ರಾಜ್ಯಸಭಾ ಚುನಾವಣೆ: ಮಾಜಿ ಪ್ರಧಾನಿ ದೇವೇಗೌಡ ಇವತ್ತು ನಾಮಪತ್ರ ಸಲ್ಲಿಕೆ
ಬೆಂಗಳೂರು, ಜೂ. 09: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ಮತ್ತೊಮ್ಮೆ ರಾಜಕೀಯ ಅದೃಷ್ಟ ಒಲಿದು ಬಂದಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ತನ್ನ 3ನೇ ಹಾಗೂ ಕಾಂಗ್ರೆಸ್ ತನ್ನ 2ನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಇದ್ದುದರಿಂದ ರಾಜ್ಯಸಭಾ ಚುನಾವಣೆಗೆ 4ನೇ ಅಭ್ಯರ್ಥಿಯಾಗಿ ಜೆಡಿಎಸ್ ಪಕ್ಷದಿಂದ ಎಚ್.ಡಿ. ದವೇಗೌಡರ ಅವರು ನಾಮಪತ್ರ ಸಲ್ಲಿಸಲಿದ್ದಾರೆ.
ಇವತ್ತು ಮಧ್ಯಾಹ್ನ 12 ಗಂಟೆಯ ಬಳಿಕ ದೇವೇಗೌಡ ಅವರು ರಾಜ್ಯಸಭಾ ಚುನಾವಣಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಜೆಡಿಎಸ್ ಪಕ್ಷದ ಮೂಲಗಳು ತಿಳಿಸಿವೆ. ಕೊನೆಯ ಕ್ಷಣದಲ್ಲಿ ಬಿಜೆಪಿ ಹೈಕಮಾಂಡ್ ಅನಿರೀಕ್ಷಿತವಾಗಿ ಪಕ್ಷದ ಇಬ್ಬರು ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟಿದೆ. ರಾಜ್ಯಸಭಾ ಚುನಾವಣೆಯಲ್ಲಿ ಗೆಲವು ಸಾಧಿಸಲು ಕನಿಷ್ಠ 45 ಮತಗಳ ಅಗತ್ಯವಿದೆ.
ಮೂರನೇ ಅಭ್ಯರ್ಥಿ ಕಣಕ್ಕಿಳಿಸಿದರೆ ಬಿಜೆಪಿಯ ಮತಗಳೆ ಕ್ರಾಸ್ ವೋಟಿಂಗ್ ಆಗುವ ಭಯ ಹೈಕಮಾಂಡ್‌ಗೆ ಕಾಡಿದೆ. ಜೊತೆಗೆ ಕಾಂಗ್ರೆಸ್ ಪಕ್ಷದಿಂದ ಖರ್ಗೆ ಅವರೊಂದಿಗೆ ಮತ್ತೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅಲ್ಲಿಯೂ ಕ್ರಾಸ್ ವೋಟಿಂಗ್ ಆಗುವ ಸಾಧ್ಯತೆಗಳಿದ್ದವು.

ಹೀಗಾಗಿ ಕಾಂಗ್ರೆಸ್ ತನ್ನ ಅಭ್ಯರ್ಥಿಯ ಗೆಲವಿನ ಬಳಿಕ ಉಳಿಯುವ ಸುಮಾರು 20ಕ್ಕು ಹೆಚ್ಚು ಮತಗಳನ್ನು ದೇವೇಗೌಡರಿಗೆ ಕೊಡುವ ಬಗ್ಗೆ ಚರ್ಚೆ ನಡೆಸಿತ್ತು. ಅದೇ ಸಂದರ್ಭದಲ್ಲಿ ಬಿಜೆಪಿಯು ಹೆಚ್ಚುವರಿ ಮತಗಳನ್ನು ತನ್ನ ಇಬ್ಬರು ಅಧಿಕೃತ ಅಭ್ಯರ್ಥಿಗಳಿಗೆ ಹಂಚಿಕೆ ಮಾಡಲು ತೀರ್ಮಾನ ಮಾಡಿತ್ತು. ಹೀಗಾಗಿ ನಾಲ್ಕನೇ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಅದೃಷ್ಟ ದೇವೇಗೌಡರಿಗೆ ಒಲಿದಿದೆ.












Click it and Unblock the Notifications