Breaking: Gas Leakage: ಧಾರವಾಡ ಬಳಿ NH 4 ನಲ್ಲಿ ಅನಿಲ ಸೋರಿಕೆ, ಹೆದ್ದಾರಿ ಮಾರ್ಗ ಬದಲಾವಣೆ
ಧಾರವಾಡ, ಆಗಸ್ಟ್ 16: ಬೆಳಗಾವಿಯಿಂದ ಬೆಂಗಳೂರಿಗೆ ಬರುತ್ತಿದ್ದ ಎಲ್‌ಪಿಜಿ ಟ್ಯಾಂಕರ್ ನಲ್ಲಿ ಗ್ಯಾಸ್ ಸೋರಿಕೆ ಆಗಿರುವ ಘಟನೆ ಧಾರವಾಡ ಸಮೀಪ ರಾಷ್ಟ್ರೀಯ ಹೆದ್ದಾರಿ (NH 4) ಬಳಿ ನಡೆದಿದೆ. ಇದರಿಂದ ಈ ಭಾಗದಲ್ಲಿ ಹೆದ್ದಾರಿ ಸಂಚಾರ ಸ್ಥಗತಿಗೊಂಡಿದೆ.
ಘಟನೆಯಿಂದ ಎಚ್ಚೆತ್ತ ಸರ್ಕಾರ ಸುರಕ್ಷತಾ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿಯಿಂದ ಧಾರವಾಡ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದ ವಾಹನಗಳ ಸಂಚಾರ ಮಾರ್ಗ ಬದಲಾಯಿಸಲಾಗಿದೆ ಎಂದು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ (SP) ಡಾ.ಸಂಜೀವ್ ಪಾಟೀಲ್ ತಿಳಿಸಿದ್ದಾರೆ.

ಧಾರವಾಡ ಹೈಕೋರ್ಟ್ ಬಳಿ ಅಂಡರ್ಪಾಸ್ನಲ್ಲಿ ಸಿಲುಕಿದ ಹೆಚ್ಪಿ ಕಂಪನಿಗೆ ಸೇರಿದ ಟ್ಯಾಂಕರ್ನಿಂದ ಗ್ಯಾಸ್ ಸೋರಿಕೆ ಆಗಿದೆ. ಸುರಕ್ಷತಾ ದೃಷ್ಟಿಯಿಂದ ಈ ಭಾಗದಲ್ಲಿ ವಿದ್ಯುತ್ ಕಡಿತಗೊಳಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ವಾಹನಗಳ ಸಂಚಾರಕ್ಕಾಗಿ NH 4 ಹೊರತುಪಡಿಸಿ ನಾಲ್ಕು ಪರ್ಯಾಯ ಮಾರ್ಗಗಗಳನ್ನು ಸವಾರರಿಗೆ ಸೂಚಿಸಲಾಗಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಬರುವವರು ಕಿತ್ತೂರುನಿಂದ ತಿರುವು ಪಡೆದು ತಡಕೋಡ ಧಾರವಾಡ ರ್ಮಾವಾಗಿ ಹುಬ್ಬಳ್ಳಿಗೆ ಬಂದು ರಾಜಧಾನಿಗೆ ಬರಬೇಕಿದೆ.
ಇನ್ನೂ ಬೆಳಗಾವಿಯಿಂದ ಹಿರೇಬಾಗೇವಾಡಿ ಮೂಲಕ ಬೈಲಹೊಂಗಲ ಮಾರ್ಗವಾಗಿ ಸಾಗಿ ತಡಕೋಡ ಹಾದು ಧಾರವಾಡದಿಂದ ಸಾಗಬೇಕು. ಅದೇ ರೀತಿ ಸಂಕೇಶ್ವರದಿಂದ ಹುಕ್ಕೇರಿ ಘಟಪ್ರಭಾ ಮೂಲಕ ಗೋಕಾಕ್ ಮತ್ತು ಧಾರವಾಡ ಮಾರ್ಗವಾಗಿ ಬೆಂಗಳೂರಿಗೆ ಬರಬೇಕು.
ಮತ್ತೊಂದು ಪರ್ಯಾಯ ಮಾರ್ಗವೆಂದರೆ ಬೆಳಗಾವಿಯಿಂದ ನಿಪ್ಪಾಣಿ ಮೂಲಕ ಸಾಗಿ ಬಂದು ಹುಕ್ಕೇರಿ ಮಾರ್ಗವಾಗಿ ಗೋಕಾಕ್, ಸವದತ್ತಿ ಬೆಂಗಳೂರಿನತ್ತ ಸಂಚರಿಸಲು ಸಂಚಾರ ಪೊಲೀಸರು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಯಾವುದೇ ಪ್ರಾಣ ಹಾನಿ ಆಗಿಲ್ಲ ಎನ್ನಲಾಗಿದೆ.












Click it and Unblock the Notifications