ಮತ್ತೆ ಹಳಿ ಮೇಲೆ ಗೋಲ್ಡನ್ ಚಾರಿಯಟ್; ದರದಲ್ಲಿ ಭಾರಿ ಕಡಿತ
ಬೆಂಗಳೂರು, ಮೇ 27 : ಕೆಲವೇ ದಿನಗಳಲ್ಲಿ ಕರ್ನಾಟಕದ ಹೆಮ್ಮೆಯ ಗೋಲ್ಡನ್ ಚಾರಿಯಟ್ ರೈಲು ಮತ್ತೆ ಸಂಚಾರ ಆರಂಭಿಸಲಿದೆ. ಈ ಬಾರಿ ಟಿಕೆಟ್ ದರದಲ್ಲೂ ಕಡಿತ ಮಾಡಲಾಗುತ್ತಿದ್ದು, ಸಾಮಾನ್ಯ ಜನರಿಗೂ ಐಷಾರಾಮಿ ರೈಲು ಕೈಗೆಟುಕಲಿದೆ.
ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಐಷಾರಾಮಿ ರೈಲಿನ ಮೂಲಕ ದಕ್ಷಿಣ ಭಾರತದ ಪ್ರವಾಸಿ ಸ್ಥಳಗಳು, ಐತಿಹಾಸಿಕ ಸ್ಥಳಗಳನ್ನು ಜನರು ವೀಕ್ಷಣೆ ಮಾಡಬಹುದಾಗಿದೆ ಎಂದು ಹೇಳಿದೆ. ಲಾಕ್ ಡೌನ್ ಮುಗಿದು ಪ್ರವಾಸಿ ಚಟುವಟಿಕೆ ಆರಂಭವಾದ ಬಳಿಕ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
ಬೆಂಗಳೂರಿನಿಂದ ಹೊರಡುವ ರೈಲಿನಲ್ಲಿ ಸಂಚಾರ ಆರಂಭಿಸಿದರೆ ಬಂಡೀಪುರ ರಾಷ್ಟ್ರೀಯ ಉದ್ಯಾನ, ಮೈಸೂರು, ಹಳೆಬೀಡು, ಚಿಕ್ಕಮಗಳೂರು, ಹಂಪಿ, ಬಾದಾಮಿ, ಪಟ್ಟದಕಲ್ಲು, ಐಹೊಳೆ ಮತ್ತು ಗೋವಾವನ್ನು ವೀಕ್ಷಿಸುವಂತೆ ಪ್ಯಾಕೇಜ್ ಸಿದ್ಧಪಡಿಸಲಾಗುತ್ತದೆ.

ಈ ಬಾರಿ ಪ್ಯಾಕೇಜ್ ದರದಲ್ಲಿಯೂ ಕಡಿತ ಮಾಡಲಿದ್ದು, ಇದರಿಂದಾಗಿ ಸಾಮಾನ್ಯ ಜನರು ಸಹ ಐಷಾರಾಮಿ ರೈಲಿನ ಮೂಲಕ ಸಂಚಾರ ನಡೆಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ನೈಋತ್ಯ ರೈಲ್ವೆ ಮಾಹಿತಿ ನೀಡಿದೆ.
ಹೊಸದಾಗಿ ವಿನ್ಯಾಸಗೊಂಡ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲಿನ ಬೋಗಿಗಳಿಗೆ ಕರ್ನಾಟಕದ ರಾಜವಂಶದ ಹೆಸರುಗಳನ್ನು ಇಡಲಾಗಿದೆ. ಬೋಗಿಗಳನ್ನು ಕದಂಬ, ಹೊಯ್ಸಳ, ರಾಷ್ಟ್ರಕೂಟ, ಚಾಲುಕ್ಯ ಹೀಗೆ ಹೆಸರಿಸಲಾಗುತ್ತದೆ.
ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಗೋಲ್ಡನ್ ಚಾರಿಯಟ್ ರೈಲು ಸೇವೆ ಉಸ್ತುವಾರಿ ನೋಡಿಕೊಳ್ಳುತ್ತಿತ್ತು. ಆದರೆ, ಕೆಲವು ವರ್ಷಗಳ ಹಿಂದೆ ನಷ್ಟದ ಕಾರಣ ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.
18 ಬೋಗಿಗಳನ್ನು ಹೊಂದಿದ್ದ ಐಷಾರಾಮಿ ಗೋಲ್ಡನ್ ಚಾರಿಯಟ್ ರೈಲು ಸುಮಾರು 10 ವರ್ಷಗಳ ಕಾಲ ಸಂಚಾರ ನಡೆಸಿತ್ತು. ಇದರಿಂದಾಗಿ ಸರ್ಕಾರಕ್ಕೆ ಸುಮಾರು 40 ಕೋಟಿ ನಷ್ಟವಾಗಿತ್ತು. ಈಗ ಹೊಸ ವಿನ್ಯಾಸದ ಜೊತೆ ರೈಲನ್ನು ಪುನಃ ಓಡಿಸಲು ತೀರ್ಮಾನಿಸಲಾಗಿದೆ.












Click it and Unblock the Notifications