ಬೇಷರತ್ತಾಗಿ ಬಿಜೆಪಿ ಸೇರಲಿರುವ ಶಂಕರ ಬಿದರಿ!
ಬೆಂಗಳೂರು, ಡಿ. 30 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಸೇರುವುದು ಖಾತ್ರಿಯಾಗಿದೆ. ಸದ್ಯ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ ಬಿದರಿ ಬೇಷರತ್ ಆಗಿ ಬಿಜೆಪಿ ಸೇರುವ ತಯಾರಿ ನಡೆಸಿದ್ದಾರೆ. ಮೂರ್ನಾಲ್ಕು ದಿನ ಗಳಲ್ಲಿ ಶಂಕರ ಬಿದರಿ ಬಿಜೆಪಿಗೆ ಸೇರುವ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ರಾಜಕಾರಣಕ್ಕೆ ಬಂದ ಕೆಲವು ತಿಂಗಳುಗಳಲ್ಲಿ ಕಾಂಗ್ರೆಸ್, ಸಮಾಜವಾದಿ ಪಕ್ಷಗಳನ್ನು ತೊರೆದಿದ್ದ ನಿವೃತ್ತ ರಾಜ್ಯ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಮುಂದೆ ಯಾವ ಪಕ್ಷ ಸೇರುತ್ತಾರೆ ಎಂಬ ಕುತೂಹಲವಿತ್ತು. ಅಂತಿಮವಾಗಿ ಅವರು ಬಿಜೆಪಿ ಸೇರ್ಪಡೆಯಾಗುವ ನಿರೀಕ್ಷೆಯಿದೆ. [ಶಂಕರ ಬಿದರಿ ಚಿತ್ತ ಕಮಲ ಪಕ್ಷದತ್ತ]

ಬಿಜೆಪಿಗೆ ಬಿದರಿ ಯಾವುದೇ ಷರತ್ತು ಇಲ್ಲದೇ ಸೇರುವ ಸಾಧ್ಯತೆ ಇದೆ. ಮೊದಲು ಬಿದರಿ ಬಾಗಲಕೋಟೆ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸದ್ಯ ತಮ್ಮ ಬೇಡಿಕೆ ವಾಪಸ್ ಪಡೆದು ಬಿಜೆಪಿ ಸೇರುಲಿದ್ದಾರೆ ಎಂದು ತಿಳಿದು ಬಂದಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಬಿದರಿ ತಮ್ಮ ನಿರ್ಧಾರ ಪ್ರಕಟಿಸಲಿದ್ದಾರೆ.
ಶಂಕರ ಬಿದರಿ ಬಿಜೆಪಿಗೆ ಸೇರುವ ಸುದ್ದಿ ಹಳೆಯದಾದರೂ ಅವರು ಬೇಷರತ್ ಆಗಿ ಪಕ್ಷ ಸೇರಲಿದ್ದಾರೆ ಎಂಬ ಸುದ್ದಿ ಹೊಸದು. ಕಳೆದ ಕೆಲವು ತಿಂಗಳಿನಿಂದಲೇ ಬಿದರಿ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿದ್ದರು. ಆದರೆ, ಬಾಗಲಕೋಟೆ ಕ್ಷೇತ್ರದ ಟಿಕೆಟ್ ಬೇಡಿಕೆಯಿಂದ ಈ ಮಾತುಕತೆ ವಿಫಲವಾಗಿತ್ತು. [ಕೈ ತಪ್ಪಿದ ಎಸ್ ಪಿ ರಾಜ್ಯಾಧ್ಯಕ್ಷ ಸ್ಥಾನ]
ಬಾಗಲಕೋಟೆ ಕ್ಷೇತ್ರದಲ್ಲಿ ಹಾಲಿ ಸಂಸದ ಪಿ.ಸಿ.ಗದ್ದಿಗೌಡರ್ ಅವರ ಹೊರತಾಗಿ ಬೇರೆಯವರಿಗೆ ಟಿಕೆಟ್ ನೀಡುವ ಆಲೋಚನೆ ಬಿಜೆಪಿ ನಾಯಕರ ಮುಂದಿಲ್ಲ. ಮಾಜಿ ಸಚಿವ ಮುರುಗೇಶ್ ನಿರಾಣಿ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದ್ದರಿಂದ ಬಿದರಿ ಅವರೊಂಗಿಗೆ ಮಾತುಕತೆ ನಡೆಸಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಸಚಿವ ಗೋವಿಂದ್ ಕಾರಜೋಳ, ಲೋಕಸಭೆ ಚುನಾವಣೆ ಟಿಕೆಟ್ ನೀಡುವುದು ಕಷ್ಟ. ಬೇಷರತ್ ಆಗಿ ಪಕ್ಷ ಸೇರುವದಾದದರೆ ಬನ್ನಿ ಎಂದು ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ತಮ್ಮ ಷರತ್ತು ಬದಿಗೊತ್ತಿ ಬಿಜೆಪಿ ಸೇರಲು ಬಿದರಿ ತೀರ್ಮಾನಿಸಿದ್ದಾರೆ.
ಈ ಮಧ್ಯೆ ಶಂಕರ ಬಿದರಿ ಆಮ್ ಆದ್ಮಿ ಪಕ್ಷದತ್ತಲೂ ಒಲವು ಹೊಂದಿದ್ದರು ಎಂದು ತಿಳಿದು ಬಂದಿದೆ. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಎಲ್ಲರ ನಿರೀಕ್ಷೆ ಹುಸಿ ಮಾಡಿ ಅಧಿಕಾರದ ಗದ್ದುಗೆ ಏರಿರುವುದರಿಂದ ಬಿದರಿ ಆಮ್ ಆದ್ಮಿ ಪಕ್ಷ ಸೇರಲು ಬಯಸಿದ್ದರು. ಆದರೆ, ಕರ್ನಾಟಕದಲ್ಲಿ ಆಮ್ ಆದ್ಮಿ ಪಕ್ಷ ಹೆಚ್ಚು ಪ್ರಭಾವ ಹೊಂದಿಲ್ಲ. ಆದ್ದರಿಂದ ತಮ್ಮ ನಿರ್ಧಾರ ಕೈಬಿಟ್ಟು ಬಿದರಿ ಬಿಜೆಪಿ ಸೇರಲು ಸಿದ್ಧತೆ ನಡೆಸಿದ್ದಾರೆ.












Click it and Unblock the Notifications