ಬಸವ ಜಯಂತಿ: ರಾಹುಲ್ ಎದುರು ಸಿದ್ದರಾಮಯ್ಯ ಭಾಷಣಕ್ಕೆ ಸಿಗದ ಅವಕಾಶ; ಕಾಂಗ್ರೆಸ್‌ನಲ್ಲಿ ಬಣ ರಾಜಕೀಯ?
2023ರ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹೊತ್ತಿನಲ್ಲಿಯೇ ರಾಜ್ಯಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಆಗಮಿಸಿದ್ದಾರೆ. ಭಾನುವಾರ, ಏಪ್ರಿಲ್ 23ರಂದು ಕೂಡಲಸಂಗಮದಲ್ಲಿ ಬಸವ ವೇದಿಕೆ ಅಡಿಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಹುಲ್ ಗಾಂಧಿ ಅವರು ಭಾಗಿಯಾಗಿದ್ದ ಕಾರ್ಯಕ್ರಮವನ್ನು ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಆಯೋಜಿಸಿಲ್ಲವಾದರೂ, ವೇದಿಕೆಯಲ್ಲಿ ಕಾಂಗ್ರೆಸ್ ನಾಯಕರೇ ಹೆಚ್ಚಾಗಿ ಇದ್ದರು. ಇದೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಹಾಜರಿದ್ದರು.

ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರೂ ಸಿದ್ದರಾಮಯ್ಯ ಅವರಿಗೆ ಭಾಷಣ ಮಾಡುವ ಅವಕಾಶ ಸಿಕ್ಕಿಲ್ಲ. ಕಾರ್ಯಕ್ರಮದ ವೇದಿಕೆ ಮೇಲಿದ್ದವರಲ್ಲಿ ಇಬ್ಬರು ಸ್ವಾಮೀಜಿಗಳು ಹಾಗೂ ರಾಹುಲ್ ಗಾಂಧಿ ಅವರಿಗೆ ಮಾತ್ರ ಭಾಷಣ ಮಾಡಲು ಅವಕಾಶ ನೀಡಲಾಗಿತ್ತು.
ರಾಹುಲ್ ಗಾಂಧಿ ಜೊತೆ ವೇದಿಕೆ ಹಂಚಿಕೊಂಡಿದ್ದರೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಭಾಷಣ ಮಾಡಲು ಅವಕಾಶ ನೀಡಲಾಗಿಲ್ಲ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಹುಟ್ಟು ಹಾಕಿದ್ದು, ಸಮಯದ ಕಾರಣವೋ? ಅಥವಾ ಕಾಂಗ್ರೆಸ್‌ನ ಬಣ ರಾಜಕೀಯವೋ? ಎಂಬ ಅನುಮಾನ ಮೂಡಿದೆ.

ಪ್ರಸ್ತುತ ವಿಧಾನಸಭೆ ಚುನಾವಣೆಯಲ್ಲಿ ಅಧಿಕಾರಕ್ಕೇರಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಇದಕ್ಕಾಗಿ ಲಿಂಗಾಯತ ಸಮುದಾಯ ಸೆಳೆಯಲು ರಾಹುಲ್ ಗಾಂಧಿಯನ್ನು ಕೂಡಲಸಂಗಮಕ್ಕೆ ಕರೆತರಲಾಗಿದೆ. ಇದಕ್ಕೂ ಮುನ್ನ ಬಿಜೆಪಿ ತ್ಯಜಿಸಿದ್ದ ಲಿಂಗಾಯತ ನಾಯಕರಾದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯಂತಹವರನ್ನು ತಮ್ಮ ಪಕ್ಷಕ್ಕೆ ಸೆಳೆದಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಅವರ ಭ್ರಷ್ಟ ಲಿಂಗಾಯತ ಮುಖ್ಯಮಂತ್ರಿಗಳು ಎಂಬ ಹೇಳಿಕೆ ಕಾಂಗ್ರೆಸ್ ಪ್ರಯತ್ನಕ್ಕೆ ಡ್ಯಾಮೇಜ್ ಆಗುವಂತೆ ಮಾಡಿದೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಾಯಕರು ಭಾಷಣ ಮಾಡಲು ಅವಕಾಶ ನೀಡಲಿಲ್ಲವೇ ಎಂಬ ಪ್ರಶ್ನೆ ಕಾಡುತ್ತಿದೆ.

