Karnataka government employee; ರಾಜ್ಯ ಕಾರ್ಯಕಾರಣಿ ಸಭೆ ನಿರ್ಣಯ
ಬೆಂಗಳೂರು, ಜನವರಿ 19; ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. 7ನೇ ವೇತನ ಆಯೋಗದ ವೇತನ ಪರಿಷ್ಕರಣೆಯ ಸೌಲಭ್ಯವನ್ನು ಸರ್ಕಾರದಿಂದ ಅನುಷ್ಠಾನಗೊಳಿಸುವುದು ಸೇರಿದಂತೆ ಹಲವು ನಿರ್ಣಯಗಳನ್ನು ಸಭೆಯಲ್ಲಿ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸಿ. ಎಸ್. ಷಡಾಕ್ಷರಿ ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. 17/1/2022ರಂದು ಸಭೆ ನಡೆದಿದೆ.
ಫೆಬ್ರವರಿ 2023ರ ಅಂತ್ಯದಲ್ಲಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಬೃಹತ್ ಸಮಾವೇಶವನ್ನು ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಏರ್ಪಡಿಸಲು ಸಹ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಈ ಸಮ್ಮೇಳನದಲ್ಲಿ ಸುಮಾರು 6 ಲಕ್ಷ ಸರ್ಕಾರಿ ನೌಕರರನ್ನು ರಾಜ್ಯದ ಎಲ್ಲಾ ತಾಲೂಕು, ಜಿಲ್ಲೆಗಳಿಂದ ಸಂಘಟಿಸಿ ಸಮ್ಮೇಳನವನ್ನು ಅಭೂತಪೂರ್ವವಾಗಿ ಯಶಸ್ವಿಗೊಳಿಸಲು ತೀರ್ಮಾನಿಸಲಾಗಿದೆ.
7ನೇ ವೇತನ ಆಯೋಗದ ವೇತನ ಪರಿಷ್ಕರಣೆಯ ಸೌಲಭ್ಯವನ್ನು ಸರ್ಕಾರದಿಂದ ಅನುಷ್ಠಾನಗೊಳಿಸುವುದು ಎಂಬ ನಿರ್ಣಯ ಸಹ ಕೈಗೊಳ್ಳಲಾಗಿದೆ. ಈಗಾಗಲೇ ಸರ್ಕಾರ ವೇತನ ಆಯೋಗ ರಚನೆ ಮಾಡಿದೆ.
ಸಮ್ಮೇಳನದಲ್ಲಿ ಎನ್. ಪಿ. ಎಸ್. ಯೋಜನೆಯನ್ನು ರದ್ದುಗೊಳಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡಲು ನಿರ್ಧರಿಸಲಾಗಿದೆ.
ರಾಜ್ಯ ಸರ್ಕಾರಿ ನೌಕರರ ನಗದುರಹಿತ ಆರೋಗ್ಯ ಯೋಜನೆಯನ್ನು ಸರ್ಕಾರದಿಂದ ಅನುಷ್ಠಾನಗೊಳಿಸುವುದು. ಈ ಬೃಹತ್ ಸಮ್ಮೇಳನದಲ್ಲಿ ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯದಿಂದ ಭಾಗವಹಿಸುವ ಎಲ್ಲಾ ಸರ್ಕಾರಿ ನೌಕರರಿಗೆ ಓ.ಓ.ಡಿ. ಸೌಲಭ್ಯವನ್ನು ಮಂಜೂರು ಮಾಡಿಸುವುದು ಎಂಬ ನಿರ್ಣಯ ಮಾಡಲಾಗಿದೆ.
ಮೇಲ್ಕಂಡ ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಬೃಹತ್ ಸಮ್ಮೇಳನದ ವಿವರಗಳನ್ನು ಪ್ರತ್ಯೇಕವಾಗಿ ತಿಳಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕರ್ನಾಟಕ ಸರ್ಕಾರದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು ಮಂಜೂರಾಗಿರುವ ಹುದ್ದೆಗಳು 7,69,981. ಕಾರ್ಯ ನಿರ್ವಹಣೆ ಮಾಡುತ್ತಿರುವ ಹುದ್ದೆಗಳು 5,11,272 ಮತ್ತು ಖಾಲಿ ಇರುವ ಹುದ್ದೆಗಳು 2,58,709 ಆಗಿದೆ.












Click it and Unblock the Notifications