ಯಾವ ಕಾರಣಕ್ಕೂ ಪರಿಷ್ಕೃತ ಪಠ್ಯ ಕೈ ಬಿಡುವುದಿಲ್ಲ: ಸಚಿವ ಬಿ. ಸಿ ನಾಗೇಶ್
ಬೆಂಗಳೂರು ಜೂ. 11 : ಪರಿಷ್ಕೃತ ಪಠ್ಯಪುಸ್ತಕ ಬಗ್ಗೆ ಕೇಳಿ ಬರುತ್ತಿರುವ ಟೀಕೆಗಳು ಮತ್ತು ಕಾಂಗ್ರೆಸ್ ಮುಖಂಡರು, ವಿವಿಧ ಸಂಘಟನೆಗಳ ಪ್ರತಿಭಟನೆ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಯಾವುದೇ ಕಾರಣಕ್ಕೂ ಪರಿಷ್ಕೃತ ಪಠ್ಯಪುಸ್ತಕ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಶುಕ್ರವಾರ ಪ್ರತಿಕ್ರಿಸಿರುವ ಸಚಿವರು, "ಯಾವುದೇ ಕಾರಣಕ್ಕೂ ಪರಿಷ್ಕೃತಗೊಂಡ ಶಾಲಾ ಪಠ್ಯ ಪುಸ್ತಕಗಳನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ. ಬದಲಾಗಿ ಬಸವಣ್ಣನವರ ಕುರಿತ ಅಧ್ಯಾಯ ಮರು ಪರಿಷ್ಕರಣೆಗಾಗಿ ಅಗತ್ಯವುಳ್ಳವರ ಸಲಹೆ ಪಡೆಯಲು ನಿರ್ಧರಿಸಿದ್ದೇವೆ. ಶರಣ ಬಸಣ್ಣನವರ ಅಧ್ಯಾಯ ಪರಿಷ್ಕರಿಸಿದ ನಂತರ ಸಾಕಷ್ಟು ಆಕ್ಷೇಪಗಳು ಕೇಳಿಬಂದವು. ಹೀಗಾಗಿ ವಿವಿಧ ಮಠಗಳ ಸ್ವಾಮೀಜಿಗಳ ಸಲಹೆ ಪರಿಗಣಿಸಿ 9ನೇ ತರಗತಿಯ ಸಮಾಜ ವಿಜ್ಞಾನ ಪಠ್ಯದಲ್ಲಿನ ಬಸವಣ್ಣನವರ ಅಧ್ಯಾಯ ಮರು ಪರಿಷ್ಕರಿಸಲಾಗುವುದು. ಈ ಸಂಬಂಧ ಎನ್ ಸಿ ಆರ್ ಟಿ ಅಧಿಕಾರಿಗಳ ಜತೆ ಮಾತನಾಡಿದ್ದು, ಸಲಹೆಗಳ ಮೇರೆಗೆ ಸಣ್ಣಪುಟ್ಟ ತಿದ್ದುಪಡಿ ಮಾಡುವಂತೆ ಸೂಚಿಸಿದ್ದೇವೆ," ಎಂದು ತಿಳಿಸಿದರು.

ಪಠ್ಯ ಪರಿಷ್ಕರಣೆ ಸಮಿತಿ ರಚನೆ ಇಲ್ಲ:
ಆಕ್ಷೇಪಗಳು ಕೇಳಿ ಬಂದ ಕಾರಣ ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಲಾಯಿತು. ಅದರಂತೆ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಅವರು ಪರಿಷ್ಕರಿಸಿದ್ದ ಬಸವಣ್ಣನವರ ಅಧ್ಯಾಯ ಉಳಿಸಿಕೊಳ್ಳಲು ನಿರ್ಧರಿಸಿದ್ದೇವೆ. ಈ ಬಗ್ಗೆ ಸ್ವಾಮೀಜಿಗಳಿಂದ ನೀಡುವ ಪ್ರತಿಕ್ರಿಯೆ ಅಥವಾ ಪತ್ರಗಳಿಗಾಗಿ ಕಾಯುತ್ತಿದ್ದೇವೆ.

