ಜಾತಿ ಜನಗಣತಿ ವಿಚಾರಕ್ಕೆ ಸರ್ಕಾರದಲ್ಲಿ ಗೊಂದಲ: ಪ್ರಹ್ಲಾದ್ ಜೋಶಿ ಪ್ರತಿಕ್ರಿಯೆ
ಹುಬ್ಬಳ್ಳಿ, ನವೆಂಬರ್ 24: ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಪ್ರಮಾಣದ ಗೊಂದಲ ಸೃಷ್ಠಿಯಾಗುತ್ತಿದೆ. ಸರ್ಕಾರದಲ್ಲೇ ಈ ವಿಚಾರವಾಗಿ ಗೊಂದಲ ಏರ್ಪಟ್ಟಿದೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದರು.
ಕರ್ನಾಟಕದಲ್ಲಿ ಸದ್ಯ ಜಾತಿ ಗಣತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಇದೀಗ ಇದೇ ವಿಚಾರವಾಗಿ ಶುಕ್ರವಾರ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವರು ಸುದ್ದಿಗರರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತೆ. ಜಾತಿ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವೇ ಇಲ್ಲ ಎಂದರು.

ಜಾತಿ ಜನಗಣತಿ ಮಾಡಬೇಕಿರುವುದು ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದ ಕೆಲಸವನ್ನ ನಾವು ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಜಾತಿ ಜನಗಣತಿ ವರದಿಯ ಪತ್ರ ಮಾಯವಾಗಿದೆ ಎಂದು ಹಿಂದುಳಿದ ವರ್ಗದ ಆಯೋಗದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಈ ವಿಚಾರದ ಬಗ್ಗೆ ಸರ್ಕಾರದಲ್ಲೇ ಸಹಮತವಿಲ್ಲ. ಡಿಕೆ ಶಿವಕುಮಾರ್, ಶಾಮನೂರು ಶಿವಶಂಕರಪ್ಪ ಮೊದಲಾದವರಿಂದ ಇದರ ಬಗ್ಗೆ ವಿರೋಧ ಇದೆ ಎಂದು ತಿಳಿಸಿದರು.
ವರದಿ ಜಾರಿಗೆ ಸರ್ಕಾರದಲ್ಲಿಯೇ ವಿರೋಧ
ಕಾಂತರಾಜು ಆಯೋಗದ ವರದಿ ಜಾರಿಯಾಗಬಾರದೆಂಬ ವಿರೋಧ ಕಾಂಗ್ರೆಸ್ ಸರ್ಕಾರದಲ್ಲಿಯೇ ಇದೆ. ಸರ್ಕಾರದಲ್ಲಿ ಗೊಂದಲ, ಭಿನ್ನಾಭಿಪ್ರಾಯ ಇರುವಾಗ ವರದಿ ಹೇಗೆ ಸಲ್ಲಿಸುತ್ತಾರೆ? ಕೆಲ ಶಾಸಕರನ್ನು ಎತ್ತಿ ಕಟ್ಟಿ ಸಿಎಂ ಸಿದ್ಧರಾಮಯ್ಯ ತಮ್ಮ ಪಾರುಪತ್ಯ ಮೆರೆಯುತ್ತಿದ್ದಾರೆ. ಜನರ ಹಿತದೃಷ್ಠಿಯಿಂದ ಸರ್ಕಾರ ಸರಿಯಾಗಿ ನಡೆಸಬೇಕು. ಆದರೆ ಸಿದ್ಧರಾಮಯ್ಯ 20 ಶಾಸಕರನ್ನು ಮೈಸೂರಿಗೆ ಕಳಿಸುವ ಪ್ರಯತ್ನ ಮಾಡಿದ್ದರು. ಸದ್ಯ ಹಲವು ಶಾಸಕರು ವಿದೇಶ ಪ್ರವಾಸದಲ್ಲಿದ್ದಾರೆ ಎಂದು ಹೇಳಿದರು.

