ಅಬ್ದುಲ್ ಕಲಾಂ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದಾಗ ನಡೆದ ಘಟನೆ
ಬೆಂಗಳೂರು, ಜುಲೈ 28: ಮಕ್ಕಳೇ ಕನಸು ಕಾಣಿ, ಕನಸನ್ನು ಸಾಕಾರಗೊಳಿಸುವಲ್ಲಿ ಮುನ್ನುಗ್ಗಿ ಎಂದು ವಿದ್ಯಾರ್ಥಿ ಸಮುದಾಯಕ್ಕೆ ಉತ್ತೇಜನ ನೀಡಿದ್ದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಈಗ ನಮ್ಮೊಂದಿಗಿಲ್ಲ.
ಕಲಾಂ ನಿಧನಕ್ಕೆ ತೀವ್ರ ನೋವು ವ್ಯಕ್ತ ಪಡಿಸಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಕಲಾಂ ಜೊತೆಗಿನ ತನ್ನ ಒಡನಾಟವನ್ನು ವಿಷಾದದೊಂದಿಗೆ ಮೆಲುಕು ಹಾಕಿಕೊಂಡಿದ್ದಾರೆ.
ಧರ್ಮಸ್ಥಳಕ್ಕೆ ಕಲಾಂ ಅವರು ಮೂರು ಬಾರಿ ಭೇಟಿ ನೀಡಿದ್ದರು. ಪ್ರತೀ ಬಾರಿ ಕ್ಷೇತ್ರಕ್ಕೆ ಬಂದಾಗಲೂ ವಿದ್ಯಾರ್ಥಿ ಸಮುದಾಯಕ್ಕೆ ಹೊಸ ಹೊಸ ಪಾಠವನ್ನು ಬೋಧಿಸುತ್ತಿದ್ದರು ಎಂದು ಹೆಗ್ಗಡೆಯವರು ಹೇಳಿದ್ದಾರೆ.
ಒಂದು ಬಾರಿ ಅಂಚೆ ಚೀಟಿಯ ಕುರಿತಾಗಿ ಸಣ್ಣ ಮಕ್ಕಳ ಸ್ಪರ್ಥೆಯನ್ನು ಕ್ಷೇತ್ರದಲ್ಲಿ ಆಯೋಜಿಸಿದ್ದೆವು, ಅದಕ್ಕೆ ಕಲಾಂ ಅವರನ್ನು ಆಹ್ವಾನಿಸಿದ್ದೆವು. ಇಂತಹ ಸಣ್ಣ ಕಾರ್ಯಕ್ರಮಕ್ಕೆ ಕಲಾಂ ಬರುವುದಿಲ್ಲ ಎನ್ನುವ ನಮ್ಮ ಗ್ರಹಿಕೆ ತಪ್ಪಾಗಿತ್ತು. (ಅಬ್ದುಲ್ ಕಲಾಂ ನಿಧನ)

ಮಕ್ಕಳು ಭಾಗವಹಿಸುವ ಕಾರ್ಯಕ್ರಮವೆಂದು ಕಲಾಂ ಧರ್ಮಸ್ಥಳಕ್ಕೆ ಭೇಟಿ ನೀಡಿದರು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಪ್ರತೀ ಮಕ್ಕಳು ಅಂಚೆಚೀಟಿಯ ಬಗೆಗಿನ ಬರೆದ ಟಿಪ್ಪಣಿಯನ್ನು ವೀಕ್ಷಿಸಿದರು. [ಸ್ಫೂರ್ತಿ ತುಂಬುವ ಡಾ.ಕಲಾಂ ಸ್ಫೂರ್ತಿ ಹೇಳಿಕೆಗಳು]
ಈ ಕಾರ್ಯಕ್ರಮ ನಿಗದಿತ ಸಮಯಕ್ಕಿಂತ ಒಂದುವರೆ ಗಂಟೆ ಮುಂಚಿತವಾಗಿ ಮುಕ್ತಾಯಗೊಂಡಿತು. ಮಧ್ಯಾಹ್ನ ಎರಡು ಗಂಟೆಗೆ ನನ್ನ ವಿಮಾನವಿರುವುದು.
ಇನ್ನೂ ಒಂದೂವರೆ ಗಂಟೆಯ ಕಾಲಾವಕಾಶವಿದೆ. ಈ ಸಮಯವನ್ನು ನಾನು ಹಾಳು ಮಾಡಲು ಇಷ್ಟ ಪಡುವುದಿಲ್ಲ ಎಂದು ಕಲಾಂ ಹೇಳಿದ್ದನ್ನು ಹೆಗ್ಗಡೆ ಸ್ಮರಿಸಿಕೊಂಡಿದ್ದಾರೆ.
ಒಂದೂವರೆ ಗಂಟೆಯನ್ನು ಸಮಯವನ್ನು ವಿಮಾನ ನಿಲ್ದಾಣದಲ್ಲಿ ಸುಮ್ಮನೆ ಕೂತು ಕಾಲಹರಣ ಮಾಡಲು ನಾನು ಇಷ್ಟಪಡುವುದಿಲ್ಲ.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತೇನೆ, ಏನಾದರೂ ಕಾರ್ಯಕ್ರಮ ತುರ್ತಾಗಿ ಆಯೋಜಿಸಿ ಎಂದು ನಮಗೆ ಕಲಾಂ ಮನವಿ ಮಾಡಿದರು ಎಂದು ಹೆಗ್ಗಡೆಯವರು ಹೇಳಿದ್ದಾರೆ.
ಕಲಾಂ ಮನವಿಯ ಮೇರೆಗೆ, ಕೂಡಲೇ ನಾವು ಮಂಗಳೂರಿನ ಕಾನೂನು ಕಾಲೇಜಿಗೆ ದೂರವಾಣಿ ಮೂಲಕ ಮಾತನಾಡಿ ತುರಾತುರಿಯಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದೆವು. ಅಲ್ಲಿನ ವಿದ್ಯಾರ್ಥಿಗಳ ಜೊತೆ ಒಂದು ಗಂಟೆಗೂ ಹೆಚ್ಚಿನ ಸಮಯ ಕಲಾಂ ಉಪನ್ಯಾಸ ಮಾಡಿದರು.
ಸಮಯವನ್ನು ಹಾಳು ಮಾಡದ, ವಿದ್ಯಾರ್ಥಿಗಳಲ್ಲಿ ದೇಶದ ಭವಿಷ್ಯ ಕಾಣುವ, ದೇಶ ಕಂಡ ಮಹಾನ್ ಪುರುಷ ಅಬ್ದುಲ್ ಕಲಾಂ ನಿಧನಕ್ಕೆ ಕ್ಷೇತ್ರದ ಮತ್ತು ಭಕ್ತರ ಪರವಾಗಿ ಸಂತಾಪ ಸೂಚಿಸುತ್ತೇನೆಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಕಲಾಂ ನಿಧನಕ್ಕೆ ಶ್ರದ್ದಾಂಜಲಿ ಅರ್ಪಿಸಿದ್ದಾರೆ.












Click it and Unblock the Notifications