Anna Bhagya: 5 ಕೆ.ಜಿ. ಅಕ್ಕಿಯ ಬದಲಾಗಿ ಹಣ ಕೊಡಲು ನಿರ್ಧಾರ: ಎಷ್ಟು ತಿಳಿಯಿರಿ
ಅನ್ನ ಭಾಗ್ಯ ಯೋಜನೆಯಡಿ ಹೆಚ್ಚುವರಿ 5 ಕೆ.ಜಿ. ಅಕ್ಕಿ ಕೊಡುವ ಯೋಜನೆಗೆ ಸಮರ್ಪಕವಾಗಿ ಅಕ್ಕಿ ವಿತರಣೆಯಾಗದ ಹಿನ್ನಲೆಯಲ್ಲಿ, ಹಣವನ್ನು ಕೊಡಲು ಸರ್ಕಾರ ನಿರ್ಧರಿಸಿದೆ. ಜೂನ್ 28ರಂದು ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಮಾಡಲಾಗಿದೆ ಎಂದು ಆಹಾರ ಸಚಿವ ಮುನಿಯಪ್ಪ ಮಾಹಿತಿ ನೀಡಿದರು.
5 ಕೆಜಿ ಅಕ್ಕಿಯ ಬದಲಾಗಿ 170 ರೂಪಾಯಿ ಹಣವನ್ನು ನೀಡಲು ನಿರ್ಧರಿಸಲಾಗಿದೆ. ಬಿಪಿಎಲ್ ಕಾರ್ಡ್‌ನಲ್ಲಿ ಹೆಸರಿರುವ ಪ್ರತಿಯೊಬ್ಬರಿಗೂ ತಿಂಗಳಿಗೆ 5 ಕೆ.ಜಿ. ಅಕ್ಕಿಯ ಜೊತೆ 170 ರೂಪಾಯಿ ಹಣ ಸಿಗಲಿದೆ. ಜುಲೈ 1ರಿಂದಲೇ ಪಡಿತರದಾರರ ಖಾತೆಗೆ ಹಣ ವರ್ಗಾವಣೆ ಆಗಲಿದೆ. ಅಕ್ಕಿ ಪೂರೈಕೆಯಾದ ನಂತರ ಹಣದ ಬದಲಾಗಿ 10 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತದೆ.

ಪ್ರತಿ ಕೆ.ಜಿ. ಅಕ್ಕಿಗೆ 34 ರೂಪಾಯಿಯಂತೆ ಹಣ ಕೊಡಲು ತೀರ್ಮಾನಿಸಿದೆ. ಈ ಮೂಲಕ ನುಡಿದಂತೆ ಅನ್ನಭಾಗ್ಯ ಯೋಜನೆ ಜಾರಿಗೆ ಮುಂದಾಗಿದೆ. ಅಕ್ಕಿ ಪೂರೈಕೆ ಕಡಿಮೆ ಇದ್ದರೆ, ಅಕ್ಕಿಯ ಬದಲಾಗಿ ಹಣವನ್ನು ಕೊಡಿ ಎಂದು ಬಿಜೆಪಿ ಒತ್ತಾಯಿಸಿತ್ತು. ಅಕ್ಕಿಯನ್ನು ಕೊಡಲು ಕೇಂದ್ರ ನಿರಾಕರಿಸಿದ ನಂತರ ಕರ್ನಾಟಕ ಸರ್ಕಾರ ವಿವಿಧ ರಾಜ್ಯಗಳನ್ನು ಸಂಪರ್ಕಿಸಿ ಅಕ್ಕಿ ಪೂರೈಕೆಗೆ ಮನವಿ ಮಾಡಿತ್ತು.
ಆದರೆ, ಪಕ್ಕದ ಆಂಧ್ರಪದ್ರೇಶದಲ್ಲಿ ಅಕ್ಕಿಯ ದಾಸ್ತಾನು ಕಡಿಮೆ ಇರುವ ಕಾರಣ, ದೂರದ ಛತ್ತಿಸ್‌ಗಢದಿಂದ ಅಕ್ಕಿ ತರಲು ಸಾಗಾಣಿಕಾ ವೆಚ್ಚ ಹೆಚ್ಚಿರುವುದು ಸರ್ಕಾರಕ್ಕೆ ಹೊರೆಯಾಗಿತ್ತು. ಉತ್ತರ ಕರ್ನಾಟಕದ ಕೆಲವು ಕಡೆ ಅಕ್ಕಿಯ ಬದಲಾಗೊ ಜೋಳ ಕೊಡಲು ಮನವಿ ಮಾಡಿದ್ದರು. ಎಲ್ಲವನ್ನೂ ಪರಿಶೀಲನೆ ಮಾಡಿರುವ ಸರ್ಕಾರ ಅಕ್ಕಿ ಸಿಗುವವರೆಗೆ ಹಣವನ್ನು ನೀಡಲು ನಿರ್ಧರಿಸಿದೆ.
