ಇನ್ಮುಂದೆ 23,000 ವಿದ್ಯಾರ್ಥಿಗಳಿಗೆ ಫ್ರೀ ಸ್ಕೂಲ್ ಬಸ್ ಸೇವೆ: ಯಾರಿಗೆಲ್ಲ ಸಿಗಲಿದೆ ಈ ಲಾಭ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ ಭರ್ಜರಿ ಸಿಹಿಸುದ್ದಿ ನೀಡಿದೆ. 2026-27ನೇ ಸಾಲಿನ ಸಮಗ್ರ ಶಿಕ್ಷಣ ಯೋಜನೆಯ ಅಡಿಯಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ವಿದ್ಯಾರ್ಥಿಗಳಿಗೆ ಉಚಿತ ಸಾರಿಗೆ ವ್ಯವಸ್ಥೆಯನ್ನ ಒದಗಿಸಲು ನಿರ್ಧರಿಸಲಾಗಿದ್ದು, ಈ ಕುರಿತಾದ ವಿಸ್ತೃತ ಮಾರ್ಗಸೂಚಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಈ ಹೊಸ ನಿಯಮಾಗಳ ಮೂಲಕ ರಾಜ್ಯದ ನೂರಾರು ಶಾಲೆಗಳ ಸಾವಿರಾರು ವಿದ್ಯಾರ್ಥಿಗಳು ಸುರಕ್ಷಿತವಾಗಿ ಹಾಗೂ ಉಚಿತವಾಗಿ ಶಾಲೆಗೆ ತಲುಪುವ ಅವಕಾಶವನ್ನ ಪಡೆಯಲಿದ್ದಾರೆ.

ದೂರದ ಊರುಗಳಿಂದ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಎದುರಾಗುವ ಸಾರಿಗೆ ಸಮಸ್ಯೆಯನ್ನ ನಿವಾರಿಸುವುದು ಹಾಗೂ ಶಾಲೆಯಿಂದ ಹೊರಗುಳಿಯುವ ಮಕ್ಕಳ ಪ್ರಮಾಣವನ್ನ ತಗ್ಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ.
ಕೆಪಿಎಸ್ ಶಾಲೆಗಳಿಗೆ ನೀಡುತ್ತಿರುವ ಈ ಉಚಿತ ಸಾರಿಗೆ ಸೌಲಭ್ಯವು ಶಿಕ್ಷಣ ವ್ಯವಸ್ಥೆಯಲ್ಲಿ ಹಾಗೂ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯಲ್ಲಿ ಮಹತ್ತರ ಬದಲಾವಣೆ ತರುವ ನಿರೀಕ್ಷೆಯಿದೆ.
ಸಮಗ್ರ ಶಿಕ್ಷಣ ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ನೆರವು
ರಾಜ್ಯಾದ್ಯಂತ ಒಟ್ಟು 309 ಕರ್ನಾಟಕ ಪಬ್ಲಿಕ್ ಶಾಲೆಗಳ ಸುಮಾರು 23,500 ವಿದ್ಯಾರ್ಥಿಗಳಿಗೆ ಈ ಉಚಿತ ಸಾರಿಗೆ ಯೋಜನೆಯ ನೇರ ಲಾಭ ದೊರೆಯಲಿದೆ. 1ನೇ ತರಗತಿಯಿಂದ ಹಿಡಿದು 12ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿಗಳನ್ನ ಈ ಯೋಜನೆಗೆ ಪರಿಗಣಿಸಲಾಗುತ್ತದೆ.
ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಮಾಸಿಕ 600 ರೂಪಾಯಿಗಳಂತೆ ಅನುದಾನವನ್ನ ಸರ್ಕಾರ ಮೀಸಲಿಟ್ಟಿದೆ. ವಿಶೇಷವೆಂದರೆ, ರಾಜ್ಯದಲ್ಲಿ ಈಗಾಗಲೇ ವಿದ್ಯಾರ್ಥಿನಿಯರಿಗೆ ಶಕ್ತಿ ಯೋಜನೆಯ ಉಚಿತ ಬಸ್ ಪಾಸ್ ಸೌಲಭ್ಯಗಳು ಲಭ್ಯವಿರುವುದರಿಂದ, ಉಚಿತ ಸಾರಿಗೆ ವ್ಯವಸ್ಥೆ ಹೊಂದಿಲ್ಲದ ಗಂಡು ಮಕ್ಕಳಿಗೆ ಈ ಯೋಜನೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.
ಕೇಂದ್ರ ಶಿಕ್ಷಣ ಸಚಿವಾಲಯದ ಯೋಜನಾ ಅನುಮೋದನಾ ಮಂಡಳಿಯು ಈ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ತೋರಿದೆ.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕವಾಗಿರಲಿದೆ. ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ (SDMC) ಜಂಟಿಯಾಗಿ ಅರ್ಹ ವಿದ್ಯಾರ್ಥಿಗಳನ್ನ ಆಯ್ಕೆ ಮಾಡಲಿದ್ದಾರೆ.
