ಗೋವಾ ರೀತಿ ಮಂಗಳೂರಿನ ಅಭಿವೃದ್ಧಿ, ಹೊಸ ಪ್ರವಾಸೋದ್ಯಮ ನೀತಿ ಜಾರಿ: ಡಿ.ಕೆ.ಶಿವಕುಮಾರ್
ಮಂಗಳೂರು: ಕರಾವಳಿ ಪ್ರವಾಸೋದ್ಯಮದಲ್ಲಿ ಹೆಸರುವಾಸಿಯಾಗಿರುವ ಗೋವಾ ಮಾದರಿ ಕರ್ನಾಟಕದ ಕರಾವಳಿಯನ್ನು ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರಾವಳಿ ಭಾಗಕ್ಕೆ ಮತ್ತೆ ಜೀವ ಕೊಡಬೇಕು. ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.
ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕರಾವಳಿ ಕರ್ನಾಟಕದ ಪ್ರವಾಸೋದ್ಯಮ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ್ದಾರೆ. ಕರಾವಳಿ ಎಂದರೆ ಒಂದು ಸೌಂದರ್ಯ, ಜ್ಞಾನ ಹಾಗೂ ಸಂಪತ್ತಿನ ಪರ್ವತ. ದೈವ, ದೇವಾಲಯ ಹಾಗೂ ಶಕ್ತಿ ದೇವತೆಗಳ ಪ್ರವಾಸಿ ಕೇಂದ್ರ, ಇದು ವ್ಯಾಪಾರಿಗಳ ನಿಧಿ ಹಾಗೂ ಪ್ರವಾಸಿಗರ ಸ್ವರ್ಗ. 300 ಕಿ.ಮೀ ಕರಾವಳಿ ಪ್ರದೇಶವನ್ನು ಅಭಿವೃದ್ಧಿ ಮಾಡಲು ನಮ್ಮ ಸರ್ಕಾರ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ.

ಗೋವಾ ಮಂಗಳೂರಿಗೆ ಯಾವುದೇ ವ್ಯತ್ಯಾಸ ಇಲ್ಲ
ಪರಿಸರ, ಪ್ರಕೃತಿ ಹಾಗೂ ನೀರಿನ ವಿಷಯದಲ್ಲಿ ಗೋವಾಗೆ ಹಾಗೂ ಮಂಗಳೂರಿಗೆ ಯಾವುದೇ ವ್ಯತ್ಯಾಸವಿಲ್ಲ. ಗೋವಾದಲ್ಲಿರುವ ಬೀಚ್‌ಗಳೇ ನಮ್ಮಲ್ಲೂ ಇವೆ. ಹೀಗಾಗಿ ಕಾನೂನು ಚೌಕಟ್ಟಿನಲ್ಲಿ ಏನೆಲ್ಲ ತೊಂದರೆಗಳಿವೆ, ಅವುಗಳನ್ನು ಸರಿಪಡಿಸಿ ಹೊಸ ಪ್ರವಾಸೋದ್ಯಮ ನೀತಿಯನ್ನು ರೂಪಿಸುತ್ತೇವೆ ಎಂದು ಹೇಳಿದ್ದಾರೆ.
ಇತಿಹಾಸಕ್ಕೆ ಹೋಗಿ ನೋಡುವುದಾರೆ ಮಂಗಳೂರಿನವರು ಇಡೀ ರಾಷ್ಟ್ರಕ್ಕೆ ಬ್ಯಾಂಕ್‌ಗಳನ್ನು ಕೊಟ್ಟಿದ್ದಾರೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಶಿಸ್ತಿನ ಜನ. ಜೊತೆಗೆ ಮಂಗಳೂರು ಒಂದು ಎಜ್ಯುಕೇಷನ್ ಹಬ್. ಇಷ್ಟು ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಪಿಯು ಕಾಲೇಜುಗಳು ಎಲ್ಲೂ ಇಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರಾವಳಿ ಭಾಗಕ್ಕೆ ಮತ್ತೆ ಜೀವ ಕೊಡುವ ಉದ್ದೇಶದಿಂದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಇಲ್ಲಿನ ಶಾಸಕರು ಹಾಗೂ ಜನಪ್ರತಿನಿಧಿಗಳ ಅಭಿಪ್ರಾಯವನ್ನು ತೆಗೆದುಕೊಳ್ಳುತ್ತೇವೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು. ಎಲ್ಲರೂ ಒಗ್ಗಟ್ಟಾಗಿ ಕರಾವಳಿ ಅಭಿವೃದ್ಧಿಯನ್ನು ಮಾಡೋಣ ಎಂದು ಡಿಕೆ.ಶಿವಕುಮಾರ್ ಕರೆ ನೀಡಿದ್ದಾರೆ.
