ಕನ್ನಡದ ಔಷಧ ಚೀಟಿ ಬಗ್ಗೆ ಸರ್ಕಾರದಿಂದ ಮಹತ್ವದ ನಿರ್ಧಾರ
ಬೆಂಗಳೂರು, ಸೆಪ್ಟೆಂಬರ್, 12: ನಿಯಮ ಜಾರಿಯಾಗುವ ಮೊದಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ ವೈದ್ಯರು ಕನ್ನಡದಲ್ಲೇ ಔಷಧ ಚೀಟಿ ಬರೆದು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇನ್ನು ಇದಕ್ಕೆ ಆರೋಗ್ಯ ಸಚಿವರಿಂದಲೂ ಮೆಚ್ಚುಗೆ ವ್ಯಕ್ತವಾಗಿದ್ದು, ಈ ಬಗ್ಗೆ ಸರ್ಕಾರ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಹಾಗಾದೆ ಆ ನಿರ್ಧಾರ ಏನು ಎಂದು ಇಲ್ಲಿ ತಿಳಿಯಿರಿ.
ರಾಜ್ಯದ ಹಲವು ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಯ ವೈದ್ಯರು ಕನ್ನಡದಲ್ಲೇ ರೋಗಿಗಳಿಗೆ ಔಷಧಿ ಚೀಟಿಯನ್ನು ಬರೆಯುವಂತೆ ಆದೇಶಿಸಿ ಎಂಬುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಅವರು ಮನವಿ ಪತ್ರ ಸಲ್ಲಿಸಿದ್ದರು. ಇದಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ಪುರುಷೋತ್ತಮ ಪತ್ರಕ್ಕೆ ಉತ್ತರಿಸಿರುವ ಸಚಿವ ದಿನೇಶ್ ಗುಂಡೂರಾವ್ ಅವರು, ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯಬೇಕೆಂದು ತಾವು ಮಾಡಿರುವ ಸಲಹೆ ಅತ್ಯಂತ ಮಹತ್ವಪೂರ್ಣ ವಿಷಯ ಎನಿಸಿತು. ನೂರಾರು ವೈದ್ಯರು ತಮ್ಮ ಮಾತುಗಳಿಂದ ಪ್ರೇರಿತರಾಗಿ ಕನ್ನಡದಲ್ಲಿ ಬರೆದ ಔಷಧಿ ಚೀಟಿಗಳನ್ನು ತಮ್ಮಲ್ಲಿ ಹಂಚಿಕೊಂಡಿದ್ದಾರೆ ಎನ್ನುವುದು ಸಹ ನಿಜಕ್ಕೂ ಸಂತಸದ ವಿಚಾರಚಾಗಿದೆ ಎಂದರು.
ಇಂಗ್ಲೀಷ್ ಭಾಷೆ ಇತರೆ ಭಾಷೆಗಳನ್ನು ಆಪೋಶನ ತೆಗೆದುಕೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ದೈನಂದಿನ ಜೀವನದಲ್ಲಿ ಕನ್ನಡ ಭಾಷೆ ಉಳಿಯಲು, ಬೆಳೆಯಲು ಇಂತಹ ಕ್ರಮಗಳು ಪೂರಕ ಎನ್ನುವುದು ಸರ್ವವೇದ್ಯ ಸಂಗತಿಯಾಗಿದೆ ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವೈದ್ಯರು ಕನ್ನಡದಲ್ಲಿಯೇ ಔಷಧಿ ಚೀಟಿ ಬರೆಯುವುದನ್ನು ಕಡ್ಡಾಯಗೊಳಿಸುವ ವಿಚಾರದಲ್ಲಿ ಯೋಚನೆ ಮಾಡಬೇಕಾಗುತ್ತದೆ ಎಂದರು.
ವೈದ್ಯರು, ರೋಗಿಗಳು, ಶುಶೂಷಕರು, ಔಷಧಿ ವರ್ತಕರು ಮುಂತಾದ ಹತ್ತು ಹಲವು ಪ್ರಭಾ ಕೇಂದ್ರಗಳಿರುವ ಈ ವ್ಯವಸ್ಥೆಯ ಒಂದು ಕೊಂಡಿ ಸರಿಯಾಗಿ ಕನ್ನಡವನ್ನು ಅರ್ಥೈಸಿಕೊಳ್ಳುವುದರಲ್ಲಿ ಎಡವಿದರೂ ರೋಗಿಗಳ ಜೀವನ್ಮರಣದ ಪ್ರಶ್ನೆಯಾಗುವ ಸಾಧ್ಯತೆಯಿರುತ್ತದೆ. ಜನರ ಆರೋಗ್ಯವನ್ನು ಕಾಯುವ ವೈದ್ಯಕೀಯ ವಿಜ್ಞಾನ ಕ್ಷೇತ್ರ ಅತ್ಯಂತ ವಿಶಾಲ ಮತ್ತು ಸಂಕೀರ್ಣವಾಗಿದ್ದು, ಪ್ರಮುಖ ಬದಲಾವಣೆಗಳ ಮುನ್ನ ಎಲ್ಲ ಭಾಗಿದಾರರ ಜೊತೆ ಚರ್ಚೆ ನಡೆಸಿದ ಬಳಿಕ ಅಗತ್ಯ ಎನ್ನುವುದು ನನ್ನ ಭಾವನೆ. ಇದು ಕೇವಲ ಒಂದು ಆದೇಶದ ಮೂಲಕ ಜಾರಿಗೆ ಬರುವ ವಿಚಾರವಲ್ಲ ಎಂದರು.
ಕನ್ನಡದಲ್ಲಿ ವೈದ್ಯಕೀಯ ವ್ಯವಹಾರದ ಅನುಷ್ಠಾನ ಪೂರ್ವದಲ್ಲಿ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ಅತ್ಯಗತ್ಯ ಎನ್ನುವುದನ್ನು ತಾವೂ ಒಪ್ಪಿಕೊಳ್ಳುತ್ತೀರಿ ಎಂದು ನಾನು ಭಾವಿಸುತ್ತೇನೆ. ಕನ್ನಡದ ಅಸ್ಮಿತೆಯನ್ನು ಸಾರುವುದರಲ್ಲಿ ನಾವು ಹಿಂದಡಿ ಇಡುವುದು ಸಾಧ್ಯವೇ ಇಲ್ಲದಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂಬುದನ್ನು ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಪರಾಮರ್ಶಿಸಲೇಬೇಕಾಗುತ್ತದೆ.
ಈ ಹಿನ್ನೆಲೆ ಪ್ರಾಧಿಕಾರದ ಔಚಿತ್ಯಪೂರ್ಣ ಸಲಹೆಯನ್ನು ಮುಖ್ಯಮಂತ್ರಿಗಳ ಅವಗಾಹನೆಗೆ ತಂದು ಆಸಕ್ತರ ಸಹಮತಿಯೊಂದಿಗೆ ಜಾರಿಗೊಳಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಮಗೆ ತಿಳಿಯಬಯಸುತ್ತೇನೆ. ನಮ್ಮ ಸರ್ಕಾರ ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಸಾಧ್ಯ ಇರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಸನ್ನದವಾಗಿದ್ದು, ಈ ಸಂದರ್ಭದಲ್ಲಿ ಧನಾತ್ಮಕ ನಿಲುವನ್ನೇ ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications