Kukke Temple: ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಅಧ್ಯಕ್ಷರಾಗಿ ರೌಡಿಶೀಟರ್ ಆಯ್ಕೆ ಆರೋಪ: ಕಾಂಗ್ರೆಸ್ ಸ್ಪಷ್ಟನೆ ಏನು?
ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಮಾಜಿ ರೌಡಿಶೀಟರ್ ಹರೀಶ್ ಇಂಜಾಡಿ ಆಯ್ಕೆಯಾಗಿರುವುದು ಭಾರಿ ವಿರೋಧಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಈ ರೌಡಿ ಶೀಟರ್‌ಗೆ ಪಟ್ಟ ನೀಡಿದೆ ಎಂದು ಬಿಜೆಪಿ ಆರೋಪ ಮಾಡಿದೆ. ಕಾಂಗ್ರೆಸ್ ಕಾರ್ಯಕರ್ತ ಹರೀಶ್ ಇಂಜಾಡಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.
ಸಚಿವರಾದ ದಿನೇಶ್ ಗುಂಡೂರಾವ್ ಅವರ ಶಿಫಾರಿಸಿನ ಮೇರೆಗೆ ಮಾಜಿ ರೌಡಿ ಶೀಟರ್ ಹರೀಶ್ ಇಂಜಾಡಿ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೂಡ ಗಂಭೀರ ಆರೋಪ ಮಾಡಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಗೆ ಅನುಭವಿಗಳನ್ನು, ಆಡಳಿತಾತ್ಮಕ ಅನುಭವ ಇರುವವರನ್ನು, ಸಾತ್ವಿಕರನ್ನು ನೇಮಿಸಬೇಕೇ ಹೊರತು, ಕ್ರಿಮಿನಲ್ ಹಿನ್ನೆಲೆ ಇರುವವರನ್ನಲ್ಲ. ಇವರಿಂದ ದೇವಸ್ಥಾನದ ಅಭಿವೃದ್ಧಿಯಾಗಲಿ, ಭಕ್ತಾದಿಗಳಿಗೆ ಸೌಲಭ್ಯವನ್ನಾಗಲಿ, ಸುಧಾರಣೆಗಳನ್ನು ನಿರೀಕ್ಷೆ ಮಾಡುವುದು ಅಸಾಧ್ಯ. ಇಂಜಾಡಿ ಅವರ ನೇಮಕಾತಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದು ಸೂಕ್ತರನ್ನು ನೇಮಿಸಲಿ ಎಂದು ಆಗ್ರಹಿಸಿದೆ.

ಸರ್ಕಾರ ಹಸ್ತಕ್ಷೇಪವಿಲ್ಲ: ಕಾಂಗ್ರೆಸ್
ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷರು ಯಾರಾಗಬೇಕು? ಎನ್ನುವುದು ಅಲ್ಲಿನ ಸದಸ್ಯರ ಆಯ್ಕೆಗೆ ಬಿಟ್ಟಿದ್ದು, ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಲು ಹೇಗೆ ಸಾಧ್ಯ? ಎಂದು ರಾಜ್ಯ ಕಾಂಗ್ರೆಸ್ ಸ್ಪಷ್ಟನೆ ನೀಡಿದೆ. ಇಂಥದ್ದೊಂದು ಸಾಮಾನ್ಯ ಜ್ಞಾನ ಇಲ್ಲದ ಬಿಜೆಪಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪ ಮಾಡಿಕೊಂಡು ಜನರ ದಾರಿ ತಪ್ಪಿಸಲು ಹೊರಟಿದೆ ಎಂದು ದೂರಿದೆ.
