ವರ್ಗಾವಣೆ ದಂಧೆ ಆರೋಪಕ್ಕೆ ನೀರೆರೆಯಿತೆ 211 ಪೊಲೀಸ್ ಅಧಿಕಾರಿಗಳ ವರ್ಗಾವಣೆ ತಡೆ
ಬೆಂಗಳೂರು, ಆಗಸ್ಟ್ 03: ಪೊಲೀಸ್ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮಗೆ ಬೆಲೆ ಸಿಗುತ್ತಿಲ್ಲ ಎಂಬ ಶಾಸಕರ ಬೇಸರದ ಮಧ್ಯೆ 211 ಪೊಲೀಸ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆಯಲ್ಲಿ 60ಕ್ಕೂ ಹೆಚ್ಚು ಮಂದಿಯ ವರ್ಗಾವಣೆಯಲ್ಲಿ ರಾಜ್ಯ ಸರ್ಕಾರವೇ ತಡೆ ನೀಡಿದೆ. ಇದಕ್ಕೆ ಕೆಲವು ನಾಯಕರ ಅಸಮಾಧಾನವೇ ಕಾರಣ ಎಂದು ಗೊತ್ತಾಗಿದ್ದು, ಈ ವಿಚಾರ ರಾಜಕೀಯದಲ್ಲಿ ಮತ್ತೆ ಕಿಡಿ ಎಬ್ಬಿಸುತ್ತಿದೆ.
ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮಂಗಳವಾರ 211 ಮಂದಿಗೆ ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರವೇ ಆದೇಶ ಹೊರಡಿಸಿತ್ತು. ಬಳಿಕ ಗೌಪ್ಯ ಸಭೆ ಬಳಿಕ ಈ ವರ್ಗಾವಣೆ ಆದೇಶಕ್ಕೆ ತಡೆ ನೀಡಲಾಗಿದೆ. ಜೊತೆಗೆ ವರ್ಗಾಯಿಸಿದ ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಸೂಚಿಸಲಾಗಿದೆ. 24 ಗಂಟೆಗಳಲ್ಲಿ ಮೂರು ಆದೇಶಗಳನ್ನು ಹೊರಡಿಸಿದ ಸರ್ಕಾರಕ್ಕೆ ಪೊಲೀಸರ ವರ್ಗಾವಣೆಯೆ ದೊಡ್ಡ ಸಮಸ್ಯೆಯಾಗಿದೆ.

ನವದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಬುಧವಾರ ನಡೆಸಿದ ರಾಜ್ಯ ನಾಯಕರ ಸಭೆಯಲ್ಲಿ ಗೃಹ ಸಚಿವ ಜಿ.ಪರಮೇಶ್ವರ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಪುಟದ ಸಹೋದ್ಯೋಗಿಗಳು ಭಾಗವಹಿಸಿದ್ದರು. ಅಲ್ಲಿಂದ ಸರ್ಕಾರದ ಪ್ರತಿನಿಧಿಗಳು ರಾಜ್ಯಕ್ಕೆ ವಾಪಸ್ ಆದ ಬಳಿಕ ಸಿಎಂ ಮಾರ್ಗದರ್ಶನದಲ್ಲಿಯೇ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರು (ಡಿಜಿಪಿ) ಈ ವರ್ಗಾವಣೆ ತಡೆ ಆದೇಶ ಹೊರಡಿದ್ದಾರೆ.
ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಹಿಂದೆ ವರ್ಗಾವಣೆಗೆ ಹಣ ನೀಡಬೇಕು, ಇಲ್ಲವಾದರೆ ವರ್ಗಾವಣೆ ಪಟ್ಟಿ ಕಸದ ಬುಟ್ಟಿಗೆ ಎಂದೆಲ್ಲ ಹೇಳಿದ್ದರು. ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಅದರ ಬೆನ್ನಲ್ಲೆ ಮಂಗಳವಾರ ರಾತ್ರಿ 9 ಗಂಟೆ ಸುಮಾರಿಗೆ 211 ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಆದೇಶ ಹೊರ ಬಿದ್ದಿತ್ತು.

