ಆನಂದ್ ಸಿಂಗ್‌ಗೆ ಇನ್ನಷ್ಟು ದಿನ ಚಿಕಿತ್ಸೆ ಅಗತ್ಯ : ಪರಮೇಶ್ವರ
ಬೆಂಗಳೂರು, ಜನವರಿ 28 : 'ಆನಂದ್ ಸಿಂಗ್ ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿದೆ. ಇನ್ನಷ್ಟು ದಿನ ಅವರು ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯಬೇಕಿದೆ' ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಹೇಳಿದರು.
ಭಾನುವಾರ ರಾತ್ರಿ ಡಾ.ಜಿ.ಪರಮೇಶ್ವರ ಮತ್ತು ಸಚಿವ ಕೃಷ್ಣ ಬೈರೇಗೌಡ ಅವರು ಶೇಷಾದ್ರಿಪುರಂನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು.
ಜನವರಿ 19ರಂದು ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಅವರು ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದರು. ಜೆ.ಎನ್.ಗಣೇಶ್ ವಿರುದ್ಧ ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕೆಪಿಸಿಸಿ ಶಾಸಕರ ನಡುವಿನ ಗಲಾಟೆ ಕುರಿತು ವಿಚಾರಣೆ ನಡೆಸಲು ಸಮಿತಿಯನ್ನು ರಚನೆ ಮಾಡಿದೆ. ಡಾ.ಜಿ.ಪರಮೇಶ್ವರ ನೇತೃತ್ವದ ಸಮಿತಿಯಲ್ಲಿ ಕೃಷ್ಣ ಬೈರೇಗೌಡ ಮತ್ತು ಸಚಿವ ಕೆ.ಜೆ.ಜಾರ್ಜ್ ಸಹ ಇದ್ದಾರೆ.

ಕಣ್ಣಿನ ದೃಷ್ಟಿ ಇದೀಗ ಸ್ಪಷ್ಟವಾಗಿದೆ
ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು, 'ಆನಂದ್ ಸಿಂಗ್ ರವರ ಆರೋಗ್ಯ ವಿಚಾರಣೆಗೆ ಬಂದಿದ್ದೆ. ಅವರ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ.ಕಣ್ಣಿನ ದೃಷ್ಟಿ ಇದೀಗ ಸ್ಪಷ್ಟವಾಗಿದೆ ಕಾಣಿಸುತ್ತಿದೆ ಎಂದರು. ಮೈ-ಕೈಗೆ ಏಟು ಬಿದ್ದದ್ದರಿಂದ ನೋವು ಇನ್ನು ಇದೆ ಎಂದು ಹೇಳಿದರು' ಎಂದರು.

ವಿಚಾರಣೆ ಮಾಡುವುದು ಸರಿಯಲ್ಲ
'ಶಾಸಕ ಆನಂದ್ ಸಿಂಗ್ ಅವರಿಗೆ ಇನ್ನಷ್ಟು ದಿನದ ಚಿಕಿತ್ಸೆಯ ಅಗತ್ಯವಿದೆ. ನಾವು ಈಗ ಯಾವುದೇ ತನಿಖಾ ಸಮಿತಿ ಸದಸ್ಯರಾಗಿ ಬಂದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವಿಚಾರಣೆ ಮಾಡುವುದು ಸರಿಯಲ್ಲ. ಕೆ.ಜೆ.ಜಾರ್ಜ್ ಅವರು ಕೂಡಾ ಬರಬೇಕು, ಅವರು ಸಮಿತಿಯಲ್ಲಿದ್ದಾರೆ' ಎಂದು ಪರಮೇಶ್ವರ ಹೇಳಿದರು.

ಪೊಲೀಸರು ಹುಡುಕುತ್ತಿದ್ದಾರೆ
'ಶಾಸಕ ಆನಂದ್ ಸಿಂಗ್ ಅವರು ಗುಣಮುಖರಾದ ಬಳಿಕ ಅವರನ್ನು ವಿಚಾರಣೆ ಮಾಡುತ್ತೇವೆ. ಕಂಪ್ಲಿ ಶಾಸಕ ಗಣೇಶ್ ಅವರು ತಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಪೊಲೀಸರು ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅವರನ್ನು ಬಂಧಿಸುತ್ತಾರೆ' ಎಂದು ಪರಮೇಶ್ವರ ಹೇಳಿದರು.

ವಿಚಾರಣಾ ಸಮಿತಿ ರಚನೆ
ಬಿಡದಿಯ ಈಗಲ್ಟನ್ ರೆಸಾರ್ಟ್‌ನಲ್ಲಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದರು. ಈ ಘಟನೆ ಕುರಿತು ತನಿಖೆ ನಡೆಸಲು ಕಾಂಗ್ರೆಸ್ ವಿಚಾರಣಾ ಸಮಿತಿಯನ್ನು ರಚನೆ ಮಾಡಿದೆ. ಜೆ.ಎನ್.ಗಣೇಶ್ ಅವರನ್ನು ಪಕ್ಷದಿಂದ ಅಮಾನತು ಮಾಡಿದೆ.

ಮುಖ್ಯಮಂತ್ರಿಗಳ ಭೇಟಿ
ಶನಿವಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರ ಆರೋಗ್ಯವನ್ನು ವಿಚಾರಿಸಿದ್ದರು.












Click it and Unblock the Notifications