ನಿಖಿಲ್ ಸೋಲಿನ ಬಗ್ಗೆ ಸುಮಲತಾ ಅಂಬರೀಶ್ ಶಾಕಿಂಗ್ ಹೇಳಿಕೆ
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರು ಸೋಲು ಕಂಡಿದ್ದಾರೆ. ಈ ಹಿಂದೆ ನಿಖಿಲ್ ಮಂಡ್ಯದಿಂದ ಲೋಕಸಭೆಗೆ ಸುಮಲತಾ ಅಂಬರೀಶ್ ಎದುರು ಸ್ಪರ್ಧಿಸಿ ಸೋತಿದ್ದರು. ಇನ್ನು ನಿನ್ನೆಯ ನಿಖಿಲ್ ಸೋಲಿನ ಬಗ್ಗೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.
ಸಾಮಾನ್ಯವಾಗಿ ಉಪಚುನಾವಣೆ ಬಂದಾಗ ಆಡಳಿತ ಪಕ್ಷ ಗೆಲ್ಲುವುದು ಸಹಜ. ಇದನ್ನು ನಾವು ಹಿಂದಿನಿಂದಲೂ ನೋಡಿದ್ದೇವೆ. ಎಲ್ಲ ಪಕ್ಷಗಳು ಗೆಲ್ಲುವ ಉದ್ದೇಶದಲ್ಲೇ ಇರುತ್ತವೆ. ಇನ್ನು ನಿಖಿಲ್ ಸೋಲಿನ ಬಗ್ಗೆ ನಾನೇನು ಪ್ರತಿಕ್ರಿಯೆ ಕೊಡಲು ಬಯಸುವುದಿಲ್ಲ. ನಿಖಿಲ್ ಇನ್ನೂ ಯುವಕ, ಮುಂದೆ ಒಳ್ಳೆಯ ಭವಿಷ್ಯವಿದೆ ಎಂದು ಹೇಳಿದ್ದಾರೆ.

ಪತಿ ಅಂಬರೀಶ್ ಪುಣ್ಯಸ್ಮರಣೆ ಇಂದು: ಇಂದು ಪತಿ ಅಂಬರೀಶ್ ಅವರ ಪುಣ್ಯಸ್ಮರಣೆ ಹಿನ್ನೆಲೆ ಅವರ ಸಮಾಧಿಗೆ ಬಂದು ಸುಮಲತಾ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇನ್ನು ಭಾವುಕ ಪೋಸ್ಟ್ ಕೂಡ ಅವರು ಹಂಚಿಕೊಂಡಿದ್ದು, ನಿಮ್ಮ ಪ್ರೀತಿ, ನಿಮ್ಮ ಇರುವಿಕೆ ಶಾಶ್ವತ. ಸದಾ ಜನರ ಮಧ್ಯೆ ಇದ್ದು ಸ್ಪಂದನೀಯ ವ್ಯಕ್ತಿತ್ವದೊಂದಿಗೆ ನಮ್ಮೊಂದಿಗಿದ್ದ ಡಾ. ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ, ಪ್ರೀತಿ, ಭಕ್ತಿಪೂರ್ವಕವಾಗಿ ಸ್ಮರಿಸುತ್ತಿದ್ದೇನೆ ಎಂದಿದ್ದಾರೆ.
ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು, ಅವರು ಕಲಿಸಿದ ಜೀವನ ಪಾಠಗಳು ಸದಾ ನಮ್ಮನ್ನು ಕಾಯಲಿವೆ, ಅವರಿಗೆ ಜನಮಾನಸದಲ್ಲಿ ದೊರಕುತ್ತಿರುವ ಅಭಿಮಾನ ನಮ್ಮ ಕುಟುಂಬಕ್ಕೆ ನಿರಂತರ ಆಶೀರ್ವಾದ. ಇದಕ್ಕೆ ನಾವೆಲ್ಲಾ ಚಿರಋಣಿ ಎಂದು ಸುಮಲತಾ ಬರೆದುಕೊಂಡಿದ್ದಾರೆ.

ಇನ್ನು ಅಂಬರೀಷ್ ಅವರಿಗೆ ರಾಜಕೀಯ ಗಣ್ಯರು ಕೂಡ ನಮಿಸಿದ್ದಾರೆ. ಕರುನಾಡು ಕಂಡ ಅಪರೂಪದ ಜನಾನುರಾಗಿ ಜನನಾಯಕ, ಸಹೃದಯೀ ಕಲಾವಿದ, ರೆಬೆಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಪುಣ್ಯ ಸ್ಮರಣೆಯಂದು ಅನಂತ ಪ್ರಣಾಮಗಳು. ತಮ್ಮ ವ್ಯಕ್ತಿತ್ವ ಹಾಗೂ ಕಲಾ ಸೇವೆಗಳಿಂದ ಜನಮಾನಸದಲ್ಲಿ ವಿಶಿಷ್ಟ ಛಾಪು ಬಿಟ್ಟುಹೋಗಿರುವ ಅವರು ಕನ್ನಡಿಗರ ಪಾಲಿಗೆ ಎಂದಿಗೂ ಅಜರಾಮರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಮರಿಸಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ, ಅಭಿಮಾನಿಗಳ ನೆಚ್ಚಿನ ರೆಬಲ್ ಸ್ಟಾರ್ ಶ್ರೀ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಹೃದಯಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ಸಿನಿಮಾರಂಗಕ್ಕೆ ಅಂಬಿ ಅವರು ನೀಡಿದ ಅನನ್ಯ ಕೊಡುಗೆಗಳು ಸ್ಮರಣೀಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಮಿಸಿದ್ದಾರೆ.
ಮಾಜಿ ಸಂಸದ ಡಿ.ಕೆ.ಸುರೇಶ್ ಕೂಡ ಕನ್ನಡ ಚಿತ್ರರಂಗ ಕಂಡ ಮೇರು ನಟ, ರಾಜಕಾರಣಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವ ನಮನಗಳು. ಶ್ರೀಯುತರು ತಮ್ಮ ನೇರ ನಡೆ ನುಡಿ ಹಾಗೂ ಅತ್ಯುತ್ತಮ ವ್ಯಕ್ತಿತ್ವದ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಕನ್ನಡ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಳನ್ನು ನೆನೆಯುತ್ತಾ ಅವರಿಗೆ ನನ್ನ ಗೌರವ ನಮನಗಳು ಎಂದು ಪೋಸ್ಟ್ ಮಾಡಿದ್ದಾರೆ.
ಅಂಬರೀಶ್ ಅವರೊಂದಿಗೆ ಒಡನಾಟ ಹೊಂದಿದ್ದ ಸಚಿವ ಎಂ.ಬಿ.ಪಾಟೀಲ್ ಅವರು ಕನ್ನಡ ಚಿತ್ರರಂಗದ ಪ್ರತಿಭಾವಂತ ಕಲಾವಿದ, ರೆಬೆಲ್ ಸ್ಟಾರ್ ಡಾ.ಅಂಬರೀಶ್ ಅವರ ಪುಣ್ಯಸ್ಮರಣೆಯಂದು ಗೌರವದ ನಮನಗಳು. ಶಾಸಕರಾಗಿ- ಸಂಸದರಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ನಾಡು, ನುಡಿಗೆ ಅವರು ಸಲ್ಲಿಸಿದ ಸೇವೆಗಳು ಸದಾ ಸ್ಮರಣೀಯ ಎಂದು ಗೌರವ ಸಲ್ಲಿಸಿದ್ದಾರೆ.












Click it and Unblock the Notifications