಿ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ಖಂಡಿಸಿದ್ದೇವೆ. ಕನ್ನಡಿಗರಿಗೆ ಕುಡಿಯುವ ನೀರಿಗೂ ಸಂಕಷ್ಟವಿದೆ ಎಂಬ ಗಂಭೀರ ಸಂಗತಿಯನ್ನು ಈ ಸಭೆ ಮೂಲಕ ರಾಜ್ಯ ಸರ್ಕಾರದ ಗಮನಕ್ಕೆ ತರುತ್ತಿದ್ದೇವೆ ಎಂದರು.
ರಾಜಕೀಯಕ್ಕಾಗಿ ಕನ್ನಡಿಗರ ಹಿತ ಬಲಿ ಕೊಟ್ಟ ಸರ್ಕಾರ
ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ತಕ್ಷಣ, ತಮಿಳುನಾಡಿಗೆ ನೀರು ಹರಿಸುವ ನಿರ್ಧಾರ ಕೈಗೊಂಡ ಕರ್ನಾಟಕ ಸರ್ಕಾರದ ಧೋರಣೆ ಒಪ್ಪುವಂಥದ್ದಲ್ಲ. ಸರ್ಕಾರ ಪ್ರತಿಯಾಗಿ ಕೂಡಲೇ ಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಬೇಕಿತ್ತು.
ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು, ರಾಜಕೀಯ ಲಾಭಕ್ಕಾಗಿ ಕನ್ನಡಿಗರ ಹಿತ ಬಲಿಕೊಟ್ಟಿರುವುದು ಸರಿಯಲ್ಲ ಎಂದು ಆರೋಪಿಸಿದರು.
'ಕಾವೇರಿ ನೀರು ನಿಯಂತ್ರಣ ಸಮಿತಿ'ಯ ನಿರ್ದೇಶನದಂತೆ ನೀರು ಬಿಟ್ಟಿದ್ದೇವೆ ಎಂದು ಹೇಳುತ್ತಿದ್ದ ಸರ್ಕಾರವು, ಪ್ರತಿಭಟನೆ ಹೆಚ್ಚಾದಂತೆ ಸರ್ವಪಕ್ಷ ಸಭೆ ಕರೆದಿರುವುದು 'ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತೆ' ಎಂದು ಅವರು ಕಿಡಿ ಕಾರಿದರು.
ಕಾವೇರಿ ನೀರು ಉಳಿಸಲು ಸತತ ಹೋರಾಟ ನಡೆಸಿರುವ ರೈತ ಮತ್ತು ಕನ್ನಡ ಸಂಘಟನೆಗಳನ್ನು ಹೊರಗಿಟ್ಟು ಸರ್ಕಾರ ಸಭೆ ನಡೆಸಿದ್ದು ಸರಿಯಲ್ಲ. ಎರಡು ರಾಜಕೀಯ ಪಕ್ಷಗಳನ್ನು ಮಾತ್ರ ಕರೆದದ್ದು ಈ ಸರ್ಕಾರದ ಪ್ರಾಮಾಣಿಕತೆಯನ್ನು ಪ್ರಶ್ನೆಸುವಂತಾಗಿದೆ. ಕರ್ನಾಟಕಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗೆ ಕನ್ನಡಿಗರ ಹಿತವನ್ನು ಬಲಿಕೊಟ್ಟಿರುವುದು, ಕಾಣದಂತೆ ನೀರು ಹರಿಸಿರುವುದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದು ಅವರು ವಿವರಿಸಿದರು.

ತಮಿಳುನಾಡು ಧೋರಣೆ ಸರಿಯಲ್ಲ: ಕಷ್ಟ ಹಂಚಿಕೆಯಾಗಲಿ
ತಮಿಳುನಾಡು 'ನೀರಿರಲಿ ಇಲ್ಲದಿರಲಿ, ಕರ್ನಾಟಕದ ಜನರು ಕುಡಿಯುವ ನೀರಿಲ್ಲದೆ ಒದ್ದಾಡಿದರೂ ಪರವಾಗಿಲ್ಲ, ನಮಗೆ ಬರಬೇಕಾದ ಪಾಲು ಬಂದುಬಿಡಲಿ' ಎಂಬ ಧೋರಣೆ ದೇಶದ ಹಿತದೃಷ್ಟಿಯಿಂದ ಅಪಾಯಕಾರಿಯೇ ಆಗಿದೆ. ಸಹಜವಾಗಿ ಮಳೆಯಾದ ವರ್ಷದಲ್ಲಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಕಾವೇರಿ ನೀರಿನ ಹಂಚಿಕೆ ಸರಾಗವಾಗಿ ನಡೆದುಕೊಂಡು ಬರುತ್ತಿದೆ. ಆದರೆ ಮಳೆ ಕಡಿಮೆಯಾದ ವರ್ಷದಲ್ಲಿ ಎರಡೂ ರಾಜ್ಯಗಳು ಸಂಕಷ್ಟವನ್ನೂ ಪರಸ್ಪರ ಹಂಚಿಕೊಳ್ಳಬೇಕು. ಆಗ ನೀರು ಹಂಚಿಕೆಯಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಹೇಳಿದರು.
ವ್ಯರ್ಥವಾದರೂ ಸರಿಯೇ ಕನ್ನಡಿಗರಿಗೆ ನೀರು ಸಿಗಬಾರದು
ಕರ್ನಾಟಕದಿಂದ ಕಳೆದ ವರ್ಷ ತಮಿಳುನಾಡಿಗೆ 500 ಟಿಎಂಸಿ ನೀರನ್ನು ಹೆಚ್ಚಾಗಿ ಬಿಡಲಾಗಿದೆ. ಅದನ್ನು ಪೂರ್ಣ ಉಳಿಸಿಕೊಳ್ಳಲು ವ್ಯವಸ್ಥೆ ಇಲ್ಲದೆ ಸಮುದ್ರಕ್ಕೆ ಹರಿದು ಹೋಗಿದೆ. ಕರ್ನಾಟಕಕ್ಕೆ ಮೇಕೆದಾಟು ಯೋಜನೆಗೆ ತಕರಾರು ತೆಗೆದಿದೆ. ಸಮುದ್ರಕ್ಕೆ ನೀರು ಹರಿದು ವ್ಯರ್ಥವಾದರೂ ಪರವಾಗಿಲ್ಲ ಕನ್ನಡಿಗರಿಗೆ ನೀರು ದಕ್ಕಬಾರದು ಎಂಬ ತಮಿಳುನಾಡು ಧೋರಣೆ ಮಾನವ ವಿರೋಧಿಯಾಗಿದೆ ಎಂದು ಅವರು ಖಂಡಿಸಿದರು.
ಸದ್ಯ ರಾಜ್ಯದಲ್ಲಿ ನಿರೀಕ್ಷೆಯಷ್ಟು ಮಳೆಯಾಗಿಲ್ಲ. ಹೀಗಾಗಿ ಕಾವೇರಿ ಕೋಳ್ಳದ ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಕೊಡಗು ಸೇರಿದಂತೆ ಕಾವೇರಿ ಜಲಾಶಯದ ಪ್ರದೇಶಗಳಲ್ಲಿ ಕಡಿಮೆ ಮಳೆಯಿಂದಾಗಿ ಒಳಹರಿವು ಕಡಿಮೆಯಾಗಿದೆ. ಜೂನ್‌ನಿಂದ ಆಗಸ್ಟ್ ವರೆಗೆ ಕರ್ನಾಟಕದ ಕಾವೇರಿ ಕಣಿವೆಯಲ್ಲಿ ಶೇ.44 ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ.

ನೀರು ಹಂಚಿಕೆ ಬಗ್ಗೆ ಮನವರಿಕೆ ಮಾಡಿ
ರಾಜ್ಯದಲ್ಲಿ ಮುಂಗಾರು ಅವಧಿ ಮುಗಿಯುತ್ತಿದೆ. ಆದರೆ ತಮಿಳುನಾಡಿನಲ್ಲಿ ಮುಂಗಾರು ಅವಧಿ ಇನ್ನೂ ಇದೆ. ನಮ್ಮಲ್ಲಿ ಮಳೆ ಕೊರತೆಯೂ ಆಗಿದೆ. ಆದರೂ 10 ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಿದ್ದು ತಪ್ಪೆಂದು ಸುಪ್ರೀಂ ಕೋರ್ಟ್‌ನಲ್ಲಿ ಮನವರಿಕೆ ಮಾಡಿಕೊಡಬೇಕಿತ್ತು. ಕರ್ನಾಟಕ ಜಲಾಶಯದಲ್ಲಿರುವ ಕುಡಿಯುವ ನೀರಿಗೂ ಸಾಕಾಗುವುದಿಲ್ಲ ಎಂಬುದನ್ನು ಕರ್ನಾಟಕ ಸ್ಪಷ್ಟವಾಗಿ ದಾಖಲೆ ಸಮೇತ ನ್ಯಾಯಾಲಯಕ್ಕೆ ಮನವಿ ಮಾಡಬೇಕಿದೆ ಎಂದು ಅವರು ಸಲಹೆ ನೀಡಿದರು.
