ಗಿರೀಶ್ ಕಾರ್ನಾಡ್ ಹೇಳಿಕೆ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ
ಬೆಂಗಳೂರು, ನವೆಂಬರ್ 11 : ಗಿರೀಶ್ ಕಾರ್ನಾಡ್ ನೀಡಿರುವ ಹೇಳಿಕೆ ಬಗ್ಗೆ ಮೌನ ಮುರಿದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಗಿರೀಶ್ ಕಾರ್ನಾಡ್ ಅವರ ಹೇಳಿಕೆ ವೈಯಕ್ತಿಕವಾದದ್ದು, ಅದಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವಿಮಾನ ನಿಲ್ದಾಣದ ಹೆಸರನ್ನು ಬದಲಾವಣೆ ಮಾಡುವ ಯಾವುದೇ ಆಲೋಚನೆ ಸರ್ಕಾರದ ಮುಂದಿಲ್ಲ' ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾತನಾಡಿದ ಅವರು, 'ವಿಮಾನ ನಿಲ್ದಾಣಕ್ಕೆ ಈಗಾಗಲೇ ಕೆಂಪೇಗೌಡ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಈ ಹೆಸರನ್ನು ಬದಲಾವಣೆ ಮಾಡುವ ಆಲೋಚನೆ ಇಲ್ಲ. ಗಿರೀಶ್ ಕಾರ್ನಾಡ್ ಅವರು ತಮ್ಮ ಹೇಳಿಕೆ ಕುರಿತು ಕ್ಷಮೆ ಯಾಚನೆ ಮಾಡಿದ್ದಾರೆ. ಸಂಘಟನೆಗಳು ಪ್ರತಿಭಟನೆಯನ್ನು ಕೈ ಬಿಡಬೇಕು' ಎಂದು ಮನವಿ ಮಾಡಿದರು.
ಕ್ಷಮೆ ಯಾಚಿಸಿದ ಕಾರ್ನಾಡ್ : ನಾಡಪ್ರಭು ಕೆಂಪೇಗೌಡರ ಬಗ್ಗೆ ತಾವು ನೀಡಿದ ಹೇಳಿಕೆ ಬಗ್ಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಕ್ಷಮೆ ಯಾಚಿಸಿದ್ದಾರೆ. 'ತಾವು ದುರುದ್ದೇಶದಿಂದ ಈ ಹೇಳಿಕೆ ನೀಡಿರಲಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಜೆ.ಪಿ.ನಗರದಲ್ಲಿ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಗಿರೀಶ್ ಕಾರ್ನಾಡ್ ಅವರು, 'ನಾನು ನನ್ನ ಅಭಿಪ್ರಾಯ ತಿಳಿಸಿದ್ದೇನೆ. ನಾನು ನೀಡಿರುವ ಹೇಳಿಕೆಯಿಂದಾಗಿ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ' ಎಂದು ಹೇಳಿದರು. [ಬೆಂಗಳೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡಿ : ಕಾರ್ನಾಡ್]

ನವೆಂಬರ್ 10 ರಂದು ಕರ್ನಾಟಕ ಸರ್ಕಾರದ ವತಿಯಿಂದ ವಿಧಾನಸೌಧದಲ್ಲಿ ಆಯೋಜಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಗಿರೀಶ್ ಕಾರ್ನಾಡ್ ಅವರು, 'ಟಿಪ್ಪು ಸುಲ್ತಾನ್ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಕನ್ನಡ ನಾಡನ್ನು ಒಗ್ಗೂಡಿಸಿದ ಆತನಿಗೆ ಸರಿಸಾಟಿಯಾದ ಕನ್ನಡಿಗ ಮತ್ತೊಬ್ಬನಿಲ್ಲ, ಆತನ ಹೆಸರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟು ಗೌರವ ಸೂಚಿಸಬೇಕಿದೆ' ಎಂದು ಹೇಳಿದ್ದರು. ['ವಿಮಾನ ನಿಲ್ದಾಣಕ್ಕೆ ಮರುನಾಮಕರಣದ ಅಗತ್ಯವಿಲ್ಲ']
'ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡನ ಹೆಸರಿಡಲಾಗಿದೆ. ಕೆಂಪೇಗೌಡ ಸ್ವಾತಂತ್ರ್ಯ ಸೇನಾನಿ ಅಲ್ಲ, ದೇವನಹಳ್ಳಿಯಲ್ಲೇ ಇರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರಿಡುವುದು ಸೂಕ್ತ' ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಇಂದು ಅವರು ಕ್ಷಮೆ ಯಾಚಿಸಿದ್ದಾರೆ. [ಕಾರ್ನಾಡ್ ಹೇಳಿಕೆಗೆ ವ್ಯಾಪಕ ವಿರೋಧ: ಅವರೊಬ್ಬ ತಲೆತಿರುಕ ಸಾಹಿತಿ]
ವ್ಯಾಪಕ ಆಕ್ರೋಶ : ಗಿರೀಶ್ ಕಾರ್ನಾಡ್ ಅವರ ಹೇಳಿಕೆಗೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಮಂಗಳವಾರ ಸಂಜೆ ಕಾರ್ನಾಡ್ ಅವರ ನಿವಾಸದ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಕಾರ್ನಾಡ್ ಅವರ ಹೇಳಿಕೆ ಖಂಡಿಸಿ ಬುಧವಾರ ಬೆಂಗಳೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ.
ಪರಮೇಶ್ವರ ಮಾತುಕತೆ : ಗಿರೀಶ್ ಕಾರ್ನಡ್ ಅವರು ನೀಡಿರುವ ಹೇಳಿಕೆಯಿಂದ ವಿವಾದ ಉಂಟಾಗಿದ್ದನ್ನು ಗಮನಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರು ಕಾರ್ನಾಡ್ ಅವರಿಗೆ ದೂರವಾಣಿ ಕರೆ ಮಾಡಿ ಕ್ಷಮೆ ಯಾಚಿಸಬೇಕು ಎಂದು ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ಈ ಕರೆಯ ನಂತರವೇ ಕಾರ್ನಾಡ್ ಅವರು ಕ್ಷಮೆ ಯಾಚಿಸಿದ್ದಾರೆ.












Click it and Unblock the Notifications