ಬೆಂಗಳೂರು ಉಸ್ತುವಾರಿ ನನಗೇ ಕೊಡಿ ಎಂದ ಸಚಿವ ಸೋಮಣ್ಣ

ಬೆಂಗಳೂರು, ಅ.9: ಬೆಂಗಳೂರು ನಗರ ಜಿಲ್ಲೆ ಉಸ್ತುವಾರಿ ಸಚಿವ ಸ್ಥಾನ ಯಾರಿಗೆ ನೀಡಬೇಕು ಎಂದು ಎರಡು ಮೂರು ದಿನಗಳಲ್ಲಿ ನಿರ್ಧಾರವಾಗಲಿದ್ದು, ಹಿರಿತನ ಪರಿಗಣಿಸಿ ನನಗೇ ನೀಡುವಂತೆ ಕೇಳಿದ್ದೇನೆ ಎಂದು ವಸತಿ ಸಚಿವ ವಿ. ಸೋಮಣ್ಣ ಹೇಳಿದರು.

ಈ ಹಿಂದೆ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿರುವ ಆರ್. ಅಶೋಕ್, ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಬೆಂಗಳೂರು ಉಸ್ತುವಾರಿಯ ಮೇಲೆ ಕಣ್ಣಿಟ್ಟಿದ್ದಾರೆ. ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಸಹ ಪ್ರಯತ್ನ ಆರಂಭಿಸಿದ್ದಾರೆ. ಇದೆಲ್ಲದರ ಮಧ್ಯೆ ವಿ.ಸೋಮಣ್ಣ ಅವರು ನನ್ನನ್ನೇ ಮಂತ್ರಿ ಮಾಡಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದಾರೆ.

"ಬೆಂಗಳೂರು ನಗರದ ಉಸ್ತುವಾರಿಯನ್ನು ಅಶೋಕನಿಗೆ ಕೊಡ್ತಾರಾ, ಸಿಎಂ ಇಟ್ಟುಕೊಳ್ಳುತ್ತಾರಾ ಇಲ್ಲಾ ಸೋಮಣ್ಣನಿಗೆ ಕೊಡ್ತಾರ, ಇಲ್ಲಾ ಎರಡು ಮಾಡ್ತಾರ, ಏನು ಮಾಡಿದ್ರೂ ನಮ್ಮ ತಕರಾರಿಲ್ಲ" ಎಂದು ಶನಿವಾರ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Give Bengaluru Urban District Incharge post to me says V Somanna

"ನಾನು ಜೆ.ಎಚ್.ಪಟೇಲ್ ಅವರ ಸಚಿವ ಸಂಪುಟದಲ್ಲಿ ಬೆಂಗಳೂರು ನಗರದ ಸಚಿವನಾಗಿದ್ದವನು. ನನಗೆ ಎಲ್ಲರಿಗಿಂತ ಹೆಚ್ಚು ಅನುಭವ ಮತ್ತು ಅರ್ಹತೆ ಇದೆ. ಆದ್ದರಿಂದ ನನ್ನ ಹೆಸರನ್ನೂ ಪರಿಗಣಿಸಿ ಎಂದು ಮುಖ್ಯಮಂತ್ರಿಗಳನ್ನು ಕೇಳಿರುವುದು ನಿಜ. ಬುದ್ಧಿವಂತರಿದ್ದರೆ ಚರ್ಚೆ ನಡೆಯುತ್ತದೆ. ಬೆಂಗಳೂರು ನಗರದ ಎಲ್ಲ ಶಾಸಕರೂ ಒಗ್ಗಟ್ಟಾಗಿದ್ದೇವೆ" ಎಂದು ಹೇಳಿದರು.

ಬೆಂಗಳೂರು ನಗರ ಸೇರಿ ವಿವಿಧ ಜಿಲ್ಲೆಗಳ ಉಸ್ತುವಾರಿ ಯಾರಿಗೆ ನೀಡಬೇಕೆಂಬುದು ಮುಖ್ಯಮಂತ್ರಿಗಳ ಪರಮಾಧಿಕಾರ. ಆ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮುಖ್ಯಮಂತ್ರಿಗಳು ಉಸ್ತುವಾರಿ ಸಚಿವರ ಕುರಿತು ನಿರ್ಧರಿಸಲಿದ್ದಾರೆ ಎಂದರು.

ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಬೆಂಗಳೂರು ನಗರಕ್ಕೆ ಯಾರನ್ನೂ ಉಸ್ತುವಾರಿ ಸಚಿವರನ್ನಾಗಿ ಮಾಡಿಲ್ಲ. ಕೋವಿಡ್ ನಿರ್ವಹಣೆ, ದಸರಾ ಮತ್ತು ಸ್ವಾತಂತ್ರ್ಯೋತ್ಸವ ಸಂಬಂಧ ತಾತ್ಕಾಲಿಕ ನೇಮಕಾತಿ ನಡೆದಿದೆ ಎಂದು ಸೋಮಣ್ಣ ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು.

ಡಿಕೆಶಿಯಷ್ಟು ನನಗೆ ತಿಳಿದಿಲ್ಲ:

ಐಟಿ ದಾಳಿ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸೋಮಣ್ಣ, "ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ನನ್ನ ಸ್ನೇಹಿತರು, ಬುದ್ಧಿವಂತರು ಇದ್ದಾರೆ. ಅವರ ಬಳಿ ಇರುವ ಮಾಹಿತಿ ಕುರಿತು ನನಗೆ ತಿಳಿದಿಲ್ಲ. ಕೆಲ ಸಚಿವರು ಐಟಿ ದಾಳಿ ನಡೆಸದಂತೆ ಒತ್ತಾಯಿಸಿದ್ದರೆ ಅಂತಹವರ ಹೆಸರನ್ನು ಹೇಳಬೇಕಿತ್ತು'' ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರಗಳು ನಿಂತ ನೀರಲ್ಲ. ಕೇಂದ್ರದ ಆದಾಯ ತೆರಿಗೆ ಇಲಾಖೆ ತನ್ನ ಕರ್ತವ್ಯ ಮಾಡುವಾಗ ಅವನು ಯಾವ ಪಕ್ಷ, ಯಾರ ಜೊತೆ ಇದ್ದ, ಯಾರ ಪಿಎ ಎಂದು ನೋಡುವುದಿಲ್ಲ. ಅವೆಲ್ಲವೂ ಇಲ್ಲಿ ಗೌಣ. ಇದೊಂದು ಸಹಜವಾದ ಪ್ರಕ್ರಿಯೆ. ಆ ಪ್ರಕ್ರಿಯೆಗೆ ಸುಣ್ಣ- ಬಣ್ಣ ಮಾಡಿ ಮತ್ತೊಂದು ಡ್ರೆಸ್ ಮಾಡುವ ಅಗತ್ಯವಿಲ್ಲ. ಯಾವುದೇ ಸರಕಾರ ಇದ್ದರೂ ಎಲ್ಲರನ್ನೂ ಒಂದೇ ರೀತಿಯಿಂದ ನೋಡುತ್ತದೆ. ಐಟಿಯವರು ತಮ್ಮ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಅವರೂ ಹೇಳಿದ್ದಾರೆ ಎಂದರು.

ಉಪ ಚುನಾವಣೆ ಪ್ರಚಾರ:

ಸಿಂಧಗಿಯ ಅಲಮೇಲದಲ್ಲಿ ಉಪ ಚುನಾವಣೆ ಪ್ರಚಾರ ಮಾಡಿದ್ದೇನೆ. ಅಭಿವೃದ್ಧಿ ಪರವಾಗಿ ಮತ್ತು ಬಿಜೆಪಿ ಪರವಾಗಿ ಜನರು ಬೆಂಬಲ ನೀಡಲಿದ್ದಾರೆ. ಹತ್ತಾರು ಸಾವಿರ ಮತಗಳ ಅಂತರದಲ್ಲಿ ನಾವು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಿಗಳಾದ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಸವಿನೆನಪಿಗಾಗಿ ಹಿನ್ನೆಲೆಯಲ್ಲಿ ರೈತ ಮೋರ್ಚಾ ವತಿಯಿಂದ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಮತ್ತು ಪ್ಲಾಸ್ಟಿಕೇತರ ಬ್ಯಾಗ್ ಬಳಕೆ ಮಾಡುವ ಕಾರ್ಯಕ್ಕೆ ಚಾಲನೆ ಕೊಡಲಾಗಿದೆ ಎಂದು ಸೋಮಣ್ಣ ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+