ಸದ್ಯ ಚುನಾವಣೆ ಹೊತ್ತಿನಲ್ಲಿ ಜಾತಿ ಗಣತಿ ವರದಿ ಕುರಿತು ಗೊಂದಲ ಸೃಷ್ಠಿಸಿದ್ದಾರೆ ಇದು ಸರಿಯಲ್ಲ. ಜನ ಐದು ವರ್ಷ ಅಧಿಕಾರ ನೀಡಿದ್ದು ಗೊಂದಲಗಳಿಲ್ಲದೇ ಕೆಲಸ ಮಾಡಲು ಎಂಬುದನ್ನು ಜೋಶಿ ಜ್ಞಾಪಿಸಿದರು. ಜನತಾ ದರ್ಶನ, ಜನಸಂಪರ್ಕ ಕಾರ್ಯಕ್ರಮಗಳು ನುಂತು ಹೋಗಿವೆ. ಬಹಳಷ್ಟು ಭಾಗದಲ್ಲಿ ಸಚಿವರು ತಮ್ಮ ಕ್ಷೇತ್ರಗಳಿಗೆ ಸೀಮಿತವಾಗಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ವ್ಯಂಗ್ಯ
ರಾಜ್ಯದಲ್ಲಿ ಸರ್ಕಾರದ ಆಡಳಿತ ಯಂತ್ರ ಸಂಪೂರ್ಣ ಕುಸಿತ ಕಂಡಿದೆ. ಸರ್ಕಾರ ಈ ನ್ಯೂನತೆಗಳನ್ನು ಸರಿಪಡಿಸಬೇಕು.
ಪ್ರಧಾನಿ ಮೋದಿಯವರನ್ನ ಅಪಶಕುನ ಎಂಬ ರಾಹುಲ್ ಆರೋಪ ವಿಚಾರ, ರಾಹುಲ್ ಗಾಂಧಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡದಿರೋದೇ ಉತ್ತಮ ಎಂದು ವ್ಯಂಗ್ಯವಾಡಿದರು.
ಅವರು ಯಾವ ಕೀಳು ಮಟ್ಟಕ್ಕೆ ಇಳಿಯುತ್ತಾರೆ ಅನ್ನೋದಕ್ಕೆ ಈ ಹೇಳಿಕೆಯೇ ಸಾಕ್ಷಿ. ರಾಹುಲ್ ಗಾಂಧಿಗೆ ಹೊಸ ವಿಷಯ ಬರೆದುಕೊಡೋವರೆಗೂ ಅವರು ಏನೇನೋ ಮಾತನಾಡುತ್ತಾರೆ. ದೇಶದಲ್ಲಷ್ಟೇ ಅಲ್ಲದೇ ಇಡೀ ವಿಶ್ವದಲ್ಲಿ ಮೋದಿ ಬಗ್ಗೆ ಶ್ಲಾಘನೆ ವ್ಯಕ್ತವಾಗುತ್ತಿದೆ. ಮೋದಿ ವಿರುದ್ಧ ಹೇಳಿಕೆ ನೀಡಿದಷ್ಟು ಅವರ ಮೇಲೆ ಜನರ ಆಶೀರ್ವಾದ ಹೆಚ್ಚಿಗೆಯಾಗುತ್ತೆ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ವರದಿ ಬರುವ ಮೊದಲೇ ಏಕೆ ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಒಕ್ಕಲಿಗರ ಸಮುದಾಯ ಈ ವರದಿಗೆ ವಿರೋಧ ವ್ಯಕ್ತಪಡಿಸಿದ್ದು, ಮನವಿ ಸಲ್ಲಿಸಿದೆ. ಈ ಮನವಿಗೆ ಡಿಕೆ ಶಿವಕುಮಾರ್ ಅವರು ಸಹಿ ಹಾಕಿದ್ದ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.












Click it and Unblock the Notifications