Government Employees: ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್: GPF ಖಾತೆಯ ಹಣಕ್ಕೆ ಶೇ.7.1 ಬಡ್ಡಿ ನಿಗದಿ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನೌಕರರಿಗೆ ಸಂಬಂಧಿಸಿದ ಸಾಮಾನ್ಯ ಭವಿಷ್ಯ ನಿಧಿ (GPF) ಖಾತೆಯಲ್ಲಿರುವ ಶಿಲ್ಕಿನ ಮೇಲಿನ ಬಡ್ಡಿ ದರವನ್ನು ರಾಜ್ಯ ಸರ್ಕಾರ ನಿಗದಿಪಡಿಸಿದೆ. 2026ರ ಜನವರಿ 1ರಿಂದ ಮಾರ್ಚ್ 31ರವರೆಗಿನ ಅವಧಿಗೆ ವಾರ್ಷಿಕ ಶೇ.7.1ರ ಬಡ್ಡಿ ದರ ಅನ್ವಯವಾಗಲಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.
ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ ಈ ಕುರಿತು ಮಾಹಿತಿ ನೀಡಿದ್ದು, ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ವಂತಿಕೆದಾರರ GPF ಖಾತೆಯಲ್ಲಿ ಜಮೆಯಾಗಿರುವ ಶಿಲ್ಕಿನ ಮೇಲೆ ನಿಗದಿತ ಅವಧಿಗೆ ಶೇ.7.1ರ ದರದಲ್ಲಿ ಬಡ್ಡಿ ಲೆಕ್ಕ ಹಾಕಲಾಗುತ್ತದೆ.

GPF ಎಂದರೇನು?
ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ (GPF) ರಾಜ್ಯ ಸರ್ಕಾರಿ ನೌಕರರಿಗೆ ಲಭ್ಯವಿರುವ ಉಳಿತಾಯ ಯೋಜನೆಯಾಗಿದೆ. ಸರ್ಕಾರಿ ನೌಕರರು ತಮ್ಮ ವೇತನದಿಂದ ನಿಗದಿತ ಮೊತ್ತವನ್ನು GPF ಖಾತೆಗೆ ವಂತಿಕೆಯಾಗಿ ಜಮಾ ಮಾಡುತ್ತಾರೆ. ಈ ಹಣಕ್ಕೆ ಸರ್ಕಾರ ನಿಗದಿಪಡಿಸುವ ಬಡ್ಡಿ ದರದಂತೆ ಬಡ್ಡಿ ಸೇರ್ಪಡೆಯಾಗುತ್ತದೆ. ನೌಕರರ ಸೇವಾವಧಿಯಲ್ಲಿ ಈ ಮೊತ್ತ ಸಂಗ್ರಹವಾಗುತ್ತಿದ್ದು, ನಿಯಮಾನುಸಾರ ನಿವೃತ್ತಿಯ ಸಂದರ್ಭದಲ್ಲಿ ಜಮೆಯಾಗಿರುವ ಮೊತ್ತವನ್ನು ಪಡೆಯಲು ಅವಕಾಶವಿರುತ್ತದೆ.
ಶೇ.7.1 ಬಡ್ಡಿ ದರ ಅನ್ವಯ
2026ರ ಜನವರಿ 1ರಿಂದ ಮಾರ್ಚ್ 31ರವರೆಗೆ GPF ಖಾತೆಯಲ್ಲಿನ ಶಿಲ್ಕಿಗೆ ಶೇ.7.1 ವಾರ್ಷಿಕ ಬಡ್ಡಿ ದರ ಅನ್ವಯವಾಗಲಿದೆ. ಇದರಿಂದ ಈ ಅವಧಿಯಲ್ಲಿ GPF ಖಾತೆಯಲ್ಲಿ ಹಣ ಹೊಂದಿರುವ ರಾಜ್ಯ ಸರ್ಕಾರಿ ನೌಕರರಿಗೆ ನಿಗದಿತ ದರದಲ್ಲಿ ಬಡ್ಡಿ ಲಭ್ಯವಾಗಲಿದೆ. GPF ಮೂಲಕ ಸರ್ಕಾರಿ ನೌಕರರು ದೀರ್ಘಾವಧಿಗೆ ಉಳಿತಾಯ ಮಾಡಬಹುದಾಗಿದ್ದು, ಸೇವಾ ಅವಧಿಯಲ್ಲಿ ಸಂಗ್ರಹವಾಗುವ ಮೊತ್ತವು ನಿವೃತ್ತಿ ನಂತರದ ಆರ್ಥಿಕ ಭದ್ರತೆಗೆ ಸಹಕಾರಿಯಾಗಲಿದೆ.
ಸರ್ಕಾರಿ ನೌಕರರ ಜೊತೆ ಸಿಎಂ ಡಿ.ಕೆ. ಶಿವಕುಮಾರ್ ವಿಡಿಯೋ ಸಂವಾದ
ರಾಜ್ಯದ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ನೇರ ವಿಡಿಯೋ ಸಂವಾದ ನಡೆಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರು ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸುವಂತೆ ಸೂಚನೆ ನೀಡಿದ್ದಾರೆ.
ಆಗಸ್ಟ್ 11, 2026ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ವೇಳೆ ಮುಖ್ಯಮಂತ್ರಿ ರಾಜ್ಯದ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಹಾಗೂ ನೌಕರರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ನೇರವಾಗಿ ಸಂವಾದ ನಡೆಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಾರ್ಯದರ್ಶಿಗಳು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಖುದ್ದಾಗಿ ಹಾಜರಿರಲಿದ್ದಾರೆ. ಇದೇ ವೇಳೆ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ತಮ್ಮ ಕೇಂದ್ರಸ್ಥಾನಗಳಿಂದಲೇ ವಿಡಿಯೋ ಸಂವಾದದಲ್ಲಿ ಭಾಗವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿಗಳು ನಿರ್ದೇಶನ ನೀಡಿದ್ದಾರೆ.
ಎಲ್ಲಾ ಜಿಲ್ಲಾಧಿಕಾರಿಗಳು (DC), ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು (CEO), ಪೊಲೀಸ್ ವರಿಷ್ಠಾಧಿಕಾರಿಗಳು (SP) ಸೇರಿದಂತೆ ಸಂಬಂಧಪಟ್ಟ ಎಲ್ಲಾ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗುವಂತೆ ಸೂಚಿಸಲಾಗಿದೆ.
ಸರ್ಕಾರದ ಆಡಳಿತ ವ್ಯವಸ್ಥೆಯ ಕಾರ್ಯವೈಖರಿ, ವಿವಿಧ ಇಲಾಖೆಗಳ ಪ್ರಗತಿ ಹಾಗೂ ಕೆಳಹಂತದ ಅಧಿಕಾರಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿ ನೇರವಾಗಿ ಮಾಹಿತಿ ಪಡೆಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದಿನ ವಿಡಿಯೋ ಸಂವಾದಕ್ಕೆ ಮಹತ್ವ ಬಂದಿದೆ.


Click it and Unblock the Notifications
