ಹಾವೇರಿ ಟಿಕೆಟ್ ಗಾಗಿ ಬಿಜೆಪಿಯಲ್ಲಿ ಫೈಟ್; ಮಗನಿಗೆ ಟಿಕೆಟ್ ಕೊಡಿಸಲು ಈಶ್ವರಪ್ಪ ಕಸರತ್ತು- ಜೋಶಿ ಜೊತೆಗೆ ಚರ್ಚೆ ನಡೆಸಿದ್ದೇನು?
ಹುಬ್ಬಳ್ಳಿ, ಡಿಸೆಂಬರ್ 30: 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಘೋಷಣೆಗೂ ಮೊದಲೇ ಮಾಜಿ ಸಚಿವ ಹಾಗೂ ಕುರುಬ ಸಮುದಾಯದ ನಾಯಕ ಕೆ ಎಸ್ ಈಶ್ವರಪ್ಪ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದರು. ಇದೀಗ ಲೋಕಸಭಾ ಚುನಾವಣೆಯಲ್ಲಿ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಪಣ ತೊಟ್ಟಿದ್ದಾರೆ.
ಹೌದು, ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಕೆ ಎಸ್ ಈಶ್ವರಪ್ಪ ಹಾಗೂ ಮಾಜಿ ಸಚಿವ ಬಿ ಸಿ ಪಾಟೀಲ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಲ್ಲದೇ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ನೀಡಬೇಕು ಎಂದು ಬಹಿರಂಗವಾಗಿಯೇ ಹೇಳಿರುವ ಕೆ ಎಸ್ ಈಶ್ವರಪ್ಪ ಅವರು ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ರಾಜ್ಯ ರಾಜಕಾರಣದಲ್ಲಿ ಫುಲ್ ಆಕ್ಟಿವ್ ಆಗಿದ್ದಾರೆ. ಅಲ್ಲದೇ ಕೆಎಸ್ ಈಶ್ವರಪ್ಪ ಅವರು ಕೇಂದ್ರ ನಾಯಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.

ಶನಿವಾರ ಧಿಡೀರನೆ ಹುಬ್ಬಳ್ಳಿಯ ಮಯೂರಾ ಎಸ್ಟೇಟ್ನಲ್ಲಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸಕ್ಕೆ ಕೆ ಎಸ್ ಈಶ್ವರಪ್ಪ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಹಾವೇರಿ ಲೋಕಸಭೆ ಟಿಕೆಟ್ ಆಕಾಂಕ್ಷಿಯಾಗಿರೋ ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಟಿಕೆಟ್ ಕೊಡಿಸರು ಕಸರತ್ತು ನಡೆಸಿದ್ದಾರೆ. ಹೈಕಮಾಂಡ್ ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಮೂಲಕ ಟಿಕೆಟ್ ಗಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಪ್ರಹ್ಲಾದ್ ಜೋಶಿ ಜೊತೆಗೆ ಹಾವೇರಿ ಟಿಕೆಟ್ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿರುವ ಕೆ ಎಸ್ ಈಶ್ವರಪ್ಪ ಮಗನ ಭವಿಷ್ಯಕ್ಕಾಗಿ ಪಣ ತೊಟ್ಟಿದ್ದಾರೆ.
ಕೆ ಎಸ್ ಈಶ್ವರಪ್ಪ ಭೇಟಿ ವಿಚಾರವಾಗಿ ಮಾಧ್ಯಮಗಳ ಜೊತೆಗೆ ಪ್ರಹ್ಲಾದ್ ಜೋಶಿ ಮಾತನಾಡಿ, ಈಶ್ವರಪ್ಪ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಯಾವುದೋ ಕೆಲಸದ ನಿಮಿತ್ಯ ಹುಬ್ಬಳ್ಳಿಗೆ ಬಂದಿದ್ದರು. ನನ್ನನ್ನು ಭೇಟಿಯಾಗಿ ವಾಪಸ್ ಆಗಿದ್ದಾರೆ, ಸೌಹಾರ್ದಯುತವಾದ ಭೇಟಿಗಾಗಿ ಬಂದಿದ್ದರು. ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿದ್ದಾನೆ. ಟಿಕೆಟ್ ವಿಷಯವನ್ನು ನಾವು ಮತ್ತು ಅವರು ಕೂತು ತೀರ್ಮಾನ ಮಾಡೋಕೆ ಆಗಲ್ಲ. ಟಿಕೆಟ್ ಕೊಡುವ ಅಥವಾ ಬಿಡುವ ವಿಚಾರವನ್ನು ರಾಷ್ಟ್ರೀಯ ನಾಯಕರು ಮಾಡುತ್ತಾರೆ. ಸಮಯ ಸಂದರ್ಭ ಬಂದಾಗ ರಾಷ್ಟ್ರೀಯ ನಾಯಕರು ತೀರ್ಮಾನ ತಗೆದುಕೊಳ್ಳುತ್ತಾರೆ ಎಂದರು.

ಈಶ್ವರಪ್ಪ ಮಗ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಓಡಾಡ್ತಿರೋದು ಸತ್ಯ. ಈಶ್ವರಪ್ಪ ಮಗ ಒಳ್ಳೆಯ ಕಾರ್ಯಕರ್ತನೂ ಇದ್ದಾನೆ, ಕಳೆದ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿಲ್ಲ ಅಂತ ಅನೇಕರು ಪಕ್ಷ ಬಿಟ್ಟಾಗಲು ಈಶ್ವರಪ್ಪ ಇಲ್ಲಿಯೇ ಉಳಿದಿದ್ದಾರೆ. ಪಕ್ಷ ನಿಷ್ಠೆಯಿಂದ ಕೆಲಸ ಮಾಡಿದ್ದಾರೆ, ಇದೀಗ ಅವರ ಪುತ್ರ ಲೋಕಸಭೆ ಚುನಾವಣೆ ತಯಾರಿ ಮಾಡ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ ಟಿಕೆಟ್ ವಿಚಾರವಾಗಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.












Click it and Unblock the Notifications