Vikram Gowda: ಮೋಸ್ಟ್‌ವಾಂಟೆಡ್ ನಕ್ಸಲ್ ವಿಕ್ರಂಗೌಡ ಎನ್‌ಕೌಂಟರ್ ಬಗ್ಗೆ ಜಿ. ಪರಮೇಶ್ವರ್ ಸ್ಫೋಟಕ ಮಾಹಿತಿ!
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳ ಮೋಸ್ಟ್ ವಾಂಟೆಡ್ ಹಾಗೂ ನಕ್ಸಲ್ ನಾಯಕ ವಿಕ್ರಂಗೌಡ ಸೋಮವಾರ ನಕ್ಸಲ್ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದಾನೆ. ಇದೀಗ ವಿಕ್ರಂ ಗೌಡ ಎನ್‌ಕೌಂಟರ್ ಹಾಗೂ ಕೇಸ್‌ಗಳ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ನಕ್ಸಲ್ ವಿಕ್ರಂಗೌಡ ಅಪಾಯಕಾರಿ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದ. ಪೊಲೀಸರು ಶೂಟ್ ಮಾಡದೇ ಇದ್ದರೆ, ಅವನೇ ದಾಳಿ ನಡೆಸುತ್ತಿದ್ದ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.
ವಿಕ್ರಂಗೌಡಗಾಗಿ ದಕ್ಷಿಣ ಭಾರತದ ಕರ್ನಾಟಕ ಸೇರಿದಂತೆ ತಮಿಳುನಾಡು ಹಾಗೂ ಕೇರಳದ ಪೊಲೀಸರಿಗೆ ಬೇಕಾಗಿದ್ದ ಇತನಿಗಾಗಿ ಕಳೆದ 15 ವರ್ಷಗಳಿಂದಲೂ ತೀವ್ರ ಹುಡುಕಾಟ ನಡೆಸಲಾಗುತ್ತಿತ್ತು. ಸೋಮವಾರ ಆತನನ್ನು ನಕ್ಸಲ್ ನಿಗ್ರಹ ದಳ ಪತ್ತೆ ಮಾಡಿತ್ತು. ಈ ವೇಳೆ ನಕ್ಸಲ್ ನಿಗ್ರಹ ದಳ ಹಾಗೂ ನಕ್ಸಲರ ನಡುವೆ ತೀವ್ರ ಗುಂಡಿನ ದಾಳಿಯಾಗಿತ್ತು. ಕರ್ನಾಟಕದ ಉಡುಪಿ ಜಿಲ್ಲೆಯ ಹೆಬ್ರಿ ಠಾಣೆ ವ್ಯಾಪ್ತಿಯ ಕಬ್ಬಿನಾಲೆ ಅರಣ್ಯ ಪ್ರದೇಶದಲ್ಲಿ ಭಾರೀ ಕಾರ್ಯಾಚರಣೆ ನಡೆಸಲಾಗಿತ್ತು. ಈ ಕಾರ್ಯಾಚರಣೆಯಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ನೇತೃತ್ವದ ನಕ್ಸಲ್ ತಂಡ ಹಾಗೂ ನಕ್ಸಲ್ ನಿಗ್ರಹ ತಂಡದ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಎನ್ಕೌಂಟರ್ನಲ್ಲಿ ನಕ್ಸಲ್ ನಾಯಕ ವಿಕ್ರಂ ಗೌಡ ಸಾವನ್ನಪ್ಪಿದ್ದಾರೆ.

