ಗೌರಿ ಲಂಕೇಶ್ ಶಂಕಿತ ಹಂತಕನ ರೇಖಾಚಿತ್ರದಲ್ಲಿ 'ತಿಲಕ': SIT ಸ್ಪಷ್ಟನೆ
ಬೆಂಗಳೂರು, ಅ 17: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಶಂಕಿತ ಹಂತಕನ ಹಣೆಯಲ್ಲಿ ತಿಲಕವಿರುವ ರೇಖಾಚಿತ್ರವನ್ನು ಬಿಡುಗಡೆಗೊಳಿಸಿದ್ದ ವಿಶೇಷ ತನಿಖಾ ತಂಡ (SIT) ಈ ಬಗ್ಗೆ ಸ್ಪಷ್ಟನೆ ನೀಡಿದೆ.
ಸಾಮಾಜಿಕ ತಾಣದಲ್ಲಿ ವ್ಯಾಪಕ ಚರ್ಚೆಯಾಗುತ್ತಿರುವ ಈ ಸಂದರ್ಭದಲ್ಲಿ ಹೇಳಿಕೆ ನೀಡಿರುವ SIT ಅಧಿಕಾರಿಗಳು, ಗೌರಿ ಲಂಕೇಶ್ ತಾಯಿ ಇಂದಿರಾ ನೀಡಿರುವ ಮಾಹಿತಿಯ ಆಧಾರದಲ್ಲಿ, ಹಣೆಗೆ ತಿಲಕವಿಟ್ಟ ರೇಖಾಚಿತ್ರವನ್ನು ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯೊಬ್ಬ, ಹಣೆಗೆ ತಿಲಕವಿಟ್ಟುಕೊಂಡು ನಮ್ಮ ಮನೆಗೆ ಬಂದಿದ್ದ ಎಂದು ಗೌರಿ ತಾಯಿ ನಮಗೆ ಮಾಹಿತಿ ನೀಡಿದ್ದರು. ಅದನ್ನು ಆಧಾರವಾಗಿ ಇಟ್ಟುಕೊಂಡು ರೇಖಾಚಿತ್ರ ಬಿಡುಗಡೆಗೊಳಿಸಿದ್ದು ಎಂದು ವಿಶೇಷ ತನಿಖಾ ತಂಡದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ತನಿಖಾ ತಂಡ ಬಿಡುಗಡೆ ಮಾಡಿದ್ದ ಶಂಕಿತರ ರೇಖಾಚಿತ್ರಗಳು ಒಂದೆಡೆ ಅವಾಂತರ ಸೃಷ್ಟಿಸಿದ್ದರೆ, ಮತ್ತೊಂದೆಡೆ ಸಾಮಾಜಿಕ ತಾಣದಲ್ಲಿ ಟ್ರೋಲ್ ಆಗಲು ಹಾಸ್ಯದ ವಸ್ತುವಾಗಿತ್ತು.
ಇನ್ನು, SIT ಬಿಡುಗಡೆ ಮಾಡಿದ ಶಂಕಿತರ ರೇಖಾ ಚಿತ್ರದಲ್ಲಿ ಒಂದು ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್ ಗೌಡ ಆಪ್ತ ಸಹಾಯಕ ಪ್ರಭಾಕರ್ ರನ್ನು ಹೋಲುತ್ತಿದೆ ಎಂದು ವಿಪರೀತ ಚರ್ಚೆ ನಡೆಯುತ್ತಿತ್ತು. ಕೊನೆಗೆ, ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ತೇಜೋವಧೆಗೆ ಮಾಡಿರುವ ಪಿತೂರಿ ಎಂದು ಪ್ರಭಾಕರ್ ಹೇಳಿಕೊಂಡಿದ್ದರು.
ಹಿಂದೂಪರ ಸಂಘಟನೆ ಮುಖಂಡರು ಹಣೆಯಲ್ಲಿ ತಿಲಕ ಇಟ್ಟಿರುವ ರೇಖಾಚಿತ್ರ ಬಿಡುಗಡೆ ಮಾಡಿರುವ SIT ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರೆ, ಶಂಕಿತ ನಕ್ಸಲ್ ಮುಖಂಡ ವಿಕ್ರಂ ಗೌಡ ಹಾಗೂ JNUನ ಕನ್ನಯ್ಯ ಕುಮಾರಿಗೂ ತಾಳೆ ಮಾಡಲಾಗುತ್ತಿದೆ.












Click it and Unblock the Notifications