Get Updates
Get notified of breaking news, exclusive insights, and must-see stories!

ಮುಂಬೈ ಬಿಟ್ಟರೆ ಕರ್ನಾಟಕ ಅಗ್ನಿಶಾಮಕ ದಳದಲ್ಲಿ 90 ಮೀಟರ್ ಏಣಿ

ಬೆಂಗಳೂರು, ಅಕ್ಟೋಬರ್ 20: ಭಾರತದಲ್ಲಿ ಮುಂಬೈ ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಮಾತ್ರ ಇಷ್ಟು ದೊಡ್ಡ ಏಣಿ ಇರುವ ಅಗ್ನಿಶಾಮಕ ವಾಹನಗಳನ್ನು ಪರಿಚಯಿಸಲಾಗಿದೆ. ಜನರ ರಕ್ಷಣೆಗೆ ಮತ್ತು ಅಗ್ನಿ ದುರಂತ ನಿಯಂತ್ರಿಸಲು 90 ಮೀಟರ್ ಏಣಿ ಉಪಯುಕ್ತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಗುರುವಾರ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಬಳಿ ಆಯೋಜಿಸಿದ್ದ 90 ಮೀಟರ್ ಏರಿಯಲ್ ಲ್ಯಾಡರ್ ಪ್ಲಾಟ್ ಫಾರಂ ವಾಹನ ಲೋಕಾರ್ಪಣೆ ಹಾಗೂ ' ಹಸಿರು ದೀಪಾವಳಿ ಸಾರ್ವಜನಿಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಜ್ಯದ ಅಗ್ನಿಶಾಮಕ ದಳಕ್ಕೆ ದೊಡ್ಡ ಶಕ್ತಿಯನ್ನು ತುಂಬುವ ಹಾಗೂ ಬೆಂಗಳೂರಿನ ಅಭಿವೃದ್ಧಿಗೆ ಬಹಳ ದೊಡ್ಡ ಕೊಡುಗೆಯನ್ನು ನೀಡುವ ಪ್ರಮುಖ ದಿನವಿದು. ಅಗ್ನಿಶಾಮಕ ದಳ 90 ಮೀಟರ್ ಏರಿಯಲ್ ಏಣಿ ಹೊಂದಿದ್ದು, ಈ ಆಧುನಿಕ ಏಣಿಗಳು ಆಪತ್ಕಾಲದಲ್ಲಿ ಬಂಧುಗಳಂತೆ ಕೆಲಸ ಮಾಡುತ್ತವೆ. ಎಲ್ಲ ಪ್ರಮುಖ ಮೆಟ್ರೋ ನಗರಗಳಲ್ಲಿ ಅಗ್ನಿಶಾಮಕ ಸೇವೆ ಅವಶ್ಯಕ ಸೇವೆಯಾಗಿದೆ. ಅಗ್ನಿ ಸುರಕ್ಷತೆ ಹಾಗೂ ಅಗ್ನಿ ಸುರಕ್ಷತಾ ನಿಯಮಗಳೂ ಅಷ್ಟೇ ಮುಖ್ಯ. ಎತ್ತರದ ಕಟ್ಟಡ ಕಟ್ಟಲು ಅಪತ್ಕಾಲದಲ್ಲಿ ನಿಭಾಯಿಸುವ ಸಲುವಾಗಿ ಅಗ್ನಿಶಾಮಕ ದಳದ ಎಲ್ಲಾ ನಿಯಮಗಳನುಸಾರವಾಗಿ ವ್ಯವಸ್ಥೆ ಇರುವುದು ಮುಖ್ಯ ಎಂದು ಹೇಳಿದರು.