ಸಂವಿಧಾನ ಶಿಲ್ಪಿ ಸಾಲನ್ನು ಉಳಿಸಿಕೊಳ್ಳಲಿದ್ದೇವೆ
ಅಲ್ಲದೇ 9ನೇ ತರಗತಿಯಲ್ಲಿ ವಿಜ್ಞಾನ ಪಠ್ಯದಲ್ಲಿ ತಪ್ಪಿ ಹೋಗಿದೆ ಎನ್ನುತ್ತಿರುವ ಸಂವಿಧಾನ ಶಿಲ್ಪಿ ಸಾಲನ್ನು ಉಳಿಸಿಕೊಳ್ಳಲಿದ್ದೇವೆ. ಬಳಿಕ ಜನರು ನೀಡುವ ಆಕ್ಷೇಪಗಳನ್ನು ಪರಿಗಣಿಸಿ ಮರು ಪರಿಷ್ಕರಿಸಲು ಸಿದ್ದವಿರುವ ಸರ್ಕಾರ, ಪರಿಷ್ಕರಣೆಗೆಂದು ಮತ್ತಾವುದೇ ಸಮಿತಿ ರಚಿಸುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

ಚುನಾವಣೆ ಕಾರಣಕ್ಕೆ ವಿವಾದ ಸೃಷ್ಟಿ:
ರಾಜ್ಯ ಸರ್ಕಾರ ಪರಿಷ್ಕರಿಸಿದ ಪಠ್ಯಗಳನ್ನು ಓದಿದವರು ಯಾರು ಈ ಬಗ್ಗೆ ಟೀಕೆ ಮಾಡಿಲ್ಲ. ಪರಿಷ್ಕರಣೆ ಕುರಿತ ವಿರೋಧ ವ್ಯಕ್ತಪಡಿಸಿಲ್ಲ. ಆದರೆ ಪಠ್ಯ ಓದದೇ ಇರುವವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾತ್ರ ಈ ಬಗ್ಗೆ ಮಾತನಾಡುತ್ತಿದ್ದಾರೆ. ಜತೆಗೆ ಪಠ್ಯ ಪರಿಷ್ಕರಣೆ ವಿರೋಧಿಸಿದ ಕಾಂಗ್ರೆಸ್ ಮುಖಂಡರು ಸೇರಿದಂತೆ ಕೆಲವರು ಪ್ರತಿಭಟಿಸಿದ್ದಾರೆ. ವಿಧಾನಸಭೆ ಚುನಾವಣೆ ಹತ್ತಿರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಈ ರೀತಿ ವಿವಾದ ಸೃಷ್ಟಿಸುತ್ತಿದೆ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರು ಈ ಬಗ್ಗೆ ಹೆಚ್ಚು ಮಾತನಾಡುತ್ತಿದ್ದಾರೆ ಎಂದು ಅವರ ವಿರುದ್ಧ ಕಿಡಿಕಾರಿದರು.

ಧರ್ಮಗಳ ಹುಟ್ಟು ಪರಿಷ್ಕರಣೆ ಇಲ್ಲ
ದ್ವಿತೀಯ ಪಿಯುಸಿ ಪಠ್ಯಕ್ರಮದಲ್ಲಿರುವ ಧರ್ಮಗಳ ಹುಟ್ಟು ಅಧ್ಯಾಯವೊಂದರ ಕುರಿತು ಪರಿಷ್ಕರಿಸಲು ಯಾವುದೇ ಸಮಿತಿ ರಚನೆ ಮಾಡಿಲ್ಲ. ಆದರೆ ಈ ಹಿಂದೆ ಇದ್ದ ರೋಹಿತ್ ಚಕ್ರತೀರ್ಥ ಅವರಿದ್ದ ಸಮಿತಿ ಒಂದು ಅಧ್ಯಾಯ ಪರಿಷ್ಕರಣೆಗಾಗಿ ನಿರ್ಧರಿಸಿತ್ತು. ಆದರೆ ಇತ್ತೀಚೆಗೆ ಆ ಸಮಿತಿಯನ್ನು ವಿಸರ್ಜನೆ ಮಾಡಿದ್ದರಿಂದ ಆ ಸಮಿತಿಯ ವರದಿಯನ್ನು ಸಲ್ಲಿಸಲು ಅಥವಾ ಸ್ವೀಕರಿಸಲು ಬರುವುದಿಲ್ಲ. ಹೀಗಾಗಿ ದ್ವಿತೀಯ ಪಿಯುಸಿ ಅಧ್ಯಾಯ ಪರಿಷ್ಕರಣೆ ನಿರ್ಧಾರ ಕೈ ಬಿಡಲಾಗಿದೆ ಎಂದು ಅವರು ವಿವರಿಸಿದರು.












Click it and Unblock the Notifications