ತಮ್ಮ ನೆಚ್ಚಿನ ನಾಯಕನ ಭಾಷಣಕ್ಕಾಗಿ ಕಾದು ಕುಳಿತ್ತಿದ್ದ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ಒಂದು ವೇಳೆ ಸಿದ್ದರಾಮಯ್ಯರಿಗೆ ಭಾಷಣ ಮಾಡಲು ಅವಕಾಶ ನೀಡಿದ್ದರೆ, ಭ್ರಷ್ಟ ಲಿಂಗಾಯತ ಸಿಎಂಗಳು ಹೇಳಿಕೆಗೆ ಸ್ಪಷ್ಟೀಕರಣ ನೀಡುತ್ತಿದ್ದರು. ಆದರೆ ರಾಹುಲ್ ಗಾಂಧಿ ಮತ್ತು ಇಬ್ಬರು ಸ್ವಾಮೀಜಿಗಳಿಗೆ ಮಾತ್ರ ಭಾಷಣಕ್ಕೆ ಅವಕಾಶ ನೀಡಲಾಗಿದೆ.
ಕಾಂಗ್ರೆಸ್‌ನ ಸಿಎಂ ಆಕಾಂಕ್ಷಿಗಳಲ್ಲಿ ಒಬ್ಬರಾಗಿರುವ ಸಿದ್ದರಾಮಯ್ಯರಿಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾರೀ ಪೈಪೋಟಿ ನೀಡುತ್ತಿದ್ದಾರೆ. ಕಾಂಗ್ರೆಸ್‌ನ ಹಲವು ನಾಯಕರು ಸಿದ್ದರಾಮಯ್ಯ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬುದು ಗಮನಾರ್ಹ.
ಸದ್ಯ ತಮ್ಮ ಹೇಳಿಕೆಯಿಂದ ಉಂಟಾದ ವಿವಾದವನ್ನು ತಣಿಸಲು ಸಿದ್ದರಾಮಯ್ಯ ಮುಂದಾಗಿದ್ದು, ಕೂಡಲಸಂಗಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದರು. "ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಲಿಂಗಾಯತ ಸಮುದಾಯದಿಂದ ಒಳ್ಳೆಯ ಮುಖ್ಯಮಂತ್ರಿಗಳಾಗಿದ್ದರು," ಎಂದರು.
"ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ ಅವರಂತಹ ಲಿಂಗಾಯತ ನಾಯಕರು ಕಾಂಗ್ರೆಸ್ನಿಂದ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದ್ದಾರೆ. ಆದರೆ, ಬಿಜೆಪಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಭ್ರಷ್ಟರಾಗಿದ್ದಾರೆ ಎಂದು ಹೇಳಿದ್ದೇನೆ, ಲಿಂಗಾಯತ ಜಾತಿ ಬಗ್ಗೆ ನಾನು ಹೇಳಿಲ್ಲ," ಎಂದು ಸ್ಪಷ್ಟನೆ ನೀಡಿದರು.
ಮತ್ತೊಂದೆಡೆ, ಸಿದ್ದರಾಮಯ್ಯನವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿರುವ ಬಿಜೆಪಿ, ಹೇಳಿಕೆ ಹಿಂಪಡೆದು ಕ್ಷಮೆ ಕೋರುವಂತೆ ಒತ್ತಾಯಿಸಿದೆ.
ಈ ಹಿಂದೆ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯಲು ಯತ್ನಿಸಿದ ಸಿದ್ದರಾಮಯ್ಯ, ಈಗ ಲಿಂಗಾಯತ ಸಮುದಾಯದವರೆಲ್ಲ ಭ್ರಷ್ಟರು, ರಾಜ್ಯವನ್ನು ಹಾಳುಗೆಡವುವವರು ಎಂದು ದ್ವೇಷಪೂರಿತ ಹೇಳಿಕೆ ನೀಡಿರುವುದು ಅಪರಾಧ. ಬಸವಣ್ಣನ ಆದರ್ಶ ಪಾಲಿಸುವ 7 ಕೋಟಿ ಕನ್ನಡಿಗರು ಸಿದ್ದರಾಮಯ್ಯರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಆಕ್ರೋಶ ವ್ಯಕ್ತಪಡಿಸಿದೆ.












Click it and Unblock the Notifications