ಕಾಂಗ್ರೆಸ್ ನಾಯಕರ ಅಸಮಾಧಾನದಿಂದ ವರ್ಗಾವಣೆಗೆ ತಡೆ
ಲಭ್ಯ ಮಾಹಿತಿ ಪ್ರಕಾರ, ಬೆಂಗಳೂರು ಹಾಗೂ ಸುತ್ತಮುತ್ತಲು ಪೋಸ್ಟಿಂಗ್ ಪಡೆದಿರುವ ಕೆಲವು ಪೊಲೀಸ್ ಅಧಿಕಾರಿಗಳಿಗೆ ಸಿದ್ದರಾಮಯ್ಯ ಬಣದ ಬೆಂಬಲ ಇದೆ. ಅದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಪಾಳಯ ಕೆಲವರಿಂದ ವಿರೋಧ ಇದೆ. ಸರ್ಕಾರದ ಸೂಚನೆಗಳನ್ನು ಅನುಸರಿಸಿ ಪೊಲೀಸ್ ಇಲಾಖೆಯು ಮುಂದಿನ ಆದೇಶದವರೆಗೆ ಹಸ್ತಾಂತರಿಸದಂತೆ ಅಥವಾ ಅಧಿಕಾರ ವಹಿಸಿಕೊಳ್ಳದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದೆ.
ವರ್ಗಾವಣೆಗೆ ಸರ್ಕಾರದಲ್ಲಿ ಕೆಲವು ನಾಯಕ ಅಸಮಾಧಾನ ವಿರೋಧ ಇದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಪರಮೇಶ್ವರ ಮತ್ತು ಡಿಜಿ ಮತ್ತು ಐಜಿಪಿ ಅಲೋಕ್ ಮೋಹನ್ ಅವರು ಇತ್ತೀಚೆಗೆ ಗೌಪ್ಯ ಸಭೆ ನಡೆಸಿದ್ದರು. ವರ್ಗಾವಣೆ ವಿಚಾರವಾಗಿಯೇ ಮಹತ್ವದ ವಿಷಯಗಳನ್ನು ಚರ್ಚಿಸಿದ್ದರು. ಈ ಹಿಂದಿನ ಡಿವೈಎಸ್‌ಪಿ ಮತ್ತು ಎಸಿಪಿಗಳ ವರ್ಗಾವಣೆ ಸರಾಗವಾಗಿ ನಡೆದಿತ್ತು. ಆದರೆ, ಪೊಲೀಸ್ ಅಧಿಕಾರಿಗಳ ವರ್ಗಾವಣೆ ಸಮಸ್ಯೆ ತಂದೊಡ್ಡಿದೆ.
ನಿಯೋಜಿತ ಸ್ಥಳದಲ್ಲಿ ಅಧಿಕಾರ ವಹಿಸಿಕೊಳ್ಳದಂತೆ ಸೂಚನೆ
ಸರ್ಕಾರದ ತಡೆ ಆದೇಶದಿಂದ ವರ್ಗವಾಗಿದ್ದ ವಜ್ರಮುನಿ.ಕೆ ಅವರನ್ನು ಬಾಂಬ್ ಪತ್ತೆ ಮತ್ತು ವಿಲೇವಾರಿ ಸ್ಕ್ವಾಡ್ (BDDS)ಆಗಿ ಬೆಂಗಳೂರಿನಿಂದ ಸಿಟಿ ಮಾರುಕಟ್ಟೆಗೆ ವರ್ಗಾಯಿಸಿದ್ದಕ್ಕೆ ಇದೀಗ ತಡೆ ಬಿದ್ದಿದೆ. ಅದೇ ರೀತಿ ಬೇಗೂರಿನಿಂದ ಮಲ್ಲೇಶ್ವರದವರೆಗೆ ಅನಿಲ್ ಕುಮಾರ್ ಎಚ್.ಡಿ ಅವರು, ಜಿಗಣಿಗೆ ಹೈಕೋರ್ಟ್ ವಿಜಿಲೆನ್ಸ್ ನಿಂದ ಎಡ್ವಿನ್ ಪ್ರದೀಪ್ ಎಸ್, ಹಲಸೂರು ಗೇಟ್ ನಿಂದ ಕುಮಾರಸ್ವಾಮಿ ಲೇಔಟ್ ವರೆಗೆ ಜಗದೀಶ್ ಆರ್ ಸೇರಿ ಕೆಲವು ಅಧಿಕಾರಿಗಳ ವರ್ಗಾವಣೆಗೆ ಆದೇಶಕ್ಕೆ ತಡೆ ನೀಡಲಾಗಿದೆ.
ಇನ್ಸ್ ಪೆಕ್ಟರ್ ಗಳಾದ ಮೋಹನ್ ಎನ್ ಹೆದ್ದಣ್ಣನವರ್ (ಕೆಜಿ ಹಳ್ಳಿ ಸಂಚಾರ), HB ಸುನೀಲ್ (ಕೆಜಿ ಹಳ್ಳಿ), ದೀಪಕ್ ಎಲ್ (ಹೆಣ್ಣೂರು ಪೊಲೀಸ್ ಠಾಣೆ), ಶಿವಸ್ವಾಮಿ ಸಿಬಿ (ಬಸವೇಶ್ವರನಗರ), ಮಂಜುನಾಥ್ ಬಿ ( ಸಿಇಎನ್, ಬಳ್ಳಾರಿ ಜಿಲ್ಲೆ), HK ರವಿಕುಮಾರ್ (ಪುಟ್ಟೇನಹಳ್ಳಿ), ಪ್ರವೀಣ್ ಬಾಬು ಜಿ (ಮಹದೇವಪುರ), ಮತ್ತು ಸಚಿನ್ ಕುಮಾರ್ (ಚಿಕ್ಕಮಗಳೂರು ಗ್ರಾಮಾಂತರ) ಅವರ ವರ್ಗಾವಣೆಗೆ ಬ್ರೇಕ್ ನೀಡಿ ಯಥಾ ಸ್ಥಿತಿಯಲ್ಲಿ ಮುಂದುವರಿಯುವಂತೆ ತಿಳಿಸಲಾಗಿದೆ.
ಎರಡೂ ಆದೇಶಗಳಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳು ವರ್ಗಾವಣೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಅವರನ್ನು ಸಂಪರ್ಕಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.












Click it and Unblock the Notifications