ತಾಂತ್ರಿಕೆ ಮಾಹಿತಿ ಕಲೆ ಹಾಕಿ
ನೀರಿನ ಕೊರತೆಯಿದ್ದಾಗ ಹಂಚಿಕೆಯ ಬಗ್ಗೆ ಕೇಂದ್ರ ಸರ್ಕಾರಸಂಕಷ್ಟ ಸೂತ್ರ ರೂಪಿಸಿರುವುದೇ ಕರ್ನಾಟಕದ ಸಂಕಷ್ಟಕ್ಕೆ ಕಾರಣವಾಗಿದೆ. ತಮಿಳುನಾಡಿನವರು ನದಿ ಪಾತ್ರದ ತಳ ಭಾಗದಲ್ಲಿ ಯೋಜನೆ ಮಾಡುತ್ತಿದ್ದಾರೆ. ಅದಕ್ಕೆ ನೀರಿನ ಹಂಚಿಕೆ ಇಲ್ಲ. ಈ ಬಗ್ಗೆ ತಾಂತ್ರಿಕ ಮಾಹಿತಿ ಕಲೆಹಾಕುವ ಕೆಲಸ ಆಗಬೇಕು.
ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ನಿರಂತರವಾಗಿ ಕಾವೇರಿ ಹೋರಾಟಕ್ಕೂ ಸರಿಯಾದ ನ್ಯಾಯ ಸಿಕ್ಕಿಲ್ಲ. ನಮ್ಮ ಜಲಾಶಯಗಳಿಗೆ ಬಂದಂತಹ ನೀರನ್ನು ಏಕಾಯೇಕಿ ಬಿಟ್ಟು, ನಮ್ಮನ್ನು ಖಾಲಿ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ಇದರಿಂದ ಕಾವೇರಿ ನೀರು ನೆಚ್ಚಿಕೊಂಡವರ ಮೇಲೆ ಸರ್ಕಾರವೇ ಚಪ್ಪಡಿ ಎಳೆಯುವ ಕೆಲಸ ಮಾಡಿದೆ ಎಂದು ಆಕ್ರೋಶ ಹೊರ ಹಾಕಿದರು.
ನೀರಾವರಿ ಸಚಿವರಾದ ಡಿ.ಕೆ ಶಿವಕುಮಾರ್ ಅವರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಪಾದಯಾತ್ರೆ ಮಾಡಿದವರು. ಆದರೆ, ಈಗ ಅಧಿಕಾರಕ್ಕೆ ಬಂದ ಬಳಿಕ ಯೋಜನೆಗೆ ಯಾವುದೇ ಹಣ ಮೀಸಲಿಟ್ಟಿಲ್ಲ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಮೇಕೆದಾಟು: ಪಾದಯಾತ್ರೆ ಮಾಡಿದವರು ಇಂದು ಹಣ ನೀಡಿಲ್ಲ
"ಹೊಗೇನಿಕಲ್ ಸುಪ್ರೀಂ ಕೋರ್ಟ್ 2007ರ ತೀರ್ಪು ಬಂದನಂತರ ಏನು ಹೆಚ್ಚುವರಿ ನೀರು 178 ಟಿಎಂಸಿ ತಮಿಳುನಾಡಿಗೆ ಕೊಟ್ಟು ಉಳಿದ್ದನ್ನು ಬಳಸಿಕೊಳ್ಳಬಹುದು ಎಂಬ ಅಭಿಪ್ರಾಯ ಬಂದಿದೆ. ಅದರ ಪ್ರಕಾರ ಹೊಗೆನಿಕಲ್ ಫಾಲ್ಸ್‌ನಲ್ಲಿ 25 ಟಿಎಂಸಿ ನೀರು ಬಳಸಿಕೊಳ್ಳುವುದಕ್ಕೆ ತಮಿಳುನಾಡು ಸರ್ಕಾರ ಈಗಾಗಲೇ ಕಾರ್ಯಯೋಜನೆ ಜಾರಿಗೆ ತಂದಿದೆ. ಹೀಗಿರುವಾಗ ನಾವೇಕೆ ಮೇಕೆದಾಟು ಅಣೇಕಟ್ಟು ನಿರ್ಮಾಣ ಮಾಡಬಾರದು. ಸುಮಾರು 50-60 ಟಿಎಂಸಿ ನೀರು ಪೋಲಾಗುವುದನ್ನು ಏಕೆ ಸದ್ಬಳಕೆ ಮಾಡಿಕೊಳ್ಳುತ್ತಿಲ್ಲ? ಎಂದು ಅವರು ಪ್ರಶ್ನಿಸಿದರು.
