Government Employee; ಒಮ್ಮೆ ಮಾತ್ರ ಆಯ್ಕೆ, ಹಳೆ ಪಿಂಚಣಿ ಯೋಜನೆಗೆ ಸರ್ಕಾರಿ ನೌಕರರಿಗೆ ಷರತ್ತು
ಬೆಂಗಳೂರು, ಜೂನ್ 10: ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ ಯೋಜನೆ (OPS) ಮರು ಜಾರಿ ಸಂಬಂಧ ಈಗಾಗಲೇ ಆದೇಶ ಹೊರಡಿಸಿದೆ. ಆದರೆ ಇದು ಎಲ್ಲಾ ಸರ್ಕಾರಿ ನೌಕರರಿಗೆ ಅನ್ವಯವಾಗುವುದಿಲ್ಲ.
ಸರ್ಕಾರದ ಆದೇಶ ಅನ್ವಯ ದಿನಾಂಕ 01/04/2006ರ ಪೂರ್ವದಲ್ಲಿ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಳೆಯ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲಾಗುತ್ತದೆ.

ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ವಾಪಸ್ ಆಗಲು ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ದಿನಾಂಕ 30/06/2024 ಕೊನೆಯ ದಿನವಾಗಿದೆ. ಒಂದು ವೇಳೆ ಆಯ್ಕೆಗಾಗಿ ಅರ್ಜಿಯನ್ನು ಸಲ್ಲಿಕೆ ಮಾಡದಿದ್ದಲ್ಲಿ ಹೊಸ ಪಿಂಚಣಿ ಯೋಜನೆಯಲ್ಲಿಯೇ ಅವರು ಮುಂದುವರೆಯಲಿದ್ದಾರೆ.
ಒಂದು ಬಾರಿ ಮಾತ್ರ ಆಯ್ಕೆಗೆ ಅವಕಾಶ: ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಮರಳಲು ಒಮ್ಮೆ ಮಾತ್ರ ಅವಕಾಶ ಇರುತ್ತದೆ. ನೌಕರರು ಕೊನೆಯ ದಿನಾಂಕದ ತನಕ ಕಾಯದೇ ಬದಲಾವಣೆ ಬಯಸುವುದಾದರೆ ಬೇಗ ಅರ್ಜಿ ಸಲ್ಲಿಕೆ ಮಾಡಿ ಎಂದು ಸೂಚನೆ ನೀಡಲಾಗಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಒಪಿಎಸ್ ಅನುಷ್ಠಾನ ಹೋರಾಟಗಾರರ ಸಂಘ ಎಲ್ಲಾ ಸರ್ಕಾರಿ ನೌಕರರಿಗೂ ಸಹ ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ವಾಪಸ್ ಆಗಲು ಅವಕಾಶ ನೀಡಬೇಕು ಎಂದು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ ಈ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ.
ಎನ್‌ಪಿಎಸ್‌ನಿಂದ ಒಪಿಎಸ್‌ಗೆ ಮರಳುವ ಇಚ್ಛಿಸುವ ನೌಕರರಿಗೆ ಷರತ್ತುಗಳನ್ನು ಹಾಕಲಾಗಿದೆ.
ದಿನಾಂಕ 01/04/2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ಸರ್ಕಾರಿ ನೌಕರರು ಹಿಂದಿನ ಡಿಫೆನ್ಡ್ ಪಿಂಚಣಿ ಯೋಜನೆಗೆ ಒಳಪಡಲು ಅರ್ಹರು.
ಆದರೆ ನೌಕರರು ಮರಳಲು ಇಚ್ಚಿಸಿದಲ್ಲಿ ತಮ್ಮ ಅಭಿಮತವನ್ನು ನಿಗದಿತ ನಮೂನೆಯಲ್ಲಿ ದಿನಾಂಕ 30/06/2024ರೊಳಗೆ ಸಕ್ಷಮ ನೇಮಕಾತಿ ಪ್ರಾಧಿಕಾರಕ್ಕೆ ನೇರವಾಗಿ ಸಲ್ಲಿಸತಕ್ಕದ್ದು. ಅರ್ಜಿ ಸಲ್ಲಿಸದಿದ್ದಲ್ಲಿ ಹೊಸ ಪಿಂಚಣಿ ಯೋಜನೆಯಲ್ಲಿಯೇ ಮುಂದುವರೆಯಲಿದ್ದಾರೆ.
