ಕರ್ನಾಟಕದಲ್ಲಿ ಆರೋಗ್ಯ ಕವಚ ಆಂಬುಲೆನ್ಸ್ ಸೇವೆಗೆ ಹೊಸ ರೂಪ
ಬೆಂಗಳೂರು, ಫೆಬ್ರವರಿ 19: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಆಂಬುಲೆನ್ಸ್ ಸೇವೆ ಬಹುಮುಖ್ಯ ಪಾತ್ರ ವಹಿಸಿದೆ. ಕರ್ನಾಟಕದಲ್ಲಿ ಜನ ಸಾಮಾನ್ಯರ ಜೀವ ರಕ್ಷಣೆಗೆ ಇರುವ ಆರೋಗ್ಯ ಕವಚ 108 ಆಂಬುಲೆನ್ಸ್ ಸೇವೆಯನ್ನು ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮೇಲ್ದರ್ಜೆಗೇರಿಸುವ ಯೋಜನೆಗೆ ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.
ರಾಜ್ಯದಲ್ಲಿ 108-ಆರೋಗ್ಯ ಕವಚವು ತುರ್ತು ಆರೋಗ್ಯ ಸೇವೆಯನ್ನು ನೀಡುತ್ತಿದೆ. ಆಧುನಿಕ ಕಾಲದ ಆರೋಗ್ಯ ಸೇವೆಯ ಬೇಡಿಕೆಗಳಿಗೆ ಅನುಗುಣವಾಗಿ ಆಂಬ್ಯುಲೆನ್ಸ್ ಸೇವೆ ಉನ್ನತೀಕರಿಸುವ ಅಗತ್ಯತೆ ಕಂಡು ಬಂದಿದೆ.
ಹೊಸ ಮಾದರಿಯ ಆಂಬ್ಯುಲೆನ್ಸ್ ಸೇವೆ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನಗಳ ಬಳಕೆ, ಹೊಸ ಸುಧಾರಣಾ ಕ್ರಮಗಳನ್ನು ಆಂಬ್ಯುಲೆನ್ಸ್ ಸೇವೆಯಲ್ಲಿ ತರುವ ಉದ್ದೇಶವನ್ನು ಹೊಂದಲಾಗಿದೆ ಎಂದು ಆರೊಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಗೋಲ್ಡನ್ ಅವರ್ ಬಗ್ಗೆ ಸುಧಾಕರ್ ಉಲ್ಲೇಖ:
ರೋಗಿಯ ಜೀವ ಉಳಿಸಲು ಹಲವು ಸಂದರ್ಭಗಳಲ್ಲಿ "ಗೋಲ್ಡನ್ ಅವರ್" ತುಂಬಾ ಮಹತ್ವವಾಗಿಲಿದ್ದು, ಈ ಅವಧಿಯಲ್ಲಿ ವ್ಯಕ್ತಿಗೆ ಸರಿಯಾದ ಚಿಕಿತ್ಸೆ ನೀಡಿದರೆ ಜೀವ ಉಳಿಯುತ್ತದೆ. ಇಂತಹ ಸೇವೆಯನ್ನು ಸಕಾಲಕ್ಕೆ ನೀಡಲು ಸರ್ಕಾರ ಬದ್ಧವಾಗಿದ್ದು, ಅದಕ್ಕಾಗಿಯೇ ಆಂಬ್ಯುಲೆನ್ಸ್ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆ ತರಲಾಗುತ್ತಿದೆ.
ಆರೋಗ್ಯಕರ ಕರ್ನಾಟಕ ನಿರ್ಮಾಣದ ಗುರಿ:
ರಾಜ್ಯ ಸರ್ಕಾರ ಆರೋಗ್ಯಕರ ಕರ್ನಾಟಕ ನಿರ್ಮಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಆರೋಗ್ಯ ವಲಯದ ಎಲ್ಲಾ ಆಯಾಮಗಳಲ್ಲಿ ಮಹತ್ವಕಾಂಕ್ಷಿ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ತುರ್ತು ಆರೋಗ್ಯ ಸೇವೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದ್ದು, ಈಗಾಗಲೇ ತಜ್ಞರ ಸಲಹಾ ಸಮಿತಿ ಹಾಗೂ ಅಧಿಕಾರಿಗಳ ಜೊತೆ ಹಲವು ಸುತ್ತಿನ ಸಭೆ ನಡೆಸಲಾಗಿದೆ. ತದನಂತರದಲ್ಲಿ ಹೊಸ ತಂತ್ರಜ್ಞಾನದ ಬಳಕೆ ಮತ್ತು ಆಂಬ್ಯುಲೆನ್ಸ್ ಆಧುನಿಕರಣಕ್ಕೆ ಸಿದ್ಧತೆ ನಡೆಸಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
750 ಆಂಬ್ಯುಲೆನ್ಸ್:
ರಾಷ್ಟ್ರೀಯ ಆರೋಗ್ಯ ಅಭಿಯಾನದ ಮಾರ್ಗಸೂಚಿ ಪ್ರಕಾರ, ಒಂದು ಲಕ್ಷ ಜನಸಂಖ್ಯೆಗೆ ಒಂದು ಬೇಸಿಕ್ ಲೈಫ್ ಸಪೋರ್ಟ್ (ಬಿ.ಎಲ್.ಎಸ್.) ಆಂಬ್ಯುಲೆನ್ಸ್ ಮತ್ತು ಪ್ರತಿ 5 ಲಕ್ಷ ಜನಸಂಖ್ಯೆಗೆ ಒಂದು ಅಡ್ವಾನ್ಸ್ಡ್ ಲೈಫ್ ಸರ್ಪೋಟ್ ( ಎ.ಎಲ್.ಎಸ್) ಆಂಬ್ಯುಲೆನ್ಸ್ ಇರಬೇಕು.
ಒಂದು ಆಂಬ್ಯುಲೆನ್ಸ್ 24 ಗಂಟೆಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಪ್ರಕರಣಗಳನ್ನು ನಿರ್ವಹಣೆ ಮಾಡಿದರೆ ಮತ್ತು 120 ಕಿ.ಮೀ. ಗಿಂತ ಹೆಚ್ಚು ದೂರ ಕ್ರಮಿಸಿದರೆ, ಅಂತಹ ಕಡೆ ಮತ್ತೊಂದು ಆಂಬ್ಯುಲೆನ್ಸ್ ಒದಗಿಸಬೇಕಾಗುತ್ತದೆ. ಈ ಮಾರ್ಗಸೂಚಿಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ತರುವ ಮಹತ್ವಕಾಂಕ್ಷೆಯನ್ನು ಸರ್ಕಾರ ಹೊಂದಿದೆ. ಹೀಗಾಗಿ ಆಂಬ್ಯುಲೆನ್ಸ್ ಸಂಖ್ಯೆಯನ್ನು 710 ರಿಂದ 750ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಈ ಪೈಕಿ, ಶೇ.40 ಎ.ಎಲ್.ಎಸ್ ಮತ್ತು ಶೇ.60 ಬಿ.ಎಲ್.ಎಸ್.ಆಗಿರಲಿವೆ. ಸರ್ಕಾರ ಹೊಸದಾಗಿ 380 ಆಂಬ್ಯುಲೆನ್ಸ್ ಖರೀದಿ ಮಾಡಲಿದೆ. ಈ ಪೈಕಿ, 340 ಹಳೆಯ ಆಂಬ್ಯುಲೆನ್ಸ್ ಗಳ ಬದಲಿಯಾಗಿ ಬರಲಿದ್ದು, ಉಳಿದ 40 ಹೊಸ ಆಂಬ್ಯುಲೆನ್ಸ್ ಆಗಿರುತ್ತವೆ.
ಕಾಲ್ ಸೆಂಟರ್ ಉನ್ನತೀಕರಣ:
ಆಂಬ್ಯುಲೆನ್ಸ್ ಸೇವೆಯಲ್ಲಿ ಕಾಲ್ ಸೆಂಟರ್ ಮುಖ್ಯ ಪಾತ್ರ ವಹಿಸುತ್ತದೆ. ಸಾರ್ವಜನಿಕರು ಹಾಗೂ ಆಂಬ್ಯುಲೆನ್ಸ್ ಸಿಬ್ಬಂದಿ ನಡುವೆ ಈ ಕಾಲ್ ಸೆಂಟರ್ ಸಂಪರ್ಕ ಸೇತುವೆ ಆಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆ ಕಾಲ್ ಸೆಂಟರ್ ಸೀಟುಗಳ ಸಂಖ್ಯೆಯನ್ನು 54 ರಿಂದ 75ಕ್ಕೆ ಏರಿಸಲಾಗುತ್ತದೆ. ಈ ಕಮಾಂಡ್ ಸೆಂಟರ್, ಆಂಬ್ಯುಲೆನ್ಸ್ ಜಿಪಿಎಸ್ ಟ್ರ್ಯಾಕಿಂಗ್, ಸಿಬ್ಬಂದಿಯ ಬಯೋಮೆಟ್ರಿಕ್ ಹಾಜರಾತಿ, ಆಂಬ್ಯುಲೆನ್ಸ್ ಸೇವೆಯ ಲೈವ್ ಸ್ಟ್ರೀಮಿಂಗ್, ಆನ್ ಲೈನ್ ಮಾನವ ಸಂಪನ್ಮೂಲ ನಿರ್ವಹಣೆ, ರೋಗಿಗಳ ಆರೈಕೆಯ ಎಲೆಕ್ಟ್ರಾನಿಕ್ ದಾಖಲೆಗಳ ನಿರ್ವಹಣೆ, ಅಹವಾಲು ಸ್ವೀಕಾರ ಮೊದಲಾದ ಹೊಸ ಸೌಲಭ್ಯ ಹೊಂದಲಿದೆ.
ಹೊಸ ವ್ಯವಸ್ಥೆ:
ರಾಜ್ಯದಲ್ಲಿ ಈ ಮೊದಲು ಆಂಬ್ಯುಲೆನ್ಸ್ ನಿರ್ವಹಣೆ ಮಾಡುವ ಏಜೆನ್ಸಿಯನ್ನು ದರದ ಆಧಾರದಲ್ಲಿ ಮಾತ್ರ ಪರಿಗಣಿಸಲಾಗುತ್ತಿತ್ತು. ಈಗ ದರ ಹಾಗೂ ಗುಣಮಟ್ಟದ ಕಾರ್ಯನಿರ್ವಹಣೆಯನ್ನು ಪ್ರಮುಖ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ಯಾವುದೇ ಸರ್ಕಾರಕ್ಕೆ 6 ವರ್ಷಗಳ ಕಾಲ 100 ಸೀಟುಗಳ ಕಾಲ್ ಸೆಂಟರ್ ಸೇವೆ ಒದಗಿಸಿರುವುದು, ಯಾವುದೇ ಸರ್ಕಾರಕ್ಕೆ 500 ಆಂಬ್ಯುಲೆನ್ಸ್ ಸೇವೆ ನೀಡಿರುವುದು ಸೇರಿದಂತೆ ಹಲವು ನಿಗದಿತ ಷರತ್ತುಗಳನ್ನು ಹೊಸ ಟೆಂಡರ್ ನಲ್ಲಿ ಸೇರಿಸಲಾಗಿದೆ.
ಅಲ್ಲದೆ, ಸೇವೆ ನೀಡುವ ಏಜೆನ್ಸಿಯವರು, ತಂತ್ರಜ್ಞಾನ ಬಳಸಿ ಆಸ್ಪತ್ರೆಗಳನ್ನು ಮ್ಯಾಪ್ ಮಾಡಿರಬೇಕು. ಆಂಬ್ಯುಲೆನ್ಸ್ ಸೇವೆ ನೀಡುವಾಗ ಅತಿ ಸಮೀಪದ ಆಸ್ಪತ್ರೆಯು ಸ್ವಯಂಚಾಲಿತವಾಗಿ ಆಯ್ಕೆ ಆಗುವಂತಹ ವ್ಯವಸ್ಥೆ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ. ಇದರಿಂದ ಸೇವೆಯ ಗುಣಮಟ್ಟದಲ್ಲಿ ಯಾವುದೇ ಕೊರತೆ ಆಗುವುದಿಲ್ಲ ಎಂದು ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ.












Click it and Unblock the Notifications