ಹುಲಿ ಉಗುರು ಸೇರಿದಂತೆ ವನ್ಯಜೀವಿ ಅಂಗಾಂಗ ವಾಪಸ್ ನೀಡಲು ಸರ್ಕಾರದ ಡೆಡ್‌ಲೈನ್: ವಿವರ ತಿಳಿಯಿರಿ
ಬೆಂಗಳೂರು, ಫೆಬ್ರವರಿ 10: ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ ಅಂಗಾಂಗಗಳನ್ನು ಇಟ್ಟು ಕೊಂಡಿರುವವರಿಗೆ ರಾಜ್ಯ ಸರ್ಕಾರ ಗಡುವು ನೀಡಿದ್ದು, ವನ್ಯಜೀವಿ ಅಂಗಾಂಗಗಳನ್ನು ಹಿಂದಿರುಗಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಕೊನೆಯ ಡೆಡ್ ಲೈನ್ ನೀಡಿದ್ದಾರೆ.
ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಮಾಣ ಪತ್ರ ಇಲ್ಲದೆ ಅಕ್ರಮವಾಗಿ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧ. 1973 ಹಾಗೂ 2003ರಲ್ಲಿ ವನ್ಯಜೀವಿ ಅಂಗಾಂಗಗಳ ವಾಪಸ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಇನ್ನೂ ವಾಪಸ್ ಮಾಡದೇ ಇರುವುದು ದೊಡ್ಡ ಅಪರಾಧ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.

ಮೌಢ್ಯತೆ ಹಾಗೂ ನಂಬಿಕೆಗಾಗಿ ಕೆಲವು ಮುಗ್ಧ ಜನರು ಇನ್ನೂ ವನ್ಯಜೀವಿ ಅಂಗಾಂಗಗಳನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಏಪ್ರಿಲ್ 10ರ ಒಳಗೆ ಹುಲಿ, ಚಿರತೆ ಮತ್ತು ಆನೆಗಳ ಕೊಂಬು, ಉಗುರು, ಹಲ್ಲು, ಕೂದಲು ಸೇರಿದಂತೆ ಎಲ್ಲಾ ವನ್ಯಜೀವಿ ಅಂಗಾಂಗಗಳನ್ನು ಹಿಂತಿರುಗಿಸಲು ಕೊನೆಯದಾಗಿ ಗಡುವು ನೀಡಲಾಗಿದೆ ಎಂದು ಅರಣ್ಯ ಸಚಿವರು ತಿಳಿಸಿದ್ದು, ಏಪ್ರಿಲ್ 10ರವೊಳಗೆ ಹಿಂದಿರುಗಿಸುವಂತೆ ಆದೇಶ ಹೊರಡಿಸಿದ್ದಾರೆ.
ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ವನ್ಯ ಜೀವಿಗಳ ಅಂಗಾಂಗಗಳನ್ನು ಇಟ್ಟು ಕೊಂಡವರು ವಾಸಪ್ ನೀಡಬೇಕು. ಮುಗ್ಧ ಜನರಿಗೆ ಶಿಕ್ಷೆಯಾಗಬಾರದು ಎಂದು ನಮ್ಮ ಸರ್ಕಾರ ಏಪ್ರಿಲ್ 10ರವೊಳಗೆ ಕೊನೆಯ ಬಾರಿ ವಾಪಸ್ ಮಾಡುವಂತೆ ಅವಕಾಶ ನೀಡಿದೆ. ಜನರು ತಮ್ಮ ಬಳಿ ಇರುವ ಅಂಗಾಗಳನ್ನು ಸಮೀಪದಲ್ಲಿರುವ ಅರಣ್ಯ ಕಚೇರಿಗೆ ನೀಡಬೇಕು ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಸದ್ದು ಮಾಡಿದ್ದ ಹುಲಿ ಉಗುರು ಪ್ರಕರಣ
ವರ್ತೂರ್ ಸಂತೋಷ್ ಪ್ರಕರಣ ಬೆನ್ನಲ್ಲೇ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣ ಭಾರೀ ಸದ್ದು ಮಾಡಿತ್ತು. ಹಲವು ಸಿನಿಮಾ ನಟರು, ರಾಜಕೀಯ ನಾಯಕರು ಹುಲಿ ಉಗುರು ಧರಿಸಿರುವ ಫೋಟೋಗಳು ವೈರಲ್ ಆಗಿದ್ದು, ಅವರ ಮನೆ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿ ಲಾಕೆಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಹುಲಿ ಉಗುರು ಧರಿಸಿರುವ ಆರೋಪದ ಮೇಲೆ ವರ್ತೂರ್ ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡಿತ್ತು. ಬಳಿಕ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರ ಬಳಿಯೂ ಹುಲಿ ಉಗುರಿನ ಲಾಕೆಟ್ ಇದೆ ಎನ್ನಲಾಗಿತ್ತು. ಈ ವಿಚಾರ ಗೊತ್ತಾದ ಕೂಡಲೇ ಅವರ ಮನೆಗೂ ಅರಣ್ಯಾಧಿಕಾರಿಗಳು ಭೇಟಿ, ನೀಡಿ ಪರಿಶೀಲನೆ ನಡೆಸಿದ್ದರು.












Click it and Unblock the Notifications