National Highway: ಗದಗ-ಇಳಕಲ್-ಕಾರವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪ್ಡೇಟ್ ಕೊಟ್ಟ ಸಂಸದ
ಗದಗ, ಸೆಪ್ಟಂಬರ್ 04: ಗದಗ ಬೈಪಾಸ್, ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವ ಮೂಲಕ ಈ ಭಾಗದ ಲಕ್ಷಾಂತರ ಜನರಿಗೆ, ಸರಕು ಸಾಗಾಣೆ, ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ. ಇದು ಕೇಂದ್ ಸರ್ಕಾರದ ಯೋಜನೆಯೇ ಆದರೂ ಸಹಿತ, ರಾಜ್ಯ ಸರ್ಕಾರದ ಸಹಕಾರ ಅಗತ್ಯವಾಗಿದೆ. ಕಾಮಗಾರಿ ಆರಂಭದಲ್ಲಿದ್ದು, ಕ್ಷೇತ್ರದ ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಅವರು ಯೋಜನೆ ಅಪ್ಡೇಟ್ ಕೊಟ್ಟಿದ್ದಾರೆ.
ರಾಜ್ಯ ಸರ್ಕಾರವು ಯೋಜನೆಗೆ ಪೂರಕವಾಗಿ ಗದಗ ಬೈಪಾಸ್, ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಅಗತ್ಯ ಭೂಸ್ವಾಧೀನ ಮಾಡಿಕೊಡಬೇಕು. ಆಗ ಕೇಂದ್ರ ಸರ್ಕಾರ ಯೋಜನೆಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳಲು ಸಹಾಯವಾಗುತ್ತದೆ ಎಂದು ತಿಳಿಸಿದರು. ಇದಕ್ಕು ಮುನ್ನ ಅವರು ಗದಗಿನಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಹಾಗೂ ಹೊಸ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಮುಖ್ಯಸ್ಥರ ಜತೆ ಚರ್ಚಿಸಿದರು.

473 ಕೋಟಿ ರೂ.ನಲ್ಲಿ ಭೂಸ್ವಾಧಿನ: ಹಂಚಿಕೆ ಮಾಡಿದ್ದೆಷ್ಟು?
ನೂತನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಲ್ಲಿ ಎದುರಾದ ಸಮಸ್ಯೆಗಳನ್ನು ಕೂಲಂಕುಷವಾಗಿ ಚರ್ಚಿಸಲಾಗಿದೆ. ಬಾಗಲಕೋಟೆ ಜಿಲ್ಲೆಯ ಶಾಂತಗಿರಿಯಿಂದ ಬರುವ ರಾಷ್ಟ್ರೀಯ ಹೆದ್ದಾರಿ ಬಳಿ ಕೆಲಸ ಸ್ಥಗಿತಗೊಂಡಿದ್ದರೆ, ಅದನ್ನು ಪುನಾರಂಭಿಸುತ್ತೇವೆ. ಗಜೇಂದ್ರಗಢ ಬೈಪಾಸ್ ಕಾಮಗಾರಿ ಆರಭವಾಗಿದೆ. ಗದಗ ಬೈಪಾಸ್ ಡಿಪಿಆರ್ ಸಿದ್ದಪಡಿಸಲಾಗಿದೆ. 473 ಕೋಟಿ ರೂ. ಅಂದಾಜು ಮಾಡಲಾಗಿದೆ. 73 ಕೋಟಿ ರೂ. ಭೂ ಸ್ವಾಧಿನಕ್ಕೆ ಅಗತ್ಯವಾಗಿದೆ ಎಂದು ಅವರು ವಿವರಿಸಿದರು.
ಬಿಜೆಪಿ ಅವಧಿಯಲ್ಲಿ ನಾನು ಮುಖ್ಯಮಂತ್ರಿ ಆಗಿದ್ದಾಗ 38 ಕೋಟಿ ರೂ. ಹಣ ಭೂಸ್ವಾಧೀನಕ್ಕೆ ಮೀಸಲಿಟ್ಟಿದ್ದೆ. ಸರ್ಕಾರ ಶೀಘ್ರವೇ ಭೂ ಸ್ವಾಧೀನ ಮಾಡುವಂತೆ ಪತ್ರ ಬರೆಯುತ್ತೇನೆ. ರಾಜ್ಯ ಸರ್ಕಾರ ಕಾರ್ಯ ಚುರುಕುಗೊಳಿಸಿದರೆ ಶೀಘ್ರವೇ ಕಾಮಗಾರಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ನರಗುಂದ ಬೈಪಾಸ್ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.
ಹೆದ್ದಾರಿ ಯೋಜನೆ: ನಿತಿನ್ ಗಡ್ಕರಿ ಜತೆ ಮಾತುಕತೆ
ಇನ್ನೂ ಇಳಕಲ್ ಕಾರವಾರ ರಾಷ್ಟ್ರೀಯ ಹೆದ್ದಾರಿ ಮಾಡಲು ಈಗಾಗಲೇ ಕೇಂದ್ರ ಹೆದ್ದಾರಿ ಹಾಗೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದೇನೆ. ಅವರು ಆದ್ಯತೆ ಮೇಲೆ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿಗಳೂ ಕೂಡ ನಿತಿನ್ ಗಡ್ಕರಿ ಅವರೊಂದಿಗೆ ಮಾತನಾಡಿದ್ದಾರೆ.