ಇದೀಗ ಈತನ ಎನ್‌ಕೌಂಟರ್‌ನ ಬಗ್ಗೆ ಜಿ. ಪರಮೇಶ್ವರ್ ಅವರು ಮಾತನಾಡಿದ್ದಾರೆ. ವಿಕ್ರಂಗೌಡ ಮೇಲೆ ಕೊಲೆ ಸೇರಿದಂತೆ 60ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಆತ ಆಟೋಮ್ಯಾಟಿಕ್ ಮಷಿನ್ ಗನ್ ಇಟ್ಟುಕೊಂಡಿದ್ದ. ಈ ಹಿಂದೆ ಶರಣಾಗಾತಿಗಾಗಿ ಪ್ರಯತ್ನಗಳು ನಡೆದಿದ್ದವು. ವಿಕ್ರಂ ಅವರ ಸಂಬಂಧಿಕರು ಸಹ ಶರಣಾಗುವಂತೆ ಆತನಿಗೆ ಹೇಳಿದ್ದರು. ಆದರೆ, ಶರಣಾಗತಿಗೆ ವಿಕ್ರಂಗೌಡ ಒಪ್ಪಿಕೊಂಡಿರಲಿಲ್ಲ ಎಂದು ಹೇಳಿದರು.
ಇನ್ನು ಕಾರ್ಕಳದಲ್ಲಿ ಎಎನ್‌ಎಫ್ ಹೆಡ್‌ಕ್ವಾಟರ್ಸ್ ಇದೆ. ನಕ್ಸಲ್ ಚಟುವಟಿಕೆಗಳ ಮೇಲೆ ನಿರಂತರವಾಗಿ ನಿಗಾ ಇರಿಸಲಾಗಿದೆ. ಕಳೆದ ವಾರ ನಕ್ಸಲ್ ಲತಾ ಎಂಬವರನ್ನು ಗುರುತಿಸಲಾಗಿತ್ತು. ಕೂಬಿಂಗ್ ಸಹ ನಡೆಸಲಾಗಿತ್ತು. ಅವರನ್ನು ಇದೇ ರೀತಿ ಬಿಟ್ಟುಕೊಂಡು, ಏನು ಮಾಡಿದರು ನಡೆಯುತ್ತದೆ ಎಂದು ಸಮ್ಮನಿರಲು ಇರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.

ಎನ್‌ಕೌಂಟರ್ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ವ್ಯತ್ಯಾಸವಿಲ್ಲ ಎಂಬ ಕೆಲವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಜಿ. ಪರಮೇಶ್ವರ್ ಅವರು, ನಕ್ಸಲ್ ವಿಚಾರದಲ್ಲಿ ಪಕ್ಷದ ಪ್ರಶ್ನೆ ಬರುವುದೇ ಇಲ್ಲ. ಜನರ ಸುರಕ್ಷತೆ ಮಾತ್ರ ಮುಖ್ಯವಾಗುತ್ತದೆ ಎಂದು ಹೇಳಿದರು.
ಪ್ಲಾನ್ ಮಾಡಿ ಎಎನ್‌ಎಫ್ ಕುಳಿತಿತ್ತು: ನಕ್ಸಲ್ ನಿಗ್ರಹ ಪಡೆಯು ಕಳೆದ ಹಲವು ದಿನಗಳಿಂದ ಈ ಕಾರ್ಯಾಚರಣೆಗೆ ಪ್ಲಾನ್ ಮಾಡಿಕೊಂಡಿತ್ತು ಎಂದು ಹೇಳಲಾಗುತ್ತಿದೆ. ವಿಕ್ರಂಗೌಡ ಹಾಗೂ ಆತನ ತಂಡದ ಸಂಚಲನದ ಬಗ್ಗೆ ನಕ್ಸಲ್ ನಿಗ್ರಹ ಪಡೆಯು ಕಣ್ಣಿಟ್ಟಿತ್ತು. ರೇಷನ್ ಪಡೆದುಕೊಳ್ಳಲು ಇವರು ಹೊರಗೆ ಬರುವ ಬಗ್ಗೆ ಖಚಿತ ಮಾಹಿತಿಯನ್ನು ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ. ಕಾರ್ಯಾಚರಣೆಯ ರಹಸ್ಯ ಮಾಹಿತಿಗಳನ್ನು ನಕ್ಸಲ್ ನಿಗ್ರಹ ಪಡೆ ಹಂಚಿಕೊಂಡಿಲ್ಲ.












Click it and Unblock the Notifications