31 ವರ್ಷದ ಹಳೆ ಕೇಸ್‌ಗೆ ಮರುಜೀವ: ಕಾಂಗ್ರೆಸ್ ಸರ್ಕಾರ ವಿರುದ್ಧ ಕಿಡಿಕಾರಿದ ಶ್ರೀರಾಮುಲು
ಬೆಂಗಳೂರು, ಡಿಸೆಂಬರ್ 02: : 31 ವರ್ಷದ ಬಳಿಕ ರಾಮ ಜನ್ಮಭೂಮಿ ಹೋರಾಟದ ಪ್ರಕರಣಕ್ಕೆ ಮರುಜೀವ ಬಂದಿದ್ದು, ರಾಮ ಜನ್ಮಭೂಮಿ ಹೋರಾಟಗಾರರಿಗೆ ಬಂಧನದ ಭೀತಿ ಶುರುವಾಗಿದೆ. ಮೂರು ದಶಕಗಳ ಹಿಂದೆ ರಾಮಜನ್ಮಭೂಮಿ ಹೋರಾಟದಲ್ಲಿ ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಹುಬ್ಬಳ್ಳಿ ಪೊಲೀಸರು ಅಂದಿನ ಆರೋಪಿಗಳಿಗಾಗಿ ಏಕಾಏಕಿ ಹುಡುಕಾಟ ಆರಂಭಿಸಿದ್ದಾರೆ.
ರಾಜ್ಯ ಸರ್ಕಾರದ ಈ ನಡೆಯನ್ನು ಬಿಜೆಪಿ ಮುಖಂಡರು ವ್ಯಾಪಕವಾಗಿ ವಿರೋಧಿಸಿದ್ದು, ರಾಜ್ಯದ ಕಾಂಗ್ರೆಸ್ ಸರಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ ಕೋಟ್ಯಂತರ ಜನರ ರಾಮಮಂದಿರ ನಿರ್ಮಾಣದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿಜೀ ಅವರು ಈಡೇರಿಸಿದ್ದಾರೆ. ಒಂದೆಡೆ ರಾಮಮಂದಿರ ಉದ್ಘಾಟನೆಗೆ ದಿನ ನಿಗದಿಯಾಗಿದೆ. ಇನ್ನೊಂದು ಕಡೆ ಕಾಂಗ್ರೆಸ್ ಸರಕಾರವು ಸುಮಾರು 31 ವರ್ಷಗಳಷ್ಟು ಹಳೆಯ ಕೇಸುಗಳನ್ನು ತೆಗೆದು ಹಿಂದೂಗಳನ್ನು ಬಂಧಿಸುತ್ತಿದೆ. ಇದು ಹಿಂದೂ ವಿರೋಧಿ ಸರಕಾರ ಎಂದು ಟೀಕಿಸಿದರು.
ಶ್ರೀರಾಮಚಂದ್ರನೇ ಕಾಲ್ಪನಿಕ ಎನ್ನುವ ಕಾಂಗ್ರೆಸ್ಸಿಗರು ಅಯೋಧ್ಯೆಯಲ್ಲಿ ಮಹರ್ಷಿ ವಾಲ್ಮೀಕಿ ದೇವಾಲಯದ ಮಾತನಾಡುತ್ತಾರೆ. ಶ್ರೀರಾಮಚಂದ್ರನೇ ಕಾಲ್ಪನಿಕ ಎಂದಾದರೆ ಮಹರ್ಷಿ ವಾಲ್ಮೀಕಿ ಕುರಿತು ಮಾತನಾಡಲು ನಿಮಗೇನು ಹಕ್ಕಿದೆ ಎಂದು ಪ್ರಶ್ನಿಸಿದ ಅವರು, ಮೋದಿಜೀ ಅವರು ಅಯೋಧ್ಯೆ ವಿಮಾನ ನಿಲ್ದಾಣವನ್ನು ಮಹರ್ಷಿ ವಾಲ್ಮೀಕಿ ವಿಮಾನ ನಿಲ್ದಾಣ ಎಂದು ನಾಮಕರಣ ಮಾಡಿದ್ದಾರೆ ಎಂದು ತಿಳಿಸಿದರು.
ಶ್ರೀರಾಮಮಂದಿರ ನಿರ್ಮಾಣದ ಕುರಿತು ಸಂತಸ ಸೂಚಿಸಿ ದೇಶದ 125 ಕೋಟಿ ಜನರು ಕುಣಿದು ಕುಪ್ಪಳಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಈ ಸರಕಾರವು ದ್ವೇಷ ರಾಜಕಾರಣ ಮಾಡುತ್ತಿದೆ. ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ರೂಪಿಸುವುದಾಗಿ ಎಚ್ಚರಿಕೆ ಕೊಟ್ಟ ಅವರು ದ್ವೇಷ ರಾಜಕಾರಣದ ಮೂಲಕ, ಸೇಡಿನ ರಾಜಕಾರಣದ ಮೂಲಕ ಕಾಂಗ್ರೆಸ್ ಅಂತ್ಯಕಾಲ ಆರಂಭವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.

ಪ್ರಕರಣದ ಹಿನ್ನೆಲೆ ಏನು..?
ರಾಮಜನ್ಮಭೂಮಿ ಹೋರಾಟದ ಸಂದರ್ಭದಲ್ಲಿ 31 ವರ್ಷದ ಬಳಿಕ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ. ಪ್ರಕರಣದ 3ನೇ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಕಳೆದ ಶುಕ್ರವಾರ ಬಂಧಿಸಿ, ನ್ಯಾಯಾಂಗ ವಶಕ್ಕೆ ನೀಡಲಾಗಿದೆ.
ಪ್ರಕರಣ ದಾಖಲಾದಾಗ ಆರೋಪಿತ ವ್ಯಕ್ತಿಗಳು 30ರಿಂದ 35 ವರ್ಷದ ಒಳಗಿನ ಯುವಕರಾಗಿದ್ದರು. ಈಗ ಅವರಿಗೆಲ್ಲ 65-70 ವರ್ಷಗಳಾಗಿವೆ. ರಾಜು ಧರ್ಮದಾಸ್, ಶ್ರೀಕಾಂತ್ ಪೂಜಾರಿ, ಅಶೋಕ್ ಕಲಬುರಗಿ, ಷಣ್ಮುಖ ಕಾಟಗಾರ, ಗುರುನಾಥಸಾ ಕಾಟಿಗಾರ, ರಾಮಚಂದ್ರಸಾ ಕಲಬುರಗಿ ಹಾಗೂ ಅಮೃತ ಕಲಬುರಗಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಕರಸೇವೆಗೂ ಮುನ್ನ ಅಂದರೆ ಡಿಸೆಂಬರ್ 5, 1992 ರಂದು ಹುಬ್ಬಳ್ಳಿ ನಗರದಲ್ಲಿ ಗಲಭೆ ಸಂಭವಿಸಿದ್ದು, ಒಂದು ಮಳಿಗೆಗೆ ಬೆಂಕಿ ಹಚ್ಚಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ವಿರುದ್ಧ ಹುಬ್ಬಳ್ಳಿಯ ಶಹರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಸದ್ಯ ಈ ಹಳೆ ಪ್ರಕರಣಕ್ಕೆ ಮರುಜೀವ ಕೊಡಲು ಹುಬ್ಬಳ್ಳಿ ಪೊಲೀಸರು ಮುಂದಾಗಿದ್ದಾರೆ.












Click it and Unblock the Notifications