ಎರಡೂವರೆ ವರ್ಷ ಬೇಡಿಕೆ ಈಡೇರಿದೆ

ಎರಡೂವರೆ ವರ್ಷ ಬೇಡಿಕೆ ಈಡೇರಿದೆ

ಇದುವರೆಗೂ ಬೆಂಗಳೂರಿನ ಅಗ್ನಿಶಾಮಕ ದಳಕ್ಕೆ 50 ಮೀಟರಿನ ಏಣಿ ಇತ್ತು. ಇಂದು ಬೆಂಗಳೂರು ನಗರ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಲಂಬವಾಗಿಯೂ ಬೆಳೆಯುತ್ತಿದೆ. ಎತ್ತರದ ಕಟ್ಟಡಗಳನ್ನು ಕಟ್ಟಲು ಇದರ ಅವಶ್ಯಕತೆ ಇದೆ. ವ್ಯವಸ್ಥೆ ಗಳಿಲ್ಲದಿದ್ದರೆ ಎತ್ತರದ ಕಟ್ಟಡಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಭಾರತ ದೇಶದಲ್ಲಿ ಮುಂಬೈ ಮಹಾನಗರಬಿಟ್ಟರೆ ಬೆಂಗಳೂರಿನಲ್ಲಿ ಮಾತ್ರ ಈ 90 ಮೀಟರ್‌ ಏಣಿಯ ವ್ಯವಸ್ಥೆ ಇದೆ ಎಂದು ಪುನರುಚ್ಚರಿಸಿದರು.

ಸುಮಾರು ಎರಡೂವರೆ ವರ್ಷಗಳಿಂದ ಇದನ್ನು ಪಡೆದುಕೊಳ್ಳುವ ಪ್ರಯತ್ನ ನಡೆದಿತ್ತು. ನಾನು ಹಿಂದೆ ಗೃಹ ಸಚಿವನಿದ್ದ ಸಂದರ್ಭದಲ್ಲಿ ಇದಕ್ಕೆ ಆದೇಶ ನೀಡಿ ಅನುದಾನವೂ ಬಿಡುಗಡೆಯಾಗಿತ್ತು. ಕಾರಣಾಂತರಗಳಿಂದ ವಿಳಂಬವಾಯಿತು. ಕೋವಿಡ್ ಮತ್ತು ಉತ್ಪಾದನೆಯ ಸಮಸ್ಯೆಯಾಗಿ ತಡವಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ತನ್ನ ಸೇವೆಯನ್ನು ನೀಡಲು ಸಿದ್ಧವಾಗಿರುವುದು ಸಂತಸದ ಸಂಗತಿ ಎಂದರು.

ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹ

ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹ

ಬೆಂಗಳೂರು ದೊಡ್ಡ ನಗರವಾಗಿ ಬೆಳೆಯುತ್ತಿದೆ. ವಿಚಾರಗಳನ್ನು ತಿಳಿದುಕೊಳ್ಳದೆ ಹಲವಾರು ವ್ಯಾಖ್ಯಾನಗಳು ಆಗುತ್ತಿರುವುದು ಸರಿಯಲ್ಲ. ಮೊನ್ನೆ ಬಂದ ಮಳೆಗೆ ಎರಡು ಕ್ಷೇತ್ರದಲ್ಲಿ ಮಾತ್ರ ಪ್ರವಾಹವಾಗಿತ್ತು. 26 ಕ್ಷೇತ್ರಗಳಲ್ಲಿ ಪ್ರವಾಹ ಇರಲಿಲ್ಲ. ಆದರೆ ಇಡೀ ಬೆಂಗಳೂರು ಮುಳುಗಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಯಿತು. ಬೆಂಗಳೂರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖವಾದ ನಗರ. ಏನೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸುವ ಸಾಮರ್ಥ್ಯ ನಮ್ಮ ಸರ್ಕಾರಕ್ಕಿದೆ. ಆದ್ದರಿಂದ ಇದನ್ನು ಸರಿಯಾದ ರೀತಿಯಲ್ಲಿ ಬಿಂಬಿಸುವ ಅಗತ್ಯವಿದೆ ಎಂದರು.

ಎಸ್‌ಡಿಆರ್‌ಎಫ್‌ ಬಲವರ್ಧನೆ

ಎಸ್‌ಡಿಆರ್‌ಎಫ್‌ ಬಲವರ್ಧನೆ

ಪ್ರವಾಹ ಪರಿಸ್ಥಿತಿ ನಿಭಾಯಿಸಲು ತಕ್ಷಣ ಧಾವಿಸಿದ್ದು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ (ಎಸ್.ಡಿ.ಆರ್.ಎಫ್) ಹಾಗೂ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್‌ಡಿ ಆರ್ಎಫ್) ತಂಡಗಳ ನೂರಕ್ಕಿಂತ ಹೆಚ್ವು ಯೋಧರು ಬೆಂಗಳೂರಿನಲ್ಲಿ ಇದ್ದಾರೆ. ಯಾವುದೇ ಭಾಗದಲ್ಲಿ ಏನೇ ಆದರೂ ರಕ್ಷಣೆ ಮಾಡುವ ಸಾಮರ್ಥ್ಯ ಅವರಿಗಿದೆ. ನೂತನ ಸಲಕರಣೆಗಳನ್ನು ಸರ್ಕಾರ ಈಗಾಗಲೇ 20 ಕೋಟಿ ನೀಡಿದ್ದು, ಪುನಃ 20 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಈ ಮೂಲಕ ಎಸ್‌ಡಿಆರ್‌ ಬಲಪಡಿಸುವುದು ಸರ್ಕಾರದ ಉದ್ದೇಶವಾಗಿದೆ.

ಜೊತೆಗೆ ಎರಡು ಕಂಪನಿಗಳನ್ನು ಸೃಜಿಸಲು ಸೂಚಿಸಿದ್ದು, ಇದರಲ್ಲಿ ನಿವೃತ್ತ ಯೋಧರನ್ನು ನೇಮಕ ಮಾಡಿ ಕೊಳ್ಳಲಾಗಿದೆ. ಈಗಾಗಲೇ ನೂರಕ್ಕೂ ಹೆಚ್ಚು ಸೇನೆಯ ನಿವೃತ್ತ ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗಿದೆ. ಇನ್ನೆರಡು ಕಂಪೆನಿಗಳಿಗೂ ನಿವೃತ್ತ ಸೇನಾ ಅಧಿಕಾರಿಗಳನ್ನು ನೇರವಾಗಿ ನೇಮಿಸಿಕೊಳ್ಳಲು ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ. ಆಧುನೀಕರಣ, ಸಂಖ್ಯೆಯ ಹೆಚ್ಚಳದ ಜೊತೆಗೆ ತರಬೇತಿ ಹಾಗೂ ಸಬಲೀಕರಣ ಮಾಡಲಾಗುತ್ತಿದೆ. ರಾಜ್ಯದಲ್ಲಿ ಉಂಟಾದ ಪ್ರವಾಹದಲ್ಲಿ ಎನ್‌ಡಿಆರ್‌ಎಫ್ ಬಹಳ ದೊಡ್ಡ ಸಹಾಯವನ್ನು ಮಾಡಿದ್ದು, ಅವರ ಕೆಲಸವನ್ನು ಸರ್ಕಾರ ಗುರುತಿಸಿ, ಶ್ಲಾಘಿಸುತ್ತದೆ ಎಂದು ತಿಳಿಸಿದರು.

ಸಂಚಾರ ದಟ್ಟಣೆ ಸುಗಮಗೊಳಿಸಲು ಕ್ರಮ

ಸಂಚಾರ ದಟ್ಟಣೆ ಸುಗಮಗೊಳಿಸಲು ಕ್ರಮ

5000 ಹೊಸ ವಾಹನಗಳು ಪ್ರತಿ ನಿತ್ಯ ರಸ್ತೆಗೆ ಇಳಿಯುತ್ತವೆ. ರಸ್ತೆ ಮಾತ್ರ ಅಷ್ಟೇ ಇದೆ. ಆದರೂ ಕೂಡ ಸಂಚಾರ ನಿರ್ವಹಣೆಗೆ ವ್ಯವಸ್ಥೆ ಗಳನ್ನು ಪೊಲೀಸ್ ಇಲಾಖೆ ಮಾಡುತ್ತಿದೆ. ಸಿಂಕ್ರೋನೈಜಿಂಗ್ ಹೊಸ ವಿಧಾನಗಳನ್ನು ಬಳಸಿ ಅಡೆತಡೆಯಿಲ್ಲದ ಸಂಚಾರ ವ್ಯವಸ್ಥೆ ಕೈಗೊಳ್ಳಲಾಗಿದೆ. 7500 ಕ್ಯಾಮರಾಗಳನ್ನು ನಿರ್ಭಯ ಯೋಜನೆಯಡಿ ಅಳವಡಿಸಲಾಗುತ್ತಿದೆ. ಮಹಿಳೆಯರ ಸುರಕ್ಷತೆಯ ಜೊತೆಗೆ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಲು ಉಪಯೋಗ ಮಾಡಲಾಗುತ್ತಿದೆ ಎಂದರು. ಕೃತಕ ಬುದ್ಧಿಮತ್ತೆ, 360 ಡಿಗ್ರಿ ಕೆಲಸ ಮಾಡುವ ಸಾಮರ್ಥ್ಯ ಅವುಗಳಿಗಿದೆ ಎಂದು ಬೊಮ್ಮಾಯಿ ವಿವರಿಸಿದರು.

ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆದೇಶ

ಸಮರೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲು ಆದೇಶ

ಈಗಾಗಲೇ ಒಮ್ಮೆ ರಸ್ತೆಗುಂಡಿಗಳನ್ನು ಮುಚ್ಚಲಾಗಿದೆ. ಈಗ ಮತ್ತೆ ನಿರಂತರವಾಗಿ ಮಳೆಯಾಗಿದ್ದರಿಂದ ಅಲ್ಲಲ್ಲಿ ಗುಂಡಿಗಳು ಬಿದ್ದಿವೆ. ಅವುಗಳನ್ನು ಸಮರೋಪಾದಿಯಲ್ಲಿ ಕೈಗೊಳ್ಳಲು ಸೂಚಿಸಲಾಗಿದೆ. ಮಳೆ ಕಡಿಮೆಯಾದರೆ ಗುಣಮಟ್ಟದ ಕೆಲಸ ಮಾಡಲು ಸಾಧ್ಯವಾಗುತ್ತದೆ. ಮಳೆ ಇದ್ದ ಸಂದರ್ಭದಲ್ಲಿ ಹಾಕಿದರೆ ಅದು ಉಳಿಯುವುದಿಲ್ಲ. ಯೋಜನಾ ಬದ್ಧವಾಗಿ ಗುಂಡಿಗಳನ್ನು ಮುಚ್ಚಲು ಸೂಚಿಸಲಾಗಿದೆ ಎಂದರು.

ದೀಪಾವಳಿ ಹಬ್ಬ ನಾಡಿನ ಸಮಸ್ತರಿಗೂ ಬೆಳಕು ತರಲಿ. ಪರಿಸರ ಉಳಿಸುವ ಸಲುವಾಗಿ ಪರಿಸರ ಸ್ನೇಹಿ ದೀಪಾವಳಿ ಆಚರಿಸೋಣ. ಶಬ್ಧ ಹಾಗೂ ವಾಯು ಮಾಲಿನ್ಯ ತಡೆಯೋಣ, 125 ಡೆಸಿಬಿಲ್ ಗಿಂತ ಕಡಿಮೆ ಇರುವ ಪಟಾಕಿಗಳನ್ನು ಬಳಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಸೋಮಶೇಖರ್, ಶಿವರಾಮ ಹೆಬ್ಬಾರ್, ಸಂದಸ ಪಿ.ಸಿ.ಮೋಹನ್, ಶಾಸಕ ನಿರಂಜನ್ ಕುಮಾರ್, ಹಾಗೂ ಗೃಹ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಡಿಜಿಪಿ ಅಗ್ನಿಶಾಮಕ ಸೇವೆಗಳ ಡಿಜಿಪಿ ಡಾ. ಎ.ಕೆ.ಪಾಂಡೆ ಇನ್ನಿತರರು ಪಾಲ್ಗೊಂಡಿದ್ದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+