ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆಗೊಂಡ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ
ಬೆಂಗಳೂರು, ಮಾರ್ಚ್ 31: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರ ಬಂದಂತೆ ಪಕ್ಷಾಂತರ ಪರ್ವ ಹೆಚ್ಚಾಗಿದ್ದು, ಇದೀಗ ಬಿಜೆಪಿಯಲ್ಲಿದ್ದ ಮಾಜಿ ಶಾಸಕ ಜೆಡಿಎಸ್ ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಾರೆ. ಜೆಡಿಎಸ್ ಪಕ್ಷಕ್ಕೆ ಈಗಾಗಲೇ ಹಲವು ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಹಲವು ಮುಖಂಡರು ಜೆಡಿಎಸ್ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ.
ಶುಕ್ರವಾರ ಮಲ್ಲಿಕಾರ್ಜುನ ಖೂಬಾ ಅವರು ಇಂದು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರ ಸಮಕ್ಷಮದಲ್ಲಿ ಮರಳಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಶಾಲು ಹಾಕುವ ಮೂಲಕ ಖೂಬಾ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಶುಭ ಸಮಯ ಇದ್ದ ಕಾರಣಕ್ಕೆ ಮಾಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಗಿ ಖೂಬಾ ಅವರು ತಿಳಿಸಿದ್ದಾರೆ.

ಹಿಂದೆ ಇದೇ ಜೆಡಿಎಸ್ ಪಕ್ಷದಿಂದ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರವನ್ನು ಮಲ್ಲಿಕಾರ್ಜುನ ಖೂಬಾ ಅವರು ಎರಡು ಅವಧಿಗೆ ಪ್ರತಿನಿಧಿಸಿದ್ದರು. ಬಳಿಕ ಬಿಜೆಪಿ ಪಕ್ಷಕ್ಕೆ ಸೇರಿದ್ದರು. ಬಳಿಕ ಬಿಜೆಪಿ ಬಿಟ್ಟು ಜೆಡಿಎಸ್ ಸೇರುವುದಾಗಿ ಈ ಹಿಂದೆಯೇ ಅವರು ಘೋಷಿಸಿದ್ದರು.
ಮಲ್ಲಿಕಾರ್ಜುನ ಖೂಬಾ ಅವರು ಜೆಡಿಎಸ್ ಪಕ್ಷದಲ್ಲಿಯೇ ಇದ್ದರು. ಬಳಿಕ ಬಿಜೆಪಿ ಪಕ್ಷ ಸೇರಿದ್ದರು. ಈಗ ಅವರು ಮರಳಿ ಮನೆಗೆ ವಾಪಸ್ ಆಗಿದ್ದಾರೆ. ಒಳ್ಳೆಯ ಸಮಯ ಇದೆ ಎನ್ನುವ ಕಾರಣಕ್ಕೆ ಬಂದು ಪಕ್ಷಕ್ಕೆ ಸೇರಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಶೀಘ್ರದಲ್ಲಿಯೇ ಅವರು ಪಕ್ಷದ ರಾಜ್ಯದ ಕಚೇರಿಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಮಾಜಿ ಸಚಿವ ಬಂಡೆಪ್ಪ ಕಾಷೆಂಪೂರ್ ಮತ್ತಿತರೆ ಹಿರಿಯ ನಾಯಕರ ಸಮಕ್ಷಮದಲ್ಲಿ ತಮ್ಮ ಬೆಂಬಲಿಗರ ಜತೆ ಪಕ್ಷಕ್ಕೆ ಅಧಿಕೃತವಾಗಿ ಸೇರಿಕೊಳ್ಳಲಿದ್ದಾರೆ ಎಂದು ಎಚ್‌ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.
2018ರ ವಿಧಾನಸಭೆ ಚುನಾವಣೆಗೂ ಮುನ್ನ ನಾನು ಜೆಡಿಎಸ್ ಪಕ್ಷದ ಶಾಸಕನಾಗಿದ್ದೆ. ಬಿಜೆಪಿಯಿಂದ ನನಗೆ ಟಿಕೆಟ್ ನೀಡುವ ಭರವಸೆ ನೀಡಿದ್ದ ಕಾರಣ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿದ್ದೆ. 2018ರ ನನಗೆ ಟಿಕೆಟ್ ನೀಡಿದರೂ ಸಹ ಪಕ್ಷದ ವರಿಷ್ಠರು ಹಾಗೂ ಸ್ಥಳೀಯ ಮುಖಂಡರು ಬೆಂಬಲ ನೀಡಿರಲಿಲ್ಲ ಎಂದು ಕೆಲವು ತಿಂಗಳ ಹಿಂದೆ ಖೂಬಾ ಹೇಳಿದ್ದರು. ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಲ್ಲಿಕಾರ್ಜುನ ಸಿದ್ರಾಮಪ್ಪ ಖೂಬಾರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಲಾಗಿತ್ತು. 2021ರಲ್ಲಿ ಬಿಜೆಪಿ ಪಕ್ಷದಿಂದ ಉಚ್ಚಾಟನೆಗೊಂಡಿದ್ದರೂ ನಾನು ಬಿಜೆಪಿಯಲ್ಲಿಯೇ ಇದ್ದೇನೆ ಎಂದು ಸಿದ್ರಾಮಪ್ಪ ಹೇಳುತ್ತಿದ್ದರು.
ಇತ್ತೀಚೆಗೆ ತುಮಕೂರಿನ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಜೆಡಿಎಸ್ ಮುಖಂಡ ಎಸ್.ಆರ್. ಶ್ರೀನಿವಾಸ್ ಗುರುವಾರ ಕಾಂಗ್ರೆಸ್ಗೆ ಅಧಿಕೃತವಾಗಿ ಸೇರ್ಪಡೆಯಾದ್ದರು. ಇವರೊಂದಿಗೆ ಮೂಡಿಗೆರೆ ಪುರಸಭೆಯ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡರಾದ ಹಾಲಪ್ಪ ಮತ್ತು ಮಂಡ್ಯದ ಬಿಜೆಪಿ ನಾಯಕ ಸತ್ಯಾನಂದ ಅವರೂ ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.
ಅದರಂತೆ ಶಿಗ್ಗಾಂವಿ ಕ್ಷೇತ್ರದ ಮಾಜಿ ಸಂಸದ ಮಂಜುನಾಥ್ ಕುನ್ನೂರು, ಅವರ ಪುತ್ರ ರಾಜು ಕುನ್ನೂರು, ಚಿಂತಾಮಣಿಯ ನಾಯಕರಾದ ಎಂ.ಸಿ. ಸುಧಾಕರ್ ಹಾಗೂ ಕೆ.ಆರ್ ಪೇಟೆ ಕ್ಷೇತ್ರದ ಜೆಡಿಎಸ್ ನಾಯಕ ಶ್ರೀ ಬಿ.ಎಲ್ ದೇವರಾಜು ಅವರು ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್ಗೆ ಸೇರ್ಪಡೆಯಾಗಿದ್ದರು.












Click it and Unblock the Notifications