ಹೊಸ ಪಟ್ಟಿಯಲ್ಲಿ ಸೇರಿಸುವುದು ವಿಳಂಬವಾಗುವ ಸಾಧ್ಯತೆ ಇರುವುದರಿಂದ ತ್ವರಿತಗತಿಯಲ್ಲಿ ಮೇಲ್ದರ್ಜೆಗೆ ಏರಿಸಲು ಬೇಕಾದ ಕ್ರಮ ಕೈಗೊಳ್ಳುವ ಪ್ರಯತ್ನ ನಡೆದಿದೆ.
ಕರ್ನಾಟಕದಲ್ಲಿ ಈಗಾಗಲೇ ಕೆಟ್ಟು ಹೋಗಿರುವ ರಾಜ್ಯ ಹೆದ್ದಾರಿಗಳನ್ನು ದುರಸ್ಥಿ ಮಾಡಲು ಕೆಎಸ್ ಎಸ್ ಡಿಪಿ ಅಡಿಯಲ್ಲಿ 20 ಕೋಟಿ ಹಾಗೂ ಬೇರೆ ಅನುದಾನದಲ್ಲಿ 5 ಕೋಟಿ ಮಂಜೂರು ಆಗಿದೆ. ಆದರೆ ಇಷ್ಟು ಹಣ ಸಾಕಾಗುವುದಿಲ್ಲ.ಬೇರೆ ಅನುದಾನ ಬಳಕೆ ಮಾಡಿ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ಗದಗ ಕೇಂದ್ರಿಯ ವಿದ್ಯಾಲಯ ಆರಂಭ ಯಾವಾಗ?
ಗದಗಿಗೆ ಕೇಂದ್ರಿಯ ವಿದ್ಯಾಲಯ ಮಂಜೂರಾಗಿದ್ದು, ನಾನು ಸಂಸದನಾದ ಮೇಲೆ 10 ಎಕರೆ ಮಂಜೂರಾಗಿದ್ದು ಮುಂದಿನ ವರ್ಷ ತಾತ್ಕಾಲಿಕ ಕಟ್ಟಡದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಇದರ ಜೊತೆಗೆ ಹಾವೇರಿ ಮತ್ತು ಗದಗ ರೈಲ್ವೆ ಯೋಜನೆಗಳ ಕುರಿತು ಮುಂದಿನ ತಿಂಗಳು ಗದಗ ರೈಲು ನಿಲ್ದಾಣ, ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕುರಿತು ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ.
ಗದಗ ಯಲವಿಗಿ ರೈಲ್ವೆ ಯೋಜನೆ 250 ಕೋಟಿ ರೂ.
ಗದಗ ಯಲವಿಗಿ ರೈಲ್ವೆ ಯೋಜನೆಗೆ ಕೇಂದ್ರ ಬಜೆಟ್ ನಲ್ಲಿ 250 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿದರೆ ಯೋಜನೆ ಜಾರಿಗೆ ಅನುಕೂಲವಾಗುತ್ತದೆ. ವರ್ಷದ ಆರಂಭದಲ್ಲಿ ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಬೇಕು. ಹೀಗೆ ಮಾಡಿದಲ್ಲಿ ಇದೇ ವರ್ಷಾಂತ್ಯದಲ್ಲಿ ಕೇಂದ್ರದ ಹಣ ಬಳಕೆ ಮಾಡಿಕೊಳ್ಳಲು ಸಹಾಯವಾಗುತ್ತದೆ. ಈ ಸಂಬಂಧತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಹಲವು ಅಭಿವೃದ್ಧಿ ಯೋಜನೆಗಲ ಬಗ್ಗೆ ಮಾಹಿತಿ ಕೊಟ್ಟರು.












Click it and Unblock the Notifications