ಸರ್ಕಾರಿ ನೌಕರರು ಈ ಆಯ್ಕೆಯನ್ನು ಒಂದು ಬಾರಿಗೆ ಮಾತ್ರ ಚಲಾಯಿಸಲು ಅವಕಾಶವಿರುತ್ತದೆ. ಒಂದು ಬಾರಿ ಮಾಡಿಕೊಂಡ ಆಯ್ಕೆಯನ್ನು ಬದಲಾಯಿಸಲು ಅವಕಾಶವಿಲ್ಲ ಎಂದು ಈಗಾಗಲೇ ಸರ್ಕಾರ ಸ್ಪಷ್ಟಪಡಿಸಿದೆ.
ನೌಕರರ ಆಯ್ಕೆಗನುಸಾರ ಅವರು ಹಿಂದಿನ ಡಿಫೆನ್ಡ್ ಪಿಂಚಣಿ ಯೋಜನೆಗೊಳಪಡಲು ನಿಗದಿತ ಅರ್ಹತೆಯನ್ನು ಹೊಂದಿರುವುದನ್ನು ಸಕ್ಷಮ ನೇಮಕಾತಿ ಪ್ರಾಧಿಕಾರವು ಖಚಿತಪಡಿಸಿಕೊಂಡು ದಿನಾಂಕ 31/07/2024 ರೊಳಗಾಗಿ ಅಂತಹ ನೌಕರರನ್ನು ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೊಳಪಡಿಸಲು ಶಿಫಾರಸ್ಸಿನೊಂದಿಗೆ ಇಲಾಖಾ ಮುಖ್ಯಸ್ಥರಿಗೆ ಕ್ರೋಢೀಕೃತ ಪ್ರಸ್ತಾವನೆಯನ್ನು ಸಲ್ಲಿಸತಕ್ಕದ್ದು ಎಂದು ಈಗಾಗಲೇ ಹಣಕಾಸು ಇಲಾಖೆ ಆದೇಶ ಹೊರಡಿಸಿದೆ.
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆ ಪ್ರಧಾನ ನಿರ್ದೇಶಕರು ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆಯಿಂದ ಹಳೆಯ ಪಿಂಚಣಿ ಯೋಜನೆಗೆ ಮರಳಲು ಒಮ್ಮೆ ಮಾತ್ರ ಅವಕಾಶ ಇರುತ್ತದೆ. ಕೊನೆಯ ದಿನಾಂಕದ ತನಕ ಕಾಯದೇ ಬೇಗ ಅರ್ಜಿ ಸಲ್ಲಿಕೆ ಮಾಡಿ, ಅರ್ಜಿ ಸಲ್ಲಿಸುವ ಮೊದಲು ಷರತ್ತುಗಳನ್ನು ತಿಳಿದುಕೊಳ್ಳಿ ಎಂದು ಸರ್ಕಾರಿ ನೌಕರರಿಗೆ ಮನವಿ ಮಾಡಿದ್ದಾರೆ.
ಕೇಂದ್ರ ಸರ್ಕಾರ ವಿವಿಧ ಇಲಾಖೆಗಳ ನೌಕರರು ಸಹ ಹೊಸ ಪಿಂಚಣಿ ವ್ಯವಸ್ಥೆ ವಿರೋಧಿಸಿದರು. ಹಳೆಯ ಪಿಂಚಣಿ ಯೋಜನೆ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ಆಗ ಸರ್ಕಾರ ದಿನಾಂಕ 11/12/2023ರ ಮೊದಲು ನೇಮಕಾತಿ/ ನೇಮಕಾತಿಗಾಗಿ ಜಾಹೀರಾತು/ ಅಧಿಸೂಚಿಸಲಾದ ಹುದ್ದೆ ಅಥವಾ ರಿಕ್ತ ಸ್ಥಾನದ ಎದುರಾಗಿ ನೇಮಕಾತಿ ಹೊಂದಿ ದಿನಾಂಕ 01/01/2004ರಂದು ಅಥವಾ ತದನಂತರ ಸೇವೆಗೆ ಸೇರಿದ ನೌಕರರಿಗೆ ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿತು. ಬಳಿಕ ರಾಜ್ಯ ಸರ್ಕಾರವು ಸಹ ಇದೇ ಮಾದರಿಯಲ್ಲಿ ತನ್ನ ನೌಕರರಿಗೆ ಅವಕಾಶ ನೀಡಿದೆ.












Click it and Unblock the Notifications