ಅರ್ಚಕರಿಗೆ ಸಿಹಿ ಸುದ್ದಿ: ರಾಜ್ಯ ಸರ್ಕಾರದಿಂದ ತಸ್ತಿಕ್ ಹಣ ಬಿಡುಗಡೆಗೆ ಆದೇಶ
ಬೆಂಗಳೂರು, ಸೆಪ್ಟಂಬರ್ 03: ಕರ್ನಾಟಕ ಸರ್ಕಾರ ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳ ಅರ್ಚಕರಿಗೆ ಸಿಹಿ ಸುದ್ದಿ ನೀಡಿದೆ. ಅರ್ಚಕರ ತಸ್ತಿಕ್ ಹಣವನ್ನು ಬಿಡುಗಡೆ ಮಾಡಿ ಆದೇಶಿಸಿದೆ. ಹಾಗಾದರೆ ಎಷ್ಟು ಮಂದಿ? ಈ ಭತ್ಯೆ ಹಣ ಹೇಗೆ ಪಡೆಯಲಿದ್ದಾರೆ, ಒಟ್ಟು ಎಷ್ಟು ಕೋಟಿ ಹಣ ಎಂಬುದನ್ನು ಇಲ್ಲಿ ತಿಳಿಯಬಹುದು.
ರಾಜ್ಯಸರ್ಕಾರವು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ 2700 ಸಿ ದರ್ಜೆಯ ದೇವಾಲಯಗಳ ಅರ್ಚಕರಿಗೆ ಭತ್ಯೆಯ ಒಟ್ಟು 77.85 ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ. ಈ ಇಲಾಖೆ ವ್ಯಾಪ್ತಿಯ ಅಷ್ಟೂ ಜನ ಅರ್ಚಕರು ತಮ್ಮ ತಸ್ತಿಕ್ ಹಣವನ್ನು ತಹಶೀಲ್ದಾರ್ ಮೂಲಕ ಪಡೆಯಲಿದ್ದಾರೆ ಎನ್ನಲಾಗಿದೆ.

ಅರ್ಚಕರ ತಸ್ತಿಕ್ ಹಣಕ್ಕೆ ಕಮಿಷನ್ ಹಣ ಕೇಳಲಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ನೇರವಾಗಿ ಅರ್ಚಕರ ಬ್ಯಾಂಕ್ ಖಾತೆಗಳಿಗೆಗೆ ಈ ಹಣ ಹಾಕುವ ಬಗ್ಗೆ ಈ ಹಿಂದೆ ತಿಳಿಸಿದ್ದರು. ಅದಾದ ಬಳಿಕ ಸದ್ಯ ಸರ್ಕಾರ ಹಣ ಬಿಡುಗಡೆ ಮಾಡಿದೆ. ಈ ತಸ್ತಿಕ್ ಹಣ ನೇರವಾಗಿ ಅರ್ಚಕರ ಖಾತೆಗೆ ಜಮೆ ಆಗಲಿದೆಯೇ ಅಥವಾ ತಹಶೀಲ್ದಾರ್‌ರಿಂದ ಅರ್ಚಕರು ಹಣ ಪಡೆಯುತ್ತಾರಾ? ಎಂಬುದರ ಬಗ್ಗೆ ಅಧಿಕೃತ ಮಾಹಿತಿ ಹೊರಬರಬೇಕಿದೆ.
ಸಿ-ದರ್ಜೆ ದೇಗುಲದ ಅರ್ಚಕರ ಆರೋಪವೇನು?
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯ ಸಿ ದರ್ಜೆ ದೇವಸ್ಥಾನಗಳ ಪೂಜೆ ಸೇರಿದಂತೆ ಇನ್ನಿತರ ಕಾರ್ಯ ಮಾಡುವ ಅರ್ಚಕರಿಗೆ ತಸ್ತಿಕ್ ಹಣ ಬಿಡುಗಡೆ ಮಾಡಲು ಪರ್ಸೆಂಟೇಜ್ ಕೇಳುತ್ತಿದ್ದಾರೆ ಎಂದು ಅರ್ಚಕರ ಸಂಘ ಆರೋಪಿಸಿತ್ತು. ದೇಗುಲದ ಗುಮಾಸ್ತರು, ಶಿರಸ್ತೇದಾರರು, ಟ್ರಿಜರಿ ಅಧಿಕಾರಿಗಳು ಕಮೀಷನ್ ಬೇಡಿಕೆ ಇಡುತ್ತಿದ್ದರು ಎಂದು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಸಂಘ ಉಲ್ಲೇಖಿಸಿತ್ತು.
ಈ ಸಂಬಂಧ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಇತ್ತೀಚೆಗೆ ಅರ್ಚಕರ ಸಂಘ ಪತ್ರ ಬರೆದು ಮನವಿ ಮಾಡಿತ್ತು. ಸರ್ಕಾರ ದೇಗುಲಗಳಿಗೆ ತಸ್ತಿಕ್ ಹಣ ಬಿಡುಗಡೆ ಮಾಡುತ್ತದೆ. ಆದರೆ ಅದನ್ನು ನಮಗೆ ಬಿಡುಗಡೆ ಮಾಡಲು ಶೇ. 20ರಷ್ಟು ಹಣ ಕೇಳಲಾಗುತ್ತಿದೆ, ಇದರಿಂದಾಗಿ ದಲ್ಲಾಳಿಗಳಿಗೆ ಹಣ ನೀಡಬೇಕಿದೆ. ಇಂತಹ ವಾತಾವರಣ ನಿರ್ಮೂಲನೆಗೆ ಸಂಘ ಮನವಿ ಮಾಡಿತ್ತು. ಆಗ ಸಚಿವರು ಸಕಾರಾತ್ಮಕವಾಗಿ ಭರವಸೆ ನೀಡಿದ್ದರು.ಇದೀಗ ಸರ್ಕಾರ ಹಣ ಬಿಡುಗಡೆ ಮಾಡಿ ಆದೇಶಿಸಿದೆ.












Click it and Unblock the Notifications