ಡಿ.ಕೆ.ಶಿವಕುಮಾರ್ ಹೇಳಿಕೆಯಡಿ ರಿಯಲ್ ಎಸ್ಟೇಟ್ ದಂಧೆ ಮಾಡಲು ಹುನ್ನಾರ: ಆರ್.ಅಶೋಕ್
ಬೆಂಗಳೂರು: ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಡಿ.ಕೆ.ಶಿವಕುಮಾರ್ ಹೇಳಿಕೆಯು ಡೆವಲಪರ್‍ಗಳಿಗೆ, ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ದಂಧೆ ಮಾಡಲು ಹುನ್ನಾರ ಎಂದು ಮಾಜಿ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಕುರಿತ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ ಕುರಿತಂತೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು. ಕಾಂಗ್ರೆಸ್ಸಿನ ಹಿರಿಯ ಮುಖಂಡ ಡಿ.ಕೆ.ಶಿವಕುಮಾರ್ ಅವರು ಒಂದಲ್ಲ ನೂರಾರು ಬಾರಿ ಮಾಧ್ಯಮ ಹೇಳಿಕೆ ಕೊಟ್ಟಿದ್ದಾರೆ. ನಾನು ಮೊದಲು ಬಿಸಿನೆಸ್‍ಮ್ಯಾನ್. ರಾಜಕಾರಣ ನನ್ನ ಹವ್ಯಾಸ ಎಂದಿದ್ದಾರೆ. ಅವರು ಏನೇ ಮಾಡಿದರೂ ಬಿಸಿನೆಸ್ ಮೊದಲ ಸ್ಥಾನ ಪಡೆಯುತ್ತದೆ. ಆಮೇಲಿನ ಸ್ಥಾನ ರಾಜಕೀಯಕ್ಕೆ ಎಂದು ತಿಳಿಸಿದರು.

ಬೆಂಗಳೂರಿನಿಂದ ಕಾಂಗ್ರೆಸ್ ಟಿಕೆಟ್ ಪಡೆದು ಗೆದ್ದವರು ಈ ಕುರಿತು ಏನು ಹೇಳುತ್ತಾರೆ ಎಂದು ಪ್ರಶ್ನಿಸಿದ ಅವರು, 110 ಹಳ್ಳಿಗಳನ್ನು ಸುಮಾರು 15 ವರ್ಷಗಳ ಹಿಂದೆ ಬಿಬಿಎಂಪಿಗೆ ಸೇರಿಸಿ ಇನ್ನೂ ಶೇ 30ರಷ್ಟು ಅಭಿವೃದ್ಧಿ ಸಾಧಿಸಲಾಗಿಲ್ಲ. ಇನ್ನೂ ಈ ಪ್ರದೇಶಗಳಿಗೆ ಕಾವೇರಿ ಕುಡಿಯುವ ನೀರು ಕೊಡಲು ಸಾಧ್ಯವಾಗಿಲ್ಲ.
ರಸ್ತೆ, ಬೀದಿದೀಪ ಸೌಕರ್ಯ ಕೊಟ್ಟಿಲ್ಲ. ಅದನ್ನು ಬೆಂಗಳೂರು ಥರ ಮಾಡಲು ಇನ್ನೂ 15 ವರ್ಷ ಬೇಕು. 110 ಹಳ್ಳಿಗಳ ಜನರು ಸಂಕಷ್ಟದಲ್ಲಿದ್ದು, ಹೋರಾಟ ಮಾಡುತ್ತಿದ್ದಾರೆ. ಪ್ರತಿಭಟನೆಗಳೂ ನಡೆಯುತ್ತಿವೆ. ಈಗ ಕನಕಪುರವನ್ನು ಸೇರಿಸುತ್ತೇನೆ ಎನ್ನುತ್ತಾರೆ. ಹಾರೋಹಳ್ಳಿ ದಾಟಿ 10 ಕಿಮೀ ಬಳಿಕ ಕನಕಪುರ ಸಿಗುತ್ತದೆ. ಹಾಗಿದ್ದರೆ ಹಾರೋಹಳ್ಳಿ, ರಾಮನಗರದ ಕಥೆ ಏನು ಎಂದು ಕೇಳಿದರು.

ಏರ್‍ಪೋರ್ಟ್ ಇರುವ ದೇವನಹಳ್ಳಿ ಕಥೆ ಏನು? ಅದು ಗಡಿಯಲ್ಲೇ ಇದೆ. ಹೊಸಕೋಟೆ ಕಥೆ ಏನು? ಎಂದು ಕೇಳಿದರು. ಮುಂದೆ ಸಿಡಿಪಿ ಬರಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸಿಡಿಪಿ 10 ವರ್ಷದಿಂದ ಬಾಕಿ ಇದೆ. ಆ ಸಿಡಿಪಿಯಡಿ ಇದೆಲ್ಲವನ್ನೂ ಸೇರಿಸಿ ಯಾವ್ಯಾವುದು ಹೇಗೆ ಬೇಕೋ ಯೆಲ್ಲೊ, ಗ್ರೀನ್, ಕಮರ್ಷಿಯಲ್, ವಸತಿ ಪ್ರದೇಶ- ಹೀಗೆ ಡೆವಲಪರ್‍ಗಳಿಗೆ ದಂಧೆ ಮಾಡುವ ಹುನ್ನಾರ ಎಂದು ಆರೋಪಿಸಿದರು.
ಕಾಂಗ್ರೆಸ್‍ನವರು ಟಿಪ್ಪು ಅಭಿಮಾನಿಗಳು ಮತ್ತು ಬೆಂಬಲಿಗರು. ನೀವು ಕೂಡ ತುಘಲಕ್‍ನ ದರ್ಬಾರ್ ಮಾಡಿ ಎಂದು ವ್ಯಂಗ್ಯವಾಗಿ ತಿಳಿಸಿದ ಅವರು, ನೀವು ಹೇಗಿದ್ದರೂ 5 ಟಿಎಂಸಿ ಕಾವೇರಿ ನೀರನ್ನು ಸ್ಟಾಲಿನ್‍ಗೆ ಕೊಟ್ಟಿದ್ದೀರಿ. ಕನಕಪುರದಿಂದ ಹತ್ತಿರ ಇರುವ ಆನೇಕಲ್ ಸಮೀಪದ ಹೊಸೂರನ್ನು ಬೆಂಗಳೂರಿಗೆ ಸೇರಿಸಿ. ಈ ಬಗ್ಗೆ ದೋಸ್ತ್ ಸ್ಟಾಲಿನ್ ಜೊತೆ ಮಾತನಾಡಿ, ಅದನ್ನೂ ಸೇರಿಸಿ ಬೆಂಗಳೂರನ್ನು ಹಾಳುಗೆಡಹಲು ಏನೇನು ಹುನ್ನಾರ ಬೇಕೋ ಅದನ್ನು ಮಾಡಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications