8 KAS ಅಧಿಕಾರಿಗಳ ವರ್ಗಾವಣೆ, ಎಸ್‌ಐ ಗಳ ವರ್ಗಾವಣೆಗೆ ಬ್ರೇಕ್
ಬೆಂಗಳೂರು, ಸೆಪ್ಟೆಂಬರ್ 25: ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಇನ್ನೂ ಮುಗಿದಂತಿಲ್ಲ. ಇಂದು ರಾಜ್ಯ ಸರ್ಕಾರವು 8 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.
ಕೆಎಎಸ್ ಅಧಿಕಾರಿಗಳ ವರ್ಗಾವಣೆ ಜೊತೆಗೆ, 141 ಸಬ್ ಇನ್ಸ್ಪೆಕ್ಟರ್‌ಗಳ ವರ್ಗಾವಣೆಯನ್ನೂ ತಡೆ ಹಿಡಿದಿದೆ. ಕೆಎಎಸ್ ಅಧಿಕಾರಿಗಳ ವರ್ಗಾವಣೆ ತಕ್ಷಣದಿಂದಲೇ ಜಾರಿಗೆ ಬರಲಿದೆ.
ಅನುರಾಧ ಜಿ. (ಅಪರ ಜಿಲ್ಲಾಧಿಕಾರಿ ಶಿವಮೊಗ್ಗ ಜಿಲ್ಲೆ), ಸುರೇಶ್ ಬಿ.ಇಟ್ನಾಳ್ (ಅಪರ ಜಿಲ್ಲಾಧಿಕಾರಿ ಉತ್ತರ ಕನ್ನಡ ಜಿಲ್ಲೆ), ಅನಿತಾ ಲಕ್ಷ್ಮಿ (ವಿಶೇಷ ಜಿಲ್ಲಾಧಿಕಾರಿ, ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ), ವೈಶಾಲಿ ಎಂ.ಎಲ್ (ಅಪರ ಜಿಲ್ಲಾಧಿಕಾರಿ, ಹಾಸನ), ಜಿ.ವಿ.ನಾಗರಾಜ್ (ಪ್ರಧಾನ ವ್ಯವಸ್ಥಾಪಕ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ), ಪಾತರಾಜು.ವಿ (ಉಪಕಾರ್ಯದರ್ಶಿ ಬೆಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ), ವಿಜಯ್ ಕುಮಾರ್ ಹೊನಕೇರಿ (ಜಿಲ್ಲಾ ವ್ಯವಸ್ಥಾಪಕರು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ), ಪ್ರೀತಂ ನಸ್ಲಾಪುರೆ (ಆಯುಕ್ತ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ) ವರ್ಗಾವಣೆ ಆಗಿರುವ ಕೆಎಎಸ್ ಅಧಿಕಾರಿಗಳು.

ಆದರೆ ನಿನ್ನೆಯಷ್ಟೆ ಹೊರಡಿಸಿದ್ದ 141 ಸಬ್ ಇನ್ಸ್ಪೆಕ್ಟರ್‌ಗಳ ವರ್ಗಾವಣೆ ಆದೇಶವನ್ನು ತಡೆ ಹಿಡಿಯಲಾಗಿದೆ. ಮೈತ್ರಿ ಸರ್ಕಾರದ ಕೆಲವು ಶಾಸಕರು ಎಸ್‌ಐ ವರ್ಗಾವಣೆಗೆ ವಿರೋಧ ಪಡಿಸಿದರು ಎಂಬ ಕಾರಣಕ್ಕೆ ವರ್ಗಾವಣೆಯನ್ನು ತಡೆಹಿಡಿಯಲಾಗಿದೆ.
ಮೈತ್ರಿ ಸರ್ಕಾರದಲ್ಲಿ ಅಸಮಾಧಾನ ಮೂಡಲು ವರ್ಗಾವಣೆಯೂ ಪ್ರಮುಖ ಕಾರಣ ಎನ್ನಲಾಗಿತ್ತು. ಸಮನ್ವಯ ಸಮಿತಿಯ ಗಮನಕ್ಕೆ ತಂದ ನಂತರವೇ ವರ್ಗಾವಣೆಗಳನ್ನು ಮಾಡಬೇಕು ಎಂದು ಸಹ ಹೇಳಲಾಗಿತ್ತು. ಆದರೂ ಸಹ ಈಗ ಮತ್ತೆ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ.












Click it and Unblock the Notifications