ಬೆಂಗಳೂರು ಸೇರಿ ರಾಜ್ಯದ 6 ಪಾಲಿಕೆಗಳ ಚುನಾವಣೆಗೆ ಭರ್ಜರಿ ಸಿದ್ಧತೆ!
ಬೆಂಗಳೂರಿನ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ಪ್ರಮುಖ 6 ಮಹಾನಗರ ಪಾಲಿಕೆಗಳ ಚುನಾವಣೆಗೆ ಮುಹೂರ್ತ ಕೂಡಿ ಬಂದಿದೆ. ರಾಜ್ಯದಲ್ಲಿ ಈಚೆಗೆ ನಡೆದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದೆ. ಇದೀಗ ಸರ್ಕಾರದ ಹಂತದಲ್ಲಿ ಕೆಲವೊಂದು ಗೊಂದಲಗಳು ಇದ್ದರೂ. ಬೆಂಗಳೂರು ಹೊರತುಪಡಿಸಿ ಇನ್ನುಳಿದ ಬಹುತೇಕ ಪಾಲಿಕೆಗಳ ಚುನಾವಣೆಯಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇದೆ. ಆದರೆ ಹಲವು ಪಾಲಿಕೆಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ ಸವಾಲುವೊಡ್ಡುವ ಸಾಧ್ಯತೆ ದಟ್ಟವಾಗಿದೆ. ಈ ರೀತಿ ಇರುವಾಗಲೇ ಮೈಸೂರು ಸೇರಿ 5 ಮಹಾನಗರ ಪಾಲಿಕೆಗಳು ಹಾಗೂ ರಾಜ್ಯದ ಪ್ರಮುಖ ಮಹಾನಗರ ಪಾಲಿಕೆಯಾಗಿರುವ ಬೆಂಗಳೂರು ಪಾಲಿಕೆಯ ಚುನಾವಣೆಯ ಬಗ್ಗೆಯೂ ಚರ್ಚೆ ನಡೆದಿದೆ.
ಕರ್ನಾಟಕದಲ್ಲಿ ಇದೀಗ ಮತ್ತೊಮ್ಮೆ ಚುನಾವಣೆ ಪರ್ವ ಕಾಲ ಪ್ರಾರಂಭವಾಗಿದೆ. ಮೈಸೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ 5 ಮಹಾನಗರ ಪಾಲಿಕೆಗಳ ಚುನಾವಣೆಯನ್ನು ಇದೇ ವರ್ಷ ನಡೆಸಲಾಗುವುದು ಎಂದು ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಅವರು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರು ಚುನಾವಣೆಯ ಬಗ್ಗೆ ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ ಶಿವಕುಮಾರ್ ಅವರು ಸಹ ಮಾತನಾಡಿದ್ದಾರೆ.

ಜಿ.ಎಸ್. ಸಂಗ್ರೇಶಿ ಅವರು, ಮೈಸೂರು ಸೇರಿದಂತೆ ವಿವಿಧ ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ಐದು ಮಹಾನಗರ ಪಾಲಿಕೆಗಳಲ್ಲೂ ಮತದಾರರ ಪಟ್ಟಿಯನ್ನು ಸಿದ್ಧ ಮಾಡಿಕೊಳ್ಳಲಾಗಿದೆ. ಇದೇ ವರ್ಷ ತುಮಕೂರು, ಮೈಸೂರು, ಮಂಗಳೂರು, ಶಿವಮೊಗ್ಗ ಹಾಗೂ ದಾವಣಗೆರೆ ಮಹಾನಗರ ಪಾಲಿಕೆಗಳ ಚುನಾವಣೆ ನಡೆಯಬೇಕಿದೆ. ಸರ್ಕಾರ ಮೀಸಲು ಪಟ್ಟಿಯನ್ನು ಪ್ರಕಟ ಮಾಡುತ್ತಿಲ್ಲ. ಹೀಗಾಗಿ ಚುನಾವಣೆ ವಿಳಂಬವಾಗುತ್ತಿದೆ ಎನ್ನುವ ಆರೋಪಕ್ಕೆ ಉತ್ತರಿಸಿರುವ ಅವರು, ಸರ್ಕಾರ ಮೀಸಲು ಪಟ್ಟಿ ಪ್ರಕಟ ಮಾಡಿದರೆ ಸರಿ. ಇಲ್ಲದಿದ್ದರೆ ಹೈಕೋರ್ಟ್ ಮೊರೆ ಹೋಗಿ ಹಳೆಯ ಮೀಸಲು ಪಟ್ಟಿಯ ಅನ್ವಯ ಚುನಾವಣೆ ನಡೆಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಇನ್ನು ಈಗಾಗಲೇ ಈ ಐದು ಮಹಾನಗರ ಪಾಲಿಕೆಗಳ ಚುನಾವಣೆಯನ್ನು ನಡೆಸುವುದಕ್ಕೆ ಸಂಬಂಧಿಸಿದಂತೆ ಮೀಸಲು ಪಟ್ಟಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ.
ಐದು ವರ್ಷಗಳಿಂದ ನಡೆಯದ ಚುನಾವಣೆ!
ಇನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯು ಕಳೆದ 5 ವರ್ಷಗಳಿಂದ ನಡೆದಿಲ್ಲ. ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ನಾಗರಿಕ ಸಂಸ್ಥೆಗಳು ಹಾಗೂ ಕೆಲವರು ಈಗಾಗಲೇ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರವು ಬೆಂಗಳೂರು ಪಾಲಿಕೆಯನ್ನು ವಿಭಜನೆ ಮಾಡಿದ ಮೇಲೆ ಒಂದೇ ಬಾರಿ ಚುನಾವಣೆ ನಡೆಸುವ ನಿಲುವಿನಲ್ಲಿ ಇದೆ.

ಬೆಂಗಳೂರಿ ಪಾಲಿಕೆ ಚುನಾವಣೆ ನಡೆಯದೆ ಬೆಂಗಳೂರಿನ ಸ್ಥಳೀಯ ಹಂತದ ಸಮಸ್ಯೆಗಳು ಹೆಚ್ಚಾಗಿವೆ. ಸ್ವಚ್ಛತೆ ಹಾಗೂ ಮೂಲಸೌಕರ್ಯದ ಸಮಸ್ಯೆಗಳು ಹೆಚ್ಚಾಗಿವೆ.












Click it and Unblock the Notifications