ಪಾರ್ಟಿ ವಿಥ್ ಎ ಡಿಫರೆನ್ಸ್ ಎಂದು ಹೇಳಿಕೊಳ್ಳುವ ಬಿಜೆಪಿಯವರು ತಮ್ಮ ಪಕ್ಷದ "ರೌಡಿ ಮೋರ್ಚಾ" ಘಟಕದ ಮೂಲಕ ನಟೋರಿಯಸ್ ರೌಡಿ ಶೀಟರ್ ಸೈಲೆಂಟ್ ಸುನೀಲ, ವೈಯಾಲಿಕಾವಲ್ ರೌಡಿ ಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಫೈಟರ್ ರವಿ, ಮಂಗಳೂರು ರೌಡಿಶೀಟರ್ ಸುಹಾಸ್ ಶೆಟ್ಟಿ, ಕಲಬುರಗಿಯ ರೌಡಿ ಶೀಟರ್ ಮಣಿಕಂಠ ರಾಥೋಡ್, ಮೈಸೂರಿನ ಕಾರ್ತಿಕ್, ಆನೇಕಲ್ ಪುರಸಭೆಗೆ ರೌಡಿ ಶೀಟರ್ ಮಂಜುನಾಥ್ ಎಂಬಾತನ ನಾಮನಿರ್ದೇಶನ ಸೇರಿದಂತೆ ರಾಜ್ಯದ ಮೂಲೆ ಮೂಲೆಯಲ್ಲಿ ಇಂಥವರಿಗೆ ಬೆನ್ನೆಲುಬಾಗಿ ನಿಂತು ಪೋಷಿಸಿ, ಬೆಳೆಸಿ ತಮ್ಮ ಬೆಳೆ ಬೇಯಿಸಿಕೊಳ್ಳುವ ಇವರು, ಪ್ರಜಾಸತ್ತಾತ್ಮಕ ಮಾದರಿಯಲ್ಲಿ ಚುನಾವಣೆ ಮೂಲಕ ಆಯ್ಕೆಯಾದ ವಿಚಾರದಲ್ಲಿ ನಮ್ಮ ಸರ್ಕಾರದ ಮೇಲೆ ಗೂಬೆ ಕೂರಿಸಲು ಹೊರಟಿರುವುದು ವಿಪರ್ಯಾಸ ಎಂದು ತಿರುಗೇಟು ನೀಡಿದೆ.

ಬಿಲ್ಕಿಸ್ ಬಾನು ಅತ್ಯಾಚಾರಿಗಳನ್ನು ಹಾರ, ತುರಾಯಿ ಹಾಕಿ ಸ್ವಾಗತಿಸಿದವರು ನೀವೇ ಅಲ್ಲವೇ? ಇಡೀ ದೇಶದಲ್ಲಿ ಬಿಜೆಪಿ ಶಾಸಕರು, ಸಂಸದರು ನಡೆಸಿರುವ ಅತ್ಯಾಚಾರ, ಕೊಲೆ, ದೌರ್ಜನ್ಯ ಮುಂತಾದ ಪ್ರಕರಣಗಳ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಮಹಾಗ್ರಂಥವೇ ಆಗಬಹುದೇನೋ ಎಂದಿದೆ. ಮೊದಲು ನೀವು ಕೊಲೆಗಡುಕರು, ಡಕಾಯಿತರು, ಸ್ತ್ರೀ ಪೀಡಕರು, ಕಳ್ಳಕದೀಮರಿಂದ ದೂರವಿರಿ. ನಂತರ ಊರಿಗೆ ಉಪದೇಶ ಕೊಡುವಿರಂತೆ ಎಂದು ಟಕ್ಕರ್ ನೀಡಿದೆ.
ಹರೀಶ್ ಇಂಜಾಡಿ ಈ ಹಿಂದೆ ನಕಲಿ ಚೆಕ್ ನೀಡಿ, ಹಣ್ಣು-ಕಾಯಿ ಟೆಂಡರ್ ಪಡೆದು ದೇಗುಲದ ಆಡಳಿತ ಮಂಡಳಿಗೆ ವಂಚನೆ ಮಾಡಿದ್ದರು ಎಂಬ ಆರೋಪವಿದೆ. ಈ ಕೇಸ್‌ನಲ್ಲಿ ಬಂಧನಕ್ಕೂ ಒಳಗಾಗಿದ್ದರು. ಅಲ್ಲದೆ ಮರಗಳ ಕಳ್ಳಸಾಗಾಣಿಕೆ, ಮರಳು ಮಾಫಿಯಾದಲ್ಲೂ ಈತನ ಹೆಸರಿತ್ತು. ಹಾಗಾಗಿ ಇಂತಹ ವ್ಯಕ್ತಿಯನ್ನು ಪವಿತ್ರ ದೇವಸ್ಥಾನದ ಆಡಳಿತ ಮಂಡಳಿಗೆ ನೇಮಿಸಬಾರದು ಎಂದು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಪತ್ರದ ಮೂಲಕ ಮನವಿಯೂ ಮಾಡಲಾಗಿತ್ತು. ಆದರೂ ವಿರೋಧದ ನಡುವೆ ಅಧ್ಯಕ್ಷರ ನೇಮಕ ನಡೆದಿದೆ.