ಸಭೆಯಲ್ಲಿ ಕೇಳಿ ಬಂದ ಆಗ್ರಹ
ತಮಿಳುನಾಡಿಗೆ ನೀರು ಹರಿಸಿದ ಸರ್ಕಾರದ ವರ್ತನೆಯನ್ನು ಸಭೆಯ ಸದಸ್ಯರು ಖಂಡಿಸಿದರು. ಕಾವೇರಿ ನೀರಿನ ನಿರ್ವಹಣಾ ಮಂಡಳಿ ಆದೇಶಿಸಿರುವ 5000 ಕ್ಯೂ ಸೆಕ್ಸ್ ನೀರನ್ನು ಯಾವುದೇ ಕಾರಣಕ್ಕೂ ಬಿಡಬಾರದು. ಮೇಕೆದಾಟು ಜಲಾಶಯ ನಿರ್ಮಾಣ ಕೂಡಲೇ ಕೈಗೆತ್ತಿಕೊಳ್ಳಬೇಕು. ಸಮುದ್ರಕ್ಕೆ ಹೆಚ್ಚುವರಿ ನೀರನ್ನು ಸಂಗ್ರಹಿಸಿಕೊಂಡು ಸಂಕಷ್ಟ ಸಮಯದಲ್ಲಿ ಕುಡಿಯುವ ನೀರಿಗೆ ಬಳಸುವಂತೆ ಒತ್ತಾಯಿಸಿದರು.
ಬೆಂಗಳೂರಿಗೆ ಸುಪ್ರೀಂ ಕೋರ್ಟ್ ನಿಗದಿ ಮಾಡಿರುವ ಕುಡಿಯುವ ನೀರಿನ ಪ್ರಮಾಣವನ್ನು ಜನಸಂಖ್ಯೆ ಏರಿಕೆಯಾಗಿರುವ ಕಾರಣ 30 ಟಿಎಂಸಿ ನಿಗದಿ ಪಡಿಸಲು ಸರ್ವೋತ್ತಮ ನ್ಯಾಯಾಲಯಕ್ಕೆ ಬೇಡಿಕೆ ಇಡುವುದು. ಮಳೆ ಕೊರತೆ ವೇಳೆ ನೀರು ಬಿಡುವ ಪ್ರಮಾಣ ಸಂಕಷ್ಟ ಸೂತ್ರ ಕೇಂದ್ರ ಸರ್ಕಾರ ತಕ್ಷಣವೇ ಜಾರಿ ಮಾಡಬೇಕು. ಕಾವೇರಿ ಪ್ರಾಧಿಕಾರ ಸ್ವಾಯತ್ತತೆ ಪ್ರಾಧಿಕಾರವನ್ನು ರಚಿಸಬೇಕು. ಒಂದು ವೇಳೆ ಕದ್ದು ಮುಚ್ಚಿ ನೀರು ಬಿಡಲು ಹೊರಟರೆ ರಸ್ತೆಗಿಳಿದು ಪ್ರತಿಭಟನೆ ನಡೆಸಲು ಸಮಿತಿ ತೀರ್ಮಾನಿಸಿ ರೈತರಿಗೆ ಕರೆ ನೀಡುತ್ತೇವೆ ಎಂದು ಒಕ್ಕೋರಲಿನಿಂದ ಹೇಳಿದರು.












Click it and Unblock the Notifications