ಇದರಲ್ಲಿ ಕಿರಿಯ ವಯಸ್ಸಿನ ಮಕ್ಕಳು ಹಾಗೂ ವಿಶೇಷ ಚೇತನ (ವಿಕಲಚೇತನ) ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ವಿದ್ಯಾರ್ಥಿಯ ಮನೆ ಮತ್ತು ಶಾಲೆಯ ನಡುವಿನ ಅಂತರವನ್ನ ಆಧರಿಸಿ ಈ ಆಯ್ಕೆ ನಡೆಯಲಿದೆ. ಆಯ್ಕೆಯ ಬಳಿಕ ಎಸ್‌ಡಿಎಂಸಿ ಸದಸ್ಯರು ಪೋಷಕರೊಂದಿಗೆ ಸಮಾಲೋಚನೆ ನಡೆಸಿ, ಸ್ಥಳೀಯವಾಗಿ ಲಭ್ಯವಿರುವ ವಾಹನಗಳನ್ನ ಬಾಡಿಗೆಗೆ ಪಡೆಯುವುದು ಅಥವಾ ಹಂಚಿಕೆ ಆಧಾರಿತ ವಾಹನ ವ್ಯವಸ್ಥೆಯನ್ನ ಕಲ್ಪಿಸಲು ಮಾರ್ಗಸೂಚಿಯಲ್ಲಿ ನಿರ್ದೇಶನ ನೀಡಲಾಗಿದೆ.
ವಿದ್ಯಾರ್ಥಿಗಳು ಮನೆಯಿಂದ ಶಾಲೆಗೆ ಹಾಗೂ ಶಾಲೆಯಿಂದ ಮನೆಗೆ ಸುರಕ್ಷಿತವಾಗಿ ತಲುಪುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನ ಸಮಿತಿಗೆ ವಹಿಸಲಾಗಿದೆ.
ಉಚಿತ ಸೇವೆಗೆ ನಿಗದಿಪಡಿಸಲಾದ ಅಂತರದ ಮಿತಿ
ಈ ಸೌಲಭ್ಯವನ್ನು ಪಡೆಯಲು ವಿದ್ಯಾರ್ಥಿಗಳ ತರಗತಿವಾರು ನಿರ್ದಿಷ್ಟ ಅಂತರದ ಮಿತಿಯನ್ನ ನಿಗದಿಪಡಿಸಲಾಗಿದೆ. ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿಗಳಿಗೆ ಈ ಕೆಳಗಿನ ಅಂತರದ ಆಧಾರದ ಮೇಲೆ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ:
* 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ - 1 ಕಿ.ಮೀ.
* 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ - 3 ಕಿ.ಮೀ.
* 9 ಮತ್ತು 10ನೇ ತರಗತಿ (ಪ್ರೌಢಶಾಲೆ) ವಿದ್ಯಾರ್ಥಿಗಳಿಗೆ - 5 ಕಿ.ಮೀ.
* 11 ಮತ್ತು 12ನೇ ತರಗತಿ (ಪಿಯುಸಿ) ವಿದ್ಯಾರ್ಥಿಗಳಿಗೆ - 7 ಕಿ.ಮೀ. ದೂರದವರೆಗೆ ಉಚಿತ ಸಾರಿಗೆ ಸೌಲಭ್ಯ ಲಭ್ಯವಿರಲಿದೆ.
ಉಚಿತ ಬಸ್ ಸೇವೆ ನಿಯಮಗಳೇನು?
ವಿದ್ಯಾರ್ಥಿಗಳ ಸುರಕ್ಷತೆಗೆ ಶಿಕ್ಷಣ ಇಲಾಖೆ ಆದ್ಯತೆ ನೀಡಿದ್ದು, ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುತ್ತವೆ. ಪ್ರಾಥಮಿಕ ಶಾಲಾ ಮಕ್ಕಳನ್ನ ಕರೆದೊಯ್ಯುವ ವಾಹನದಲ್ಲಿ ಕಡ್ಡಾಯವಾಗಿ ತರಬೇತಿ ಪಡೆದ ಸಹಾಯಕ ಸಿಬ್ಬಂದಿ ಇರಬೇಕು. ಯಾವುದೇ ಕಾರಣಕ್ಕೂ ವಾಹನದ ಅನುಮೋದಿತ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳನ್ನ ಹತ್ತಿಸಿಕೊಳ್ಳುವಂತಿಲ್ಲ.
ಪ್ರತಿಯೊಂದು ಶಾಲಾ ವಾಹನದಲ್ಲೂ ಪ್ರಥಮ ಚಿಕಿತ್ಸಾ ಪೆಟ್ಟಿಗೆ , ಅಗ್ನಿಶಮನ ಸಾಧನ, ಹಾಗೂ ತುರ್ತು ನಿರ್ಗಮನ ದ್ವಾರ ಇರುವುದು ಕಡ್ಡಾಯವಾಗಿದೆ. ಚಾಲಕರು ಕಡ್ಡಾಯವಾಗಿ ವೇಗಮಿತಿ ಹಾಗೂ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಜೊತೆಗೆ ಚಾಲಕರಿಗೆ ಸಂಚಾರಿ ನಿಯಮಗಳ ಕುರಿತು ಜಾಗೃತಿ ಮೂಡಿಸುವುದು ಕಡ್ಡಾಯ.
ವಾಹನಗಳ ಸುರಕ್ಷತೆ ಮತ್ತು ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು, ನೇಮಕಗೊಂಡ ನೋಡಲ್ ಅಧಿಕಾರಿಗಳು ಪ್ರತಿ 15 ದಿನಗಳಿಗೊಮ್ಮೆ ವಾಹನಗಳ ತಪಾಸಣೆ ಮತ್ತು ಮೇಲ್ವಿಚಾರಣೆ ನಡೆಸಬೇಕು ಎಂದು ಇಲಾಖೆಯು ಕಟ್ಟುನಿಟ್ಟಾಗಿ ಸೂಚಿಸಿದೆ.


Click it and Unblock the Notifications