ವಿರೋಧದ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಅವರ ಶಿಫಾರಸ್ಸಿನ ಮೇಲೆ ಮುಜರಾಯಿ ಇಲಾಖೆ ಕುಕ್ಕೆ ಸುಬ್ರಹ್ಮಣ್ಯ ಆಡಳಿತ ಮಂಡಳಿಗೆ ಹರೀಶ್ ಇಂಜಾಡಿ ಅವರನ್ನು ನೇಮಿಸಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಈಗ ರೌಡಿಶೀಟರ್ ವ್ಯಕ್ತಿಯನ್ನು ಪವಿತ್ರ ದೇವಸ್ಥಾನದ ಆಡಳಿತ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಕೂಡಲೇ ಹರೀಶ್ ಇಂಜಾಡಿಯನ್ನ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು ಎಂದು ಅಭಿಯಾನ ಶುರುವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ರೌಡಿಶೀಟರ್‌ನನ್ನು ನೇಮಕ ಮಾಡಲು ನಾನು ಯಾವುದೇ ಶಿಫಾರಸು ಪತ್ರ ಕೊಟ್ಟಿಲ್ಲ ಎಂದು ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟನೆ ನೀಡಿದ್ದಾರೆ. ಚುನಾವಣೆ ಮಾಡಿಕೊಂಡು ಅಧ್ಯಕ್ಷರ ಆಯ್ಕೆ ಮಾಡಿಕೊಂಡಿದ್ದಾರೆ. ನಾನು ಯಾವುದೇ ಶಿಫಾರಸು ಪತ್ರ ಕೊಟ್ಟಿಲ್ಲ, ಆಯ್ಕೆ ಆಗಿರುವ ಬಗ್ಗೆ ಪರಿಶೀಲಿಸುತ್ತೇನೆ. ಸ್ಥಳೀಯ ಮುಖಂಡರ ಅಭಿಪ್ರಾಯದ ಮೇರೆಗೆ ಆಯ್ಕೆಯಾಗಿದೆ ಎಂದಿದ್ದಾರೆ. ಈಗ ಆಗಿರುವುದು ಒಳ್ಳೆಯ ಬೆಳವಣಿಗೆಯಲ್ಲ, ಸದ್ಯ ಈಗ ಅಧ್ಯಕ್ಷರ ಬದಲಾವಣೆಯಾಗುವುದು ಕಷ್ಟ. ಒಂದು ಬಾರಿ ಚುನಾವಣೆ ಆದ ಮೇಲೆ, ಆ ಸ್ಥಾನದಿಂದ ಕೆಳಗಿಳಿಸಲು ಆಗಲ್ಲ. ಆದರೂ ಈ ಬಗ್ಗೆ ಮುಜರಾಯಿ ಇಲಾಖೆ ಸಚಿವರ ಜೊತೆ ಮಾತನಾಡಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಸಚಿವ ಗುಂಡೂರಾವ್ ಶಿಫಾರಸ್ಸಿನ ಮೇಲೆಯೇ ಮಾಜಿ ರೌಡಿಶೀಟರ್ಗೆ ಕುಕ್ಕೆ ದೇವಸ್ಥಾನದ ಅಧ್ಯಕ್ಷ ಪಟ್ಟ ನೀಡಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಕೂಡ ಆರೋಪಿಸಿದ್ದಾರೆ. ಗ್ರಾಮ ಪಂಚಾಯಿತಿ ಸದಸ್ಯರೂ ಆಗಿರುವ ಹರೀಶ್ ಇಂಜಾಡಿ ಅವರ ಮೇಲೆ ಅನೇಕ ಆರೋಪಗಳಿದ್ದು, ನಕಲಿ ಚೆಕ್ ನೀಡಿ ಹಣ್ಣುಕಾಯಿ ಟೆಂಡರ್ ಮಾಡಿ ದೇಗುಲ ಆಡಳಿತ ಮಂಡಳಿಗೆ ವಂಚನೆ ಮಾಡಿದ್ದರು ಎನ್ನುವ ಆರೋಪವೂ ಇದೆ. ಇದೇ ಕೇಸ್‌ನಲ್ಲಿ ಹರೀಶ್ ಬಂಧನವೂ ಆಗಿತ್ತು.
ಹರೀಶ್ ಇಂಜಾಡಿ ಅವರ ನೇಮಕದ ಬೆನ್ನಲ್ಲೇ ಬಿಜೆಪಿ ಕೂಡ ಪ್ರಬಲ ವಿರೋಧದ ಕೂಗು ಎತ್ತಿದೆ. ಇತ್ತೀಚೆಗೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯಾದಾಗ ಮಂಗಳೂರಿಗೆ ಭೇಟಿ ನೀಡಿದ್ದ ಗೃಹಸಚಿವ ಪರಮೇಶ್ವರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ರೌಡಿಶೀಟರ್ ಮನೆಗೆ ಭೇಟಿ ನೀಡುವುದಿಲ್ಲ ಎಂದು ಹೇಳಿದ್ದರು. ಈಗ ರೌಡಿಶೀಟರ್ ಕೈಗೆ ಕುಕ್ಕೆ ದೇವಸ್ಥಾನದ ಆಡಳಿತ ಇಡುತ್ತಿದ್ದೀರಲ್ಲ ಎಂದು ಪ್ರಶ್ನೆ ಎತ್ತಿದ್ದಾರೆ.












Click it and Unblock the Notifications