ಎಎಪಿಯಿಂದ ಕರ್ನಾಟಕದ ಬದಲಾವಣೆ ಸಾಧ್ಯ; ಭಾಸ್ಕರ್ ರಾವ್
ಬೆಂಗಳೂರು, ಏಪ್ರಿಲ್ 04; ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಸೋಮವಾರ ಎಎಪಿ ಸೇರಿದರು. "ಆಮ್ ಆದ್ಮಿ ಪಾರ್ಟಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ" ಎಂದು ಭಾಸ್ಕರ್ ರಾವ್ ಹೇಳಿದರು.
ದೆಹಲಿಯ ಎಎಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಸ್ಕರ್ ರಾವ್ ಅರವಿಂದ್ ಕೇಜ್ರಿವಾಲ್, ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡರು.
Recommended Video

ಪಕ್ಷ ಸೇರ್ಪಡೆ ಬಳಿಕ ಮಾತನಾಡಿದ ಭಾಸ್ಕರ್ ರಾವ್, "ಹಿಂದೊಮ್ಮೆ ದೆಹಲಿಗೆ ಬಂದಾಗ ಇಲ್ಲಿನ ಟ್ಯಾಕ್ಸಿ ಡ್ರೈವರ್‌ರೊಬ್ಬರು ಸರ್ಕಾರಿ ಶಾಲೆಗಳು ಭಾರೀ ಅಭಿವೃದ್ಧಿ ಹೊಂದಿವೆ ಎಂದು ಹೇಳಿದರು. ನಾನು ಶಾಲೆಗಳನ್ನು ಪರಿಶೀಲಿಸಿದೆ. ಶಾಲೆಗಳಷ್ಟೇ ಅಲ್ಲದೇ ಆರೋಗ್ಯ ಕೇಂದ್ರಗಳು ಕೂಡ ಆಧುನೀಕರಣಗೊಂಡಿರುವುದು ಕಂಡುಬಂದಿತು" ಎಂದರು.

"ಇಲ್ಲಿನ ಸರ್ಕಾರವು ಸಾಮಾನ್ಯ ಜನರಿಗೆ ಅತ್ಯಂತ ಹತ್ತಿರವಾಗಿದೆ. ಕರ್ನಾಟಕದಲ್ಲೂ ಇದೇ ಮಾದರಿಯ ಸರ್ಕಾರ ಆಡಳಿತಕ್ಕೆ ಬರಬೇಕು. ಕರ್ನಾಟಕದ ಗ್ರಾಮ ಪಂಚಾಯತಿಗಳಿಂದ ವಿಧಾನಸೌಧದ ತನಕ ಎಲ್ಲವೂ ಬದಲಾಗಬೇಕಿದೆ" ಎಂದು ಭಾಸ್ಕರ್ ರಾವ್ ತಿಳಿಸಿದರು.
"ಕರ್ನಾಟಕದ ಜನರು ಬದಲಾವಣೆ ಬಯಸುತ್ತಿದ್ದಾರೆ. ಬೆಂಗಳೂರನ್ನು ಜ್ಞಾನದ ರಾಜಧಾನಿ ಎಂದು ಕರೆಯಲಾಗುತ್ತದೆ. ಕರ್ನಾಟಕ ಹಾಗೂ ಬೆಂಗಳೂರು ಉತ್ತಮ ಆಡಳಿತವನ್ನು ಪಡೆಯಲು ಅರ್ಹವಾಗಿದೆ. ಆದರೆ ಆಡಳಿತ ನಡೆಸುವ ರಾಜಕಾರಣಿಗಳು ಸರಿಯಿಲ್ಲದ ಕಾರಣ ಕರ್ನಾಟಕದ ಜನರಿಗೆ ಉತ್ತಮ ರಸ್ತೆ, ಉತ್ತಮ ಶಾಲೆ, ಉತ್ತಮ ಆಸ್ಪತ್ರೆ ಮುಂತಾದ ಸೌಲಭ್ಯಗಳು ಸಿಗುತ್ತಿಲ್ಲ. ಎಎಪಿಯಿಂದ ಮಾತ್ರ ಕರ್ನಾಟಕದ ಬದಲಾವಣೆ ಸಾಧ್ಯ" ಎಂದು ಹೇಳಿದರು.
"ಕರ್ನಾಟಕದಲ್ಲಿ ಎಲ್ಲಾ ರೀತಿಯ ಸಂಪನ್ಮೂಲ ಇದೆ. ಆದರೆ ಸ್ವಚ್ಛ ನಾಯಕತ್ವದ ಕೊರತೆ ಇದೆ. ಈ ಹಿನ್ನಲೆಯಲ್ಲಿ ಎಎಪಿ ಪಕ್ಷವನ್ನು ಸೇರಿದ್ದೇನೆ. ಅರವಿಂದ್ ಕೇಜ್ರಿವಾಲ್ ನಾಯಕತ್ವವನ್ನು ಮೆಚ್ಚಿ ಎಎಪಿ ಸೇರ್ಪಡೆಯಾಗಿದ್ದೇನೆ" ಎಂದರು.
"ಕರ್ನಾಟಕದಲ್ಲಿನ ಜನರು ಮೂರು ಪಕ್ಷಗಳ ಬಗ್ಗೆ ಬೇಸರಗೊಂಡಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಬಹಳ ಹೆಚ್ಚಾಗಿದೆ. ಇದನ್ನು ನೋಡಿ ಜನರು ಅಸಮಾಧಾನಗೊಂಡಿದ್ದಾರೆ. ರಾಜ್ಯದಲ್ಲಿ ಮೂರು ಪಕ್ಷಗಳು ಅಂದರ್ ಬಾಹರ್ ಆಡುತ್ತಿದ್ದಾರೆ. ನಿಜಕ್ಕೂ ಕರ್ನಾಟಕದಲ್ಲಿ ಜನರಿಗೆ ಬದಲಾವಣೆ ಬೇಕಾಗಿದೆ" ಎಂದು ಭಾಸ್ಕರ್ ರಾವ್ ತಿಳಿಸಿದರು.
"ಬೆಂಗಳೂರು ಅಂತರಾಷ್ಟ್ರೀಯ ಮಟ್ಟದ ನಗರವಾಗಿದೆ. ಆದರೆ ಅಲ್ಲಿನ ದುರಾಳಿತದಿಂದ ಬೆಳವಣಿಗೆ ಆಗುತ್ತಿಲ್ಲ. ನಾನು ಇದಕ್ಕಾಗಿ ಅಧಿಕಾರಿಗಳ ವರ್ಗವನ್ನು ದೂರುವುದಿಲ್ಲ. ರಾಜಕೀಯ ನಾಯಕತ್ವ ಸರಿಯಾಗಿಲ್ಲದ ಕಾರಣ ಹೀಗಾಗುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಸುಧಾರಣೆ ಆಗಬೇಕು ಎಂಬ ಹಿನ್ನಲೆಯಲ್ಲಿ ನಾನು ಆಮ್ ಆದ್ಮಿ ಪಕ್ಷ ಸೇರಿದ್ದೇನೆ" ಎಂದರು.
ಮನೀಷ್ ಸಿಸೋಡಿಯಾ ಮಾತನಾಡಿ, "ಶಿಕ್ಷಣ, ಆರೋಗ್ಯ, ಉದ್ಯೋಗ, ಸಾರಿಗೆ ಇನ್ನಿತರೆ ಕ್ಷೇತ್ರದಲ್ಲಿ ದೆಹಲಿಯ ಕೇಜ್ರಿವಾಲ್ ಸರ್ಕಾರ ತಂದಿರುವ ಬದಲಾವಣೆಯನ್ನು ಭಾಸ್ಕರ್ ರಾವ್‌ರವರು ಗಮನಿಸುತ್ತಿದ್ದರು. ದೆಹಲಿಯಲ್ಲಾಗಿರುವ ಬದಲಾವಣೆಯು ದೇಶದೆಲ್ಲೆಡೆ ವಿಸ್ತರಿಸಬೇಕೆಂದು ಅವರು ಬಯಸಿದರು. ಆದ್ದರಿಂದಲೇ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ" ಎಂದು ಹೇಳಿದರು.
"ಭಾಸ್ಕರ್‌ರಾವ್ ಪೊಲೀಸ್ ಕಮಿಷನರ್ ಆಗಿದ್ದರು ಜನಸಾಮಾನ್ಯರ ಕಮಿಷನರ್ ಎಂದೇ ಖ್ಯಾತರಾಗಿದ್ದರು. ಇವರ ಸೇರ್ಪಡೆಯಿಂದ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಪಕ್ಷ ಇನ್ನಷ್ಟು ಬಲಗೊಳ್ಳುವ ವಿಶ್ವಾಸವಿದೆ" ಎಂದು ಮನೀಷ್ ಸಿಸೋಡಿಯಾ ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನ ಬಸವನಗುಡಿ ಮೂಲದ ಭಾಸ್ಕರರಾವ್ 1990ನೇ ಬ್ಯಾಚ್ ಐಪಿಎಸ್ ಅಧಿಕಾರಿ. ಇನ್ನೂ ಮೂರು ವರ್ಷಗಳ ಸೇವೆ ಬಾಕಿ ಇರುವಂತೆಯೇ ಸ್ವಯಂ ನಿವೃತ್ತಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಒಪ್ಪಿಗೆ ಸಿಕ್ಕ ಬಳಿಕ ಅವರ ರಾಜೀನಾಮೆ ಅಂಗೀಕಾರವಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ.












Click it and Unblock the Notifications