Breaking; ಖ್ಯಾತ ಗಮಕ ಗಾಯಕ ಹೆಚ್. ಆರ್. ಕೇಶವಮೂರ್ತಿ ವಿಧಿವಶ
ಬೆಂಗಳೂರು, ಡಿಸೆಂಬರ್ 21; ಖ್ಯಾತ ಗಮಕ ಗಾಯಕ, ಪದ್ಮಶ್ರೀ ಪಶಸ್ತಿ ಪುರಸ್ಕೃತ ಹೆಚ್. ಆರ್. ಕೇಶವಮೂರ್ತಿ ವಿಧಿವಶರಾದರು. ಕೇಂದ್ರ ಸಚಿವರು ಸೇರಿದಂತೆ ಹಲವಾರು ಗಣ್ಯರು ಖ್ಯಾತ ಗಾಯಕನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ಬುಧವಾರ ಗಮಕ ಗಾಯಕ ಹೆಚ್. ಆರ್. ಕೇಶವಮೂರ್ತಿ ವಿಧಿವಶರಾದರು. 1934ರ ಫೆಬ್ರವರಿ 22ರಂದು ಅವರು ಶಿವಮೊಗ್ಗದ ಹೊಸಹಳ್ಳಿ ಗ್ರಾಮದಲ್ಲಿ ಜನಿಸಿದ್ದರು.
ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಹೆಚ್. ಆರ್. ಕೇಶವಮೂರ್ತಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. 'ಹಿರಿಯ ಗಮಕ ಕಲಾವಿದರಾದ ಪದ್ಮಶ್ರೀ ಹೆಚ್ ಆರ್ ಕೇಶವಮೂರ್ತಿ ಅವರು ನಿಧನರಾದ ಸುದ್ದಿ ತಿಳಿದು ದುಃಖಿತನಾಗಿದ್ದೇನೆ' ಎಂದು ಹೇಳಿದ್ದಾರೆ.

'ಕುಮಾರವ್ಯಾಸ ಭಾರತ, ಜೈಮಿನಿ ಭಾರತ ಸೇರಿದಂತೆ ಹಲವು ಕೃತಿಗಳನ್ನು ಹೆಚ್ಚಿನ ಸಂಖ್ಯೆಯ ಕಲಾರಸಿಕರಿಗೆ ತಲುಪಿಸಿ, ಗಮಕ ಶೈಲಿಯಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಹಿರಿಯ ಕಲಾವಿದರ ಕೊಡುಗೆ ಅಪಾರ' ಎಂದು ಬಣ್ಣಿಸಿದ್ದಾರೆ.
'ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಅವರ ಕುಟುಂಬದವರಿಗೆ ಮತ್ತು ಅಭಿಮಾನಿಗಳಿಗೆ ಈ ನೋವು ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ; ಗಮಕ ಕಲಾವಿದರ, ಪದ್ಮಶ್ರೀ ಪುರಸ್ಕೃತ ಹೆಚ್. ಆರ್. ಕೇಶವಮೂರ್ತಿ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ. ಈ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಟ್ವೀಟ್ ಮಾಡಿದ್ದಾರೆ.
ಗಮಕ ಕಲಾವಿದರು, ಪದ್ಮಶ್ರೀ ಪುರಸ್ಕೃತ, ಶ್ರೀ ಹೊಸಳ್ಳಿ ಕೇಶವಮೂರ್ತಿ ಅವರ ಅಂತ್ಯಕ್ರಿಯೆಯನ್ನು ಪೊಲೀಸ್ ಗೌರವದೊಂದಿಗೆ ನೆರವೇರಿಸಲು ಆದೇಶಿಸಲಾಗಿದೆ. pic.twitter.com/6YYopw6Wqm
— Araga Jnanendra (@JnanendraAraga) December 21, 2022
ಸಂಕ್ಷಿಪ್ತ ಪರಿಚಯ; ಹೆಚ್. ಆರ್. ಕೇಶವಮೂರ್ತಿ 1934ರ ಫೆಬ್ರವರಿ 22ರಂದು ಜನಿಸಿದರು. ತಂದೆ ರಾಮಾಶಾಸ್ತ್ರಿ, ತಾಯಿ ಲಕ್ಷ್ಮೀ ದೇವಮ್ಮ. ತಂದೆ ಮತ್ತು ತಾಯಿ ಹಾಡುತ್ತಿದ್ದ ಪುರಾಣಗಳಿಂದ ಪ್ರೇರಿತರಾಗಿ ಕೇಶವಮೂರ್ತಿ ಗಮಕದ ಕಡೆ ಆಸಕ್ತಿ ಬೆಳೆಸಿಕೊಂಡರು.
16ನೇ ವಯಸ್ಸಿನಲ್ಲಿಯೇ ಹೊಸಹಳ್ಳಿ ಗ್ರಾಮದಲ್ಲಿ ವೆಂಕಟೇಶಯ್ಯ ಬಳಿ ಗಮಕ ವಾಚನ ಕಲಿಯಲು ಆರಂಭಿಸಿದರು. ರಾಮಾಯಣ, ಮಹಾಭಾರತ, ಕನ್ನಡ ಮತ್ತು ಸಂಸ್ಕೃತದ ಕಾವ್ಯಗಳನ್ನು ಸುಶ್ರವ್ಯಾವಾಗಿ ಹಾಡುತ್ತಿದ್ದರು.
ಕರ್ನಾಟಕ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಗಮನ ವಾಚನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ. ರೆಡಿಯೋದಲ್ಲಿ ಪ್ರಸಾರವಾಗುತ್ತಿದ್ದ ಹೆಚ್. ಆರ್. ಕೇಶವಮೂರ್ತಿ ಅವರ ಗಮಕ ವಚನ ಕಾರ್ಯಕ್ರಮಕ್ಕೆ ಅಪಾರ ಅಭಿಮಾನಿಗಳಿದ್ದರು.
ಗಮಕ ಗಾಯನ ಕ್ಷೇತ್ರದಲ್ಲಿ ಹೆಚ್. ಆರ್. ಕೇಶವಮೂರ್ತಿ ಸಾಧನೆಗೆ ಅಪಾರ ಪ್ರಶಸ್ತಿಗಳು ಬಂದಿವೆ. ಕುಮಾರವ್ಯಾಸ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳು ಅವರ ಮುಡಿಗೇರಿವೆ. ಪದ್ಮಶ್ರೀ ಪಶಸ್ತಿಯನ್ನು ಸಹ ನೀಡಿ ಗೌರವಿಸಲಾಗಿದೆ.












Click it and Unblock the Notifications