ಕೇಂದ್ರದ ವಿರುದ್ಧ ಸಿದ್ದರಾಮಯ್ಯ ಅಸಮಾಧಾನ
ಸಭೆಯ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ನಾವು ಹಣ ಕೊಡಲು ಸಿದ್ದವಿದ್ದರೂ ಕೇಂದ್ರ ಅಕ್ಕಿ ಪೂರೈಕೆ ಮಾಡಲು ಒಪ್ಪಿಗೆ ಕೊಡುತ್ತಿಲ್ಲ. ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಕಲ್ಲು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಆಹಾರ ಸಚಿವ ಮುನಿಯಪ್ಪ ಅವರು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಿದ್ದರು, ರಾಜ್ಯಕ್ಕೆ ಅಕ್ಕಿ ಪೂರೈಸಲು ಮನವಿ ಮಾಡಿದ್ದರೂ, ಕೇಂದ್ರ ಆಹಾರ ಸಚಿವ ಗೋಯಲ್ ಅಕ್ಕಿ ಇಲ್ಲ ಎಂದು ಹೇಳಿದ್ದಾರೆ. ನಾನು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದಾಗಲೂ ಈ ಬಗ್ಗೆ ಚರ್ಚೆ ಮಾಡಿದ್ದೆ, ಪಿಯೂಷ್ ಗೋಯಲ್ ಜೊತೆ ಮಾತನಾಡುವುದಾಗಿ ಅಮಿತ್ ಶಾ ಭರವಸೆ ಕೊಟ್ಟಿದ್ದರೂ, ನಮ್ಮ ಆಹಾರ ಸಚಿವರು ಭೇಟಿಯಾದಗ ಅಕ್ಕಿ ಇಲ್ಲ ಎಂದು ಹೇಳಿದ್ದಾರೆ. ಜುಲೈ ತಿಂಗಳಿನಿಂದ 10 ಕೆ.ಜಿ. ಅಕ್ಕಿ ಕೊಡುವುದಾಗಿ ಭರವಸೆ ಕೊಟ್ಟಿದ್ದವು, ಈಗ ಅಕ್ಕಿ ಲಭ್ಯವಿಲ್ಲದ ಕಾರಣ ಹಣ ನೀಡಲು ನಿರ್ಧರಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಫಲ ನೀಡದ ಕೇಂದ್ರ ಸಚಿವರ ಭೇಟಿ
ಅನ್ನ ಭಾಗ್ಯ ಯೋಜನೆಯಡಿ ಉಚಿತ ಅಕ್ಕಿ ವಿತರಿಸಲು ಕರ್ನಾಟಕ ಸರ್ಕಾರ ಕೇಂದ್ರ ಆಹಾರ ನಿಗಮಕ್ಕೆ ಮನವಿ ಮಾಡಿತ್ತು. ಆದರೆ ಅದು ರಾಜ್ಯಕ್ಕೆ ಅಕ್ಕಿ ಪೂರೈಸಲು ನಿರಾಕರಿಸಿತ್ತು. ರಾಜ್ಯ ಆಹಾರ ಸಚಿವ ಮುನಿಯಪ್ಪ ದೆಹಲಿಗೆ ತೆರಳಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರಿಗೆ ಮನವಿ ಮಾಡಿದ್ದರೂ ಅವರು ಅಕ್ಕಿ ಪೂರೈಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಅಕ್ಕಿ ಕೊಡುವ ವಿಚಾರದ ರಾಜ್ಯದಲ್ಲಿ ರಾಜಕೀಯ ತಿರುವು ಪಡೆದುಕೊಂಡಿತ್ತು. ಮಾತು ಕೊಟ್ಟಂತೆ ಅಕ್ಕಿ ಕೊಡಲೇಬೇಕು ಎಂದು ರಾಜ್ಯ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ನೀವೇ ಕೇಂದ್ರದ ಜೊತೆ ಮಾತನಾಡಿ ಅಕ್ಕಿ ಕೊಡಿಸಿ ಎಂದು ಸಿದ್ದರಾಮಯ್ಯ ಬಿಜೆಪಿ ನಾಯಕರಿಗೆ ಸವಾಲು ಹಾಕಿದ್ದರು.












Click it and Unblock the Notifications