ರಾಜ್ಯ ಕರಾವಳಿಗೆ ಏನೆಲ್ಲ ಅನುಕೂಲ?
ಗೋವಾ ಮಾದರಿಯಲ್ಲಿ ಕರ್ನಾಟಕದ ಕರಾವಳಿ ಪ್ರದೇಶವನ್ನು ಅಭಿವೃದ್ಧಿಪಡಿಸುವ ನಿರ್ಧಾರದಿಂದ ಹೋಟೆಲ್, ರೆಸಾರ್ಟ್, ಹೋಮ್‌ಸ್ಟೇ, ರೆಸ್ಟೋರೆಂಟ್, ಸಾರಿಗೆ ಸೇರಿದಂತೆ ಅನೇಕ ಸೇವಾ ಕ್ಷೇತ್ರಗಳಿಗೆ ಉತ್ತೇಜನ ಸಿಗಲಿದೆ. ಇದರಿಂದ ಸ್ಥಳೀಯ ಉದ್ಯಮಿಗಳಿಗೆ ಆದಾಯ ಹೆಚ್ಚುವ ಜೊತೆಗ ಕರಾವಳಿ ಆರ್ಥಿಕತೆ ಬಲಿಷ್ಠವಾಗಲಿದೆ.
ಪ್ರವಾಸೋದ್ಯಮ ವಿಸ್ತಾರದಿಂದ ಯುವಕರಿಗೆ ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಗೈಡ್‌ಗಳು, ಚಾಲಕರು, ಹೋಟೆಲ್ ಸಿಬ್ಬಂದಿ, ಕರಕುಶಲ ವಸ್ತು ಮಾರಾಟಗಾರರು ಸೇರಿದಂತೆ ಸಾವಿರಾರು ಜನರಿಗೆ ಕೆಲಸ ಸಿಗಲಿದೆ. ರಸ್ತೆ, ವಿದ್ಯುತ್, ಕುಡಿಯುವ ನೀರು, ಸ್ವಚ್ಛತೆ, ಸಮುದ್ರ ತೀರ ಸೌಂದರ್ಯೀಕರಣ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ವೇಗ ಸಿಗಲಿದೆ. ಪ್ರವಾಸಿಗರಷ್ಟೇ ಅಲ್ಲ, ಸ್ಥಳೀಯರ ಜೀವನಮಟ್ಟವೂ ಉತ್ತಮವಾಗುತ್ತದೆ.
ಕರಾವಳಿಯ ದೈವ ಆರಾಧನೆ, ದೇವಾಲಯಗಳು, ಶಕ್ತಿ ದೇವತೆಗಳ ಕ್ಷೇತ್ರಗಳು ರಾಷ್ಟ್ರಮಟ್ಟದಲ್ಲಿ ಹಾಗೂ ಜಾಗತಿಕವಾಗಿ ಪ್ರಸಿದ್ಧಿ ಪಡೆಯಲಿವೆ. ಧಾರ್ಮಿಕ ಪ್ರವಾಸೋದ್ಯಮ ಹೆಚ್ಚಿದರೆ ವರ್ಷಪೂರ್ತಿ ಪ್ರವಾಸಿಗರ ಹರಿವು ಸಾಧ್ಯವಾಗುತ್ತದೆ. ಯಕ್ಷಗಾನ, ಭೂತಕೋಲ, ಕರಾವಳಿ ಸಂಸ್ಕೃತಿ, ಆಹಾರ ಪದ್ಧತಿ ಇವೆಲ್ಲವೂ ಪ್ರವಾಸೋದ್ಯಮದ ಮೂಲಕ ಮತ್ತಷ್ಟು ಬೆಳಕಿಗೆ ಬರಲಿವೆ.
ಮೀನುಗಾರರು, ರೈತರು, ಸಣ್ಣ ವ್ಯಾಪಾರಿಗಳು, ಮಹಿಳಾ ಸ್ವಸಹಾಯ ಸಂಘಗಳು ಪ್ರವಾಸೋದ್ಯಮದೊಂದಿಗೆ ನೇರವಾಗಿ ಸಂಪರ್ಕ ಹೊಂದಿ ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಪಡೆಯಬಹುದು. ರಾಜ್ಯದ 300 ಕಿ.ಮೀ ಉದ್ದದ ಕರಾವಳಿ ಪ್ರದೇಶ ಸಮಗ್ರವಾಗಿ ಅಭಿವೃದ್ಧಿಯಾದರೆ, ಕರ್ನಾಟಕವೂ ಗೋವಾದಂತೆ ಪ್ರಮುಖ ಪ್ರವಾಸಿ ತಾಣವಾಗಿ ದೇಶ-ವಿದೇಶಗಳಲ್ಲಿ ಗುರುತಿಸಿಕೊಳ್ಳಲಿದೆ.












Click it and Unblock the Notifications