ಪಿಎಸ್ಐ ಬಂಡೆಗೆ ಬಿದ್ದ ಗುಂಡು ಪೊಲೀಸರದ್ದು
ಗುಲ್ಬರ್ಗ, ಫೆ.3 : ಗುಲ್ಬರ್ಗ ಶೂಟೌಟ್ ಪ್ರಕರಣದಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಅವರಿಗೆ ತಗುಲಿರುವ ಗುಂಡು ಪೊಲೀಸರದ್ದು, ಇರಬಹುದು ಎಂದು ಹೇಳಿರುವ ಪಾತಕಿ ಮುನ್ನಾ ಪತ್ನಿ ಗೌಸಿಯಾ ಬೇಗಂ ಪ್ರಕರಣದ ಕುರಿತು ಸಿಬಿಐ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಸೋಮವಾರ ಗುಲ್ಬರ್ಗದಲ್ಲಿ ಶೂಟೌಟ್ ನಲ್ಲಿ ಮೃತಪಟ್ಟ ಭೂಗತ ಪಾತಕಿ ಮುನ್ನಾ ಪತ್ನಿ ಗೌಸಿಯಾ ಬೇಗಂ ಪತ್ರಿಕಾಗೋಷ್ಠಿ ನಡೆಸಿದರು, ಇದೊಂದು ನಕಲಿ ಎನ್‌ಕೌಂಟರ್ ಎಂದು ಆರೋಪಿಸಿದ ಗೌಸಿಯಾ, ನನ್ನ ಪತಿಯ ಸಾವಿನ ಬಗ್ಗೆ ಸಿಬಿಐ ತನಿಖೆ ಆಗಬೇಕು ನನಗೆ ಸಂಪೂರ್ಣ ನ್ಯಾಯ ದೊರೆಯಬೇಕು ಎಂದು ಆಗ್ರಹಿಸಿದರು.[ಬಂಡೆ ತಲೆಗೆ ಬಿದ್ದ ಗುಂಡೆಲ್ಲಿ]
ನನ್ನ ಪತಿ ಮುನ್ನಾ ಕೊಲೆ, ಸುಲಿಗೆ ಮಂತಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರಲಿಲ್ಲ. ನಾವಿಬ್ಬರು ಬಟ್ಟೆ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ಪೊಲೀಸರು ಮುನ್ನಾ ವಿರುದ್ಧ ಸುಳ್ಳು ಆರೋಪ ಮಾಡಿ, ನಕಲಿ ಎನ್ ಕೌಂಟರ್ ಮೂಲಕ ಅವರನ್ನು ಹತ್ಯೆ ಮಾಡಿದ್ದಾರೆ. ಮುನ್ನಾ ಮೇಲಿರುವ ಆರೋಪಗಳನ್ನು ಪೊಲೀಸರು ಸಾಬೀತುಪಡಿಸಿದರೆ, ತಾನು ಜೈಲು ಶಿಕ್ಷೆ ಅನುಭವಿಸುತ್ತೇನೆ ಎಂದು ಸವಾಲು ಹಾಕಿದರು. [ಮಣ್ಣಲ್ಲಿ ಮಣ್ಣಾದ ಬಂಡೆ]
ಪೊಲೀಸರು ತಮ್ಮ ವೈಯಕ್ತಿಕ ದ್ವೇಷವನ್ನು ಸಾಧಿಸಿಕೊಳ್ಳಲು ನನ್ನ ಪತಿಯನ್ನು ಕೊಂದುಹಾಕಿದ್ದಾರೆ. ಮುನ್ನಾ ಬಳಿ ಯಾವುದೇ ಗನ್ ಇರಲಿಲ್ಲ. ಅವರ ಮೇಲೆ ದಿಢೀರ್ ದಾಳಿ ಮಾಡಿ ಪೊಲೀಸರು ಎನ್ ಕೌಂಟರ್ ಮಾಡಿದ್ದಾರೆ ಎಂದು ಗೌಸಿಯಾ ಆರೋಪಿಸಿದರು. ಪೊಲೀಸರ ನಕಲಿ ಎನ್ ಕೌಂಟರ್ ನಂತರವೂ ನನ್ನ ಪತಿ ಜೀವಂತವಾಗಿದ್ದರು. ಆದರೆ, ಪೊಲೀಸರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಉದ್ದೇಶಪೂರ್ವಕವಾಗಿ ವಿಳಂಬ ಮಾಡಿದರು ಎಂದು ಗೌಸಿಯಾ ಆರೋಪಿಸಿದರು.
ಮುನ್ನಾ ಬಳಿ ಯಾವುದೇ ಗನ್ ಇರಲಿಲ್ಲ. ಆದ್ದರಿಂದ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆಗೆ ಅವರಿಗೆ ತಗಲಿರುವ ಗುಂಡು ಪೊಲೀಸರ ಹೊಡೆದಿದ್ದು ಆಗಿರಬಹದು. ಆದ್ದರಿಂದ, ಮುನ್ನಾ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಿ ನನಗೆ ನ್ಯಾಯ ಸಿಗಬೇಕು ಎಂದು ಒತ್ತಾಯಿಸಿದರು. ಗೌಸಿಯಾ ಅವರ ಆರೋಪಗಳಿಂದ ಪ್ರಕರಣಕ್ಕೆ ಹೊಸ ತಿರುವುದ ದೊರೆತಂತಾಗಿದೆ.
ಸರ್ಕಾರ ಈಗಾಗಲೇ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಜ.29ರ ಬುಧವಾರ ಸಿಐಡಿ ಸರ್ಕಾರಕ್ಕೆ ತನಿಖೆಯ ಮಧ್ಯಂತರ ವರದಿ ಸಲ್ಲಿಸಿದ್ದು, ತನಿಖೆಯನ್ನು ಮುಂದುವರೆಸಿದೆ. ಈ ನಡುವೆಯೇ ಮುನ್ನಾ ಪತಿ ಗೌಸಿಯಾ ಮುನ್ನಾ ಬಳಿ ಗನ್ ಇರಲಿಲ್ಲ ಎಂದು ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.













Click